ಮಂಗಳೂರು: ಹವ್ಯಕ ಸಾಹಿತ್ಯ ಮತ್ತು ಭಾಷಾ ಬೆಳವಣಿಗೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಬಂಟ್ವಾಳ ತಾಲೂಕಿನ ಸಜಿಪನಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದೆ.
ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಹಳೆಮನೆ ಅವರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತುಫೈಲ್ ಅವರಿಗೆ 25 ಸಾವಿರ ಮೌಲ್ಯದ ಇಸಿಜಿ ಯಂತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕೃಷ್ಣಶರ್ಮ ಹಳೇಮನೆ ಅವರು, ಪ್ರತಿಷ್ಠಾನವು, ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇಸಿಜಿ ಯಂತ್ರದಿಂದ ಗ್ರಾಮೀಣ ಭಾಗದಲ್ಲಿ ಜನರ ಹೃದ್ರೋಗ ಪರೀಕ್ಷೆ ಸುಲಭವಾಗಲಿದೆ. ಸಜಿಪನಡು ಭಾಗದ ಜನರಿಗೆ ಇದರಿಂದ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.
ಕೆಎಂಸಿಯ ಹೃದ್ರೋಗ ತಜ್ಞ ಡಾ. ಪದ್ಮನಾಭ್ ಕಾಮತ್ ಅವರು ಆರಂಭಿಸಿರುವ ‘ಹೃದಯ ತಜ್ಞರು ನಿಮ್ಮ ಮನೆ ಬಾಗಿಲಿಗೆ ಎಂಬ ಅಭಿಯಾನದ ಭಾಗವಾಗಿ ಪ್ರತಿಷ್ಠಾನ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದೆ.
ಸಜಿಪನಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ 80-100 ರೋಗಿಗಳು ಆರೋಗ್ಯ ತಪಾಸಣೆಗೆ ಬರುತ್ತಿದ್ದು, ಇಸಿಜಿ ಯಂತ್ರದಿಂದಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ಪತ್ತೆ ಮಾಡುವುದು ಸಾಧ್ಯವಾಗಲಿದೆ.
ಪ್ರತಿಷ್ಠಾನದ ಕಿಶೋರ್ ಏನಂಕೂಡ್ಳು ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.
Discussion about this post