ಕಲ್ಪ ಮೀಡಿಯಾ ಹೌಸ್
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಪಂ ವ್ಯಾಪಿಯ ಬಳೇಅತ್ತಿಕುಪ್ಪೆ ಗ್ರಾಮದ ಮೂರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆಗೆ ಸಂಬಂಧಪಟ್ಟಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಮ್. ಎಲ್. ಪರಶುರಾಮ್ ಮತ್ತು ಎಚ್. ಸಿ. ರಾಘವೇಂದ್ರ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಂತರ ಮಕ್ಕಳು ಸಾವನಪ್ಪಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ, ಹಿರೇಮರಳಿ ಗ್ರಾಮ ಪಂಚಾಯಿತಿಯಲ್ಲಿ ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ಹಿಂದೆ ಜಿಲ್ಲಾಡಳಿತಕ್ಕೆ ಆಯೋಗವು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿಹೊಂಡಗಳಿಗೆ ರಕ್ಷಣೆಯ ವ್ಯವಸ್ಥೆ ಮತ್ತು ಮಕ್ಕಳು ಬೀಳದ ಹಾಗೆ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಆದರೆ ಈ ಪ್ರಕರಣವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ ಎನ್ನಲಾಗಿದೆ.
ಮಕ್ಕಳು ಈ ದೇಶದ ಆಸ್ತಿ ಮಕ್ಕಳ ಸಾವುಗಳು ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ನರೇಗಾ ಯೋಜನೆ ಅಡಿಯಲ್ಲಿ ಕೈಗೊಂಡ ಕೃಷಿಹೊಂಡಗಳಿಗೆ ಮಕ್ಕಳು ಬಿಳದಂತೆ ಸುರಕ್ಷಿತ ಕ್ರಮಕೈಗೊಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ ಈ ಕುರಿತು ಆಯೋಗದ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾಗೂ ಈಗಾಗಲೇ ಸ್ಥಾಪಿತ ಕೃಷಿ ಹೊಂಡಕ್ಕೆ ತಡೆಗೋಡೆ ಅಥವಾ ಸುರಕ್ಷಿತ ಕ್ರಮವನ್ನು ಕೈಗೊಳ್ಳಲು ಜಿಲ್ಲಾ ಆಡಳಿತಕ್ಕೆ ಸೂಚಿಸಲಾಯಿತು.
ಮುಂಜಾಗೃತ ಕ್ರಮವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಡಂಗೂರ ಸಾರಿಸಿ, ಮಕ್ಕಳು ಸಾವಿಗೆ ತುತ್ತಾಗದಂತೆ ಕ್ರಮಕೈಗೊಳ್ಳಲು ಸೂಚಿಸಲಾಯಿತು. ಸಂತ್ರಸ್ತ ಕುಟುಂಬಸ್ಥರಿಗೆ ಶೀಘ್ರವಾಗಿ ಪರಿಹಾರವನ್ನೂ ವಿತರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲು ಇದೇ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸಲಹೆ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post