ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸಹಚೇತನ ನಾಟ್ಯಾಲಯದ ವತಿಯಿಂದ ಡಿ.30 ಹಾಗೂ ಜನವರಿ 1ರಂದು ಕರ್ನಾಟಕ ಸಂಘದಲ್ಲಿ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಾರತೀಯ ಸಂಸ್ಕೃತಿಯ ದ್ಯೋತಕವೆನ್ನಲಾಗುವ ನೃತ್ಯ ಕಲೆಗಳು ಕಲಾವಿದರಿಗಷ್ಟೇ ಅಲ್ಲದೆ ಕಲಾಸ್ವಾದಕರಿಗೂ ಮೈಮನನವಿರೇಳಿಸುವ ವಿಶಿಷ್ಟವಾದ ಮಣಿಪುರಿ ಸಮರ ಕಲೆಗಳಾದ ಪೂಂಗ್ ಚೋಲೋಂ, ಕರತಾಲ್ ಚೋಲೋಮ್, ಸ್ಟಿಕ್ ಬ್ಯಾಲೆನ್ಸ್ ಹಾಗೂ ಬ್ಲೈಂಡ್ ಫೋಲ್ಡ್‌ಗಳನ್ನು ವಿಶೇಷವಾಗಿ ಕಲಾ ರಸಿಕರಿಗೆಂದೇ ನಾಟ್ಯಾರಾಧನಾ -11ರ ರಾಷ್ಟ್ರೀಯ ನೃತ್ಯ ಮಹೋತ್ಸವದ ಉತ್ತರಾರ್ಧ ರೂಪದಲ್ಲಿ ನೆರವೇರುತ್ತಿದೆ. ಈ ನರ್ತನ ಕಲೆಯನ್ನು ಮಣಿಪುರ ರಾಜ್ಯದ ಮೂಲ ಕಲಾವಿದರೇ ಶಿವಮೊಗ್ಗೆಗೆ ಆಗಮಿಸಿ ಪ್ರದರ್ಶಿಸುತ್ತಿರುವುದು ವಿಶೇಷ.
ಮಣಿಪುರ ರಾಜ್ಯದ ಲೋಯಲಕ್ಪ ಮಣಿಪುರಿ ಡಾನ್ಸ್ ಗ್ರೂಪ್‌ನ ಚನ್ನಂಬಂ ಪ್ರದೀಪ್ ಸಿಂಗ್‌ರವರು ತಮ್ಮ ತಂಡದೊಂದಿಗೆ ಇದನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಡಿಸೆಂಬರ್ 30 ಶುಕ್ರವಾರ ಸಂಜೆ 6ಕ್ಕೆ ನಗರದ ಕರ್ನಾಟಕ ಸಂಘದಲ್ಲಿ ಈ ಕಲೆಯು ಪ್ರದರ್ಶನಗೊಳ್ಳಲಿದೆ. ಇದರ ಉದ್ಘಾಟನೆಯನೆಯನ್ನು ಶಿವಮೊಗ್ಗೆಯ ಅಪರ ಜಿಲ್ಲಾಧಿಕಾರಿಗಳಾದ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ವಲಯ ಜಂಟಿ ನಿರ್ದೇಶಕ ಅಶೋಕ್ ಎನ್. ಛಲವಾದಿ, ಸಹಾಯಕ ನಿರ್ದೇಶಕರಾದ ಉಮೇಶ್ ಹಾಲಾಡಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯ ಪ್ರಭಾಕರ ಪಿ. (ಪ್ರಭು) ಭಾಗವಹಿಸಲಿದ್ದಾರೆ.
ಜನವರಿ 1 ಭಾನುವಾರದಂದು ಭಾರತೀಯಂ-12 ಕಾರ್ಯಕ್ರಮದಲ್ಲಿ ಹಿಂದುಳಿದ ಬಡಾವಣೆಯ ಹಾಗೂ ಆಯ್ದ ಸರ್ಕಾರಿ ಶಾಲಾ ಮಕ್ಕಳಿಂದ ದೇಶಭಕ್ತಿಗೀತೆಗಳಿಗೆ ನೃತ್ಯ ಪ್ರದರ್ಶನಗೊಳ್ಳಲಿದೆ. ಸುಮಾರು 5 ಬಡಾವಣೆಯ 130 ಮಂದಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಎಲೆಮರೆಕಾಯಿಯಂತೆ ಅವಿರತವಾಗಿ ಸೇವೆಗೈಯುತ್ತಿರುವ ಇಬ್ಬರು ಸಮಾಜ ಮುಖಿ ಜೀವಿಗಳಿಗೆ ಹಾಗೂ ಒಂದು ಸಂಸ್ಥೆಗೆ ಹಿಂದೂ ಸೇವಾ ಪ್ರತಿಷ್ಠಾನದ ಶ್ರೀ ಅಜಿತ್ ಕುಮಾರ್‌ರವರ ಹೆಸರಿನ ಅಡಿಯಲ್ಲಿ ಸೇವಾ ದಿನದ ಅಂಗವಾಗಿ ಅಜಿತಶ್ರೀ ಪುರಸ್ಕಾರ್-2022 ನೀಡಿ ಗೌರವಿಸಲಾಗುತ್ತಿದೆ. ಈ ಬಾರಿಯ ಪುರಸ್ಕಾರವನ್ನು ಸಮಾಜ ಸೇವಕರಾದ ಶ್ರೀ ಕೊಡಕ್ಕಲ್ ಶಿವಪ್ರಸಾದ್, ಯೋಗಾಚಾರ್ಯರಾದ ಶ್ರೀನಿವಾಸ ಮೂರ್ತಿ ಹಾಗೂ ಆರೋಗ್ಯ ಸೇವಾ ಸಂಸ್ಥೆಯಾದ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ನೀಡಲಾಗುತ್ತಿದೆ. ಕಳೆದ 11 ವರ್ಷದಲ್ಲಿ 22 ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದು ಇಂದಿಗೂ ತಮ್ಮ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನವನ್ನು ಸನ್ಮಾನ್ಯ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಿವಮೊಗ್ಗ ನಗರದ ಶಾಸಕರಾದ ಕೆ. ಎಸ್. ಈಶ್ವರಪ್ಪನವರು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್, ಕನ್ನಡ ಸಂಸ್ಕೃತಿ ಇಲಾಖೆಯ ಮಾನ್ಯ ವಲಯ ಜಂಟಿ ನಿರ್ದೇಶಕ ಅಶೋಕ್ ಎನ್. ಛಲವಾದಿ, ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಭಾಗವಹಿಸಲಿದ್ದಾರೆ. ಈ ಎರಡೂ ಕಾರ್ಯಕ್ರಮಕ್ಕೆ ಶಿವಮೊಗ್ಗೆಯ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರವಿದೆ.
ಈ ಎರಡೂ ಕಾರ್ಯಕ್ರಮಗಳು ನಗರದ ಕರ್ನಾಟಕ ಸಂಘದಲ್ಲಿ ಸಂಜೆ 6ಕ್ಕೆ ಸರಿಯಾಗಿ ನೆರವೇರಲಿದ್ದು ಆಡಳಿತ ಪಕ್ಷದ ನಾಯಕರು ಹಾಗೂ ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷರು ಆದ ಎಸ್. ಎನ್. ಚನ್ನಬಸಪ್ಪ (ಚನ್ನಿ) ಹಾಗೂ ನೃತ್ಯ ಗುರು ಸಹನಾ ಚೇತನ್ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಲಾರಸಿಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕೆಂದು ಎಸ್. ಎನ್. ಚನ್ನಬಸಪ್ಪ (ಚನ್ನಿ) ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post