ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆಧ್ಯಾತ್ಮಿಕ ಬೆಳವಣಿಗೆ, ಭೌತಿಕ ಸಮೃದ್ಧಿಗೆ ಕಾರಣ. ಜ್ಞಾನದಿಂದ, ಧರ್ಮದಿಂದ ಮುನ್ನಡೆಯುವುದೇ ಪ್ರಗತಿ. ಗುಣಾತ್ಮಕ ಬೆಳವಣಿಗೆಯೇ ಅಭಿವೃದ್ಧಿ. ದೇವರೆಡೆಗೆ ಸಾಗುವುದೇ ಪುರೋಗಾಮಿ. ಸುಖ ಸಮಾಧಾನಗಳೇ ಸಮೃದ್ಧಿ- ಇಂತಹಾ ಸರಳೋಪಾಯ ಹೇಳಿಕೊಟ್ಟು ಸಾಮಾನ್ಯರ ಬದುಕನ್ನೂ ಪಾವನ ಗೊಳಿಸಿದ ಸಂತ ಶ್ರೇಷ್ಠರೇ ಶ್ರೀ ರಾಘವೇಂದ್ರ ಸ್ವಾಮಿಗಳು.
ಇಂದು ರಾಯರ ಹೆಸರನ್ನು ಕೇಳದವರೇ ಅತಿ ವಿರಳ.
ರಾಯರು ಎಂದರೆ ಧೀಮಂತಿಕೆಯ ರಾಷ್ಟ್ರಸಂತ. ವಿಶ್ವವ್ಯಾಪಿ ಮನ್ನಣೆ ಪಡೆದ ಕೀರ್ತಿವಂತ. ಜೀವನದಲ್ಲಿ ನೊಂದು ಬೆಂದವರಿಗೆ ವಸಂತ. ಅವರು ಜೀವನದ ಸಾರ್ಥಕ ಕ್ಷಣಗಳ ಉದ್ದಕ್ಕೂ ಮಾಡಿದ್ದು ಮಹಾ ಸಾಧನೆ, ಅವರ ನೆನೆಯುವುದೇ ಇಂದು ಭಕುತ ಕೋಟಿಗೆ ದೊಡ್ಡ ಸಾಧನ. ಭವ ಜೀವಿಗಳ ದೃಷ್ಟಿಯಿಂದ ಕಣ್ಮರೆಯಾಗಿ 3 ಶತಮಾನ ಕಳೆದರೂ ಮಧ್ವ ಮುನಿಯ ಮುದ್ದು ಕುವರ ಕರೆದಲ್ಲಿಗೆ ಬರುವಷ್ಟು ದಯಾಮಯಿ. ಹಾಗಾಗಿ ಬಹು ದೊಡ್ಡ ಭಕ್ತಗಣ ಅವರನ್ನು ‘ಕಾಮಧೇನು…’ ಎಂದು ಕರೆದು ಧನ್ಯತೆ ಮೆರೆಯಿತು.
ರಾಯರೆಂದರೆ ಯಾರು ಬಲ್ಲಿರಾ
ರಾಯರೆಂದರೆ ಭವದ ಕಡದ ಕಡಲು ದಾಟಿಸಲು ನಿಂತ ಹರಿಯ ಅಂಬಿಗ. ಒಳಗೆ ಸುಳಿದು ಕೈಯ್ಯ ಪಿಡಿದು ಕಷ್ಟ ದೂರ ಮಾಡುವ ಧೀಮಂತ- ಸಾವಿರಾರು ಪ್ರಣಾಮ, ಪ್ರಶಂಸೆಗಳಿಗೆ ಭಾಜನವಾಗುವ ಕಲಿಯುಗದ ಅನನ್ಯ ಯತಿವರೇಣ್ಯ.
ನೂರಾರು ದಾಸರು, ಸಾವಿರಾರು ಭಕ್ತರು, ಕೋಟಿ ಕೋಟಿ ಪಾಮರರು ಭಕುತಿಯಿಂದ ಬಯಸುವ ಹೆಸರೇ ಶ್ರೀ ರಾಘವೇಂದ್ರ. ಅವರ ಜ್ಞಾನ, ಭಕ್ತಿ ಮತ್ತು ವೈರಾಗ್ಯದ ತಪೋಶಕ್ತಿ ಎಷ್ಟೆಂದು ನಾವು ಊಹಿಸಿದಷ್ಟೂ ಅದು ಅತಿ ವಿಸ್ತಾರ. ಈ ಬಗ್ಗೆ ನಾವೆಲ್ಲರೂ ಕಲ್ಪಿಸಿಕೊಂಡಷ್ಟೂ ಕಡಿಮೆ ಎನಿಸುವ ಭಾವ.
ಹರಿ ಸರ್ವೋತ್ತಮ ತತ್ವವನು ಎಳ್ಳಷ್ಟೂ ಅನುಮಾನವಿಲ್ಲದೆ ನಂಬಿದ ಫಲವೇ ಶ್ರೀ ರಾಘವೇಂದ್ರರು. ಅನನ್ಯವಾಗಿ ಮೂಲ ರಾಮದೇವರ ಉಪಾಸನೆಯ ಬಲಗಳಿಂದ ರಾಯರು ಅತ್ಯಂತ ಸರಳವಾಗಿ ಭವ ಲೋಕದ ಜೀವಿಗಳಿಗೆ ಹೇಳಿದ ಸಂದೇಶದ ಉದಾತ್ತತೆಯೇ ಬಣ್ಣಿಸಲು ಅಸದಳ.
ರಾಘವೇಂದ್ರರು ಎಂದರೆ ಅವರು ಸತ್ಯ ಸಂಧತೆಯ ರುವಾರಿ. ಧರ್ಮ ಮಾರ್ಗ ಸಂಚಾರಿ. ಹರಿವಾಯುಗಳ ಒಡನಾಡಿ. ಮನುಕುಲದ ಜೀವನಾಡಿ. ನಂಬಿದವರನ್ನೆಲ್ಲಾ ಜಾತಿ ಮತ ನೋಡದೇ ಅನುಗ್ರಹಿಸುವುದೇ ಅವರ ಕಾಯಕವಾಯಿತಲ್ಲಾ……. ಎಂಬುದೇ ಇಂದಿಗೂ ಅಚ್ಚರಿ.
ಪ್ರಧಾನರಾಗಿದ್ದು ಹೀಗೆ
ಕಟ್ಟ ಕಡೆಯ ವ್ಯಕ್ತಿಯನ್ನೂ ಭಕ್ತಿ ಮತ್ತು ಕರುಣೆಯ ಕಡಲಲ್ಲಿ ಮಿಂದೇಳಿಸಿ ದೇವರೆಡೆಗೆ ಕರೆದೊಯ್ಯುವ ನಾಯಕರಾಗಿ ಅವರು ಧಾರ್ಮಿಕ ರಂಗದಲ್ಲಿ ಪ್ರಧಾನರಾದರು. ವೇದವ್ಯಾಸ ಪ್ರಣೀತ ಮತವನು ಸರಳವಾಗಿ ತಿಳಿಸುವ ಗುರು ಮಧ್ವರಾಯರ ಅನನ್ಯ ಸೇವಕರಾದರು. ಕಡೆಗೆ ಮಂತ್ರಾಲಯ ಪ್ರಭುವೆಂದೇ ಖ್ಯಾತರಾದರು.
ಮಹಾಮುನಿಯ ಮಹತ್ತರ ಕೃತಿಗಳು
ಅವರ ಜೀವನವೇ ಒಂದು ಭವ್ಯ ವೇದಿಕೆ. ಅದನ್ನು ಎಷ್ಟು ಬಾರಿ ಅವಲೋಕಿಸಿದರೂ ಕನಿಷ್ಠ ಎನಿಸುವುದು ವಾಡಿಕೆ. ತಾವು ಪಡೆದ ಸಿದ್ಧಿಗಳಿಂದ ಧರ್ಮವೇ ಸತ್ಯವೆಂದು ಎಲ್ಲರ ನಂಬಿಕೆಗಳನ್ನು ಪ್ರೇರೇಪಿಸುವ ಮಹಾಮುನಿಯಾಗಿ ಮೆರೆದರು. ಇಂದಿಗೂ ಆ ಪಟ್ಟ ಅವರೊಬ್ಬರಿಗೆ ಮಾತ್ರ.
ರಾಯರು ಅಪಾರ ಜ್ಞಾನ ಭಂಡಾರವನ್ನೇ ಗ್ರಂಥಗಳ ರೂಪದಲ್ಲಿ ನೀಡಿದರು. ವೇದಗಳ ಬಗ್ಗೆ ಮಂತ್ರಾರ್ಥ ಮಂಜರೀ, 10 ಉಪನಿಷತ್ತುಗಳ ಬಗ್ಗೆ ಖಂಡಾರ್ಥ, ಬ್ರಹ್ಮ ಸೂತ್ರಗಳಿಗೆ 7 ಕೃತಿ, ಪ್ರಕರಣಕ್ಕೆ 10 ಕೃತಿ, ರಾಮಾಯಣ, ಮಹಾಭಾರತ ತಾತ್ಪರ್ಯ ನಿರ್ಣಯ, 50 ಕ್ಕೂ ಹೆಚ್ಚು ಗ್ರಂಥಗಳಿಗೆ ವ್ಯಾಖ್ಯಾನ. ಇದು ಕಡಿಮೆ ಸಾಧಮೆ ಏನಲ್ಲ. ಹಾಗಾಗಿ ವೈದಿಕ ಸಿದ್ಧಾಂತ, ಮಾರ್ಗಗಳೇ ಸತ್ಯವೆಂದು ಸಾಬೀತುಪಡಿಸಿ ತೋರಿದ ಧೀರ-ವೀರ ಸಂತರಿವರು.
ಮನ ಪರಿವರ್ತಕ
ಆಯಾ ಕಾಲ ಘಟ್ಟಕ್ಕೆ ಹಲವರು ಜನರನ್ನು ಮತ ಪರಿವರ್ತನೆ ಮಾಡಿದರು. ಆದರೆ ರಾಯರು ಮತಿ ಪರಿವರ್ತನೆ ಮಾಡಿ ಬಹು ವಿಶಿಷ್ಠರಾದರು. ಅದು ಲಕ್ಷಾಂತರ ಜನರ ಜೀವನ ಗತಿಯನ್ನೇ ಸುಧಾರಿಸಿತು. ಮಾಜಮುಖಿಯಾಗಿ ಸಮನ್ವಯಿಸಿತು.ಅವರು ಉಪದೇಶಿದ ತತ್ವಗಳೇ ಎಲ್ಲರಿಗಿಂತ ಬಹು ಭಿನ್ನ . ಅವು ಏನೆಂದರೆ ಅಂತರ್ಮುಖಿಯಾಗಿ ಹರಿಯನ್ನು ಕಾಣಿ, ಬಹಿರ್ಮುಖವಾಗಿ ಸಮಾಜವನ್ನು ನೋಡಿ. ದೇವರು ಕೊಟ್ಟ ದೊಡ್ಡ ಸಂಪತ್ತು ಎಂದರೆ ಮನಸ್ಸು. ವೈರಾಗ್ಯಕ್ಕೆ ಅದನ್ನು ಅಣಿಗೊಳಿಸಿ ಎಂದರು ರಾಯರು.
ಸಂಸಾರದ ಮೋಹ, ಮಮತೆ, ಆಸೆ, ಆಕಾಂಕ್ಷೆಗಳನ್ನು ರಾಯರು ತೊರೆದರು. ಮೊದಲು ಮನವನ್ನು ಶುದ್ಧಗೊಳಿಸಿದರು. ‘ಮನಶುದ್ಧಿ ಇಲ್ಲದವಗೆ ಮಂತ್ರದ ಲವೇನು, ತನು ಶುದ್ಧಿ ಇಲ್ಲದವಗೆ ತೀರ್ಥದ ಲವೇನು’ ಎಂಬ ಅರಿವು ಮೂಡಿಸಿದರು. ಅದು ಉತ್ಕಟ ಭಕ್ತಿಯಾಗಿ ಸೂಸಿತು. ಉಪಾಸನೆಯಾಗಿ ಉಕ್ಕಿತು. ಪ್ರವಚನ, ಗ್ರಂಥ ರಚನೆ, ಧ್ಯಾನ, ಗಾನದಲ್ಲಿ ಹರಿದು ಭಕ್ತಿಯೋಗವಾಯಿತು. ಅದಕ್ಕಾಗಿಯೇ ರಾಯರು ಲೋಕ ಮೆಚ್ಚುವ ಯತಿಯಾದರು.
ಸಂಸ್ಕೃತಿ-ಸಂಗಮ
ವಿವಿಧ ಆಸ್ತಿಕ , ಆಧ್ಯಾತ್ಮಿಕ, ಜನಪದ ಸಂಸ್ಕೃತಿ, ಜೀವನ ವಿಧಾನಗಳನ್ನು ಮೂಲವಾದ ಸಂಸ್ಕೃತಿಗೆ ಸಂಗಮಿಸುವ ಕಾರ್ಯದಲ್ಲಿ ರಾಯರ ಕೊಡುಗೆ ಅಪಾರ ಮತ್ತು ಅನನ್ಯ. ಇದನ್ನು ಇಂದಿಗೂ ತರ್ಕಿಸಿ ನೋಡಬಹುದು. ಯಾರೇ ಆದರೂ ಅದನ್ನು ವಿಮರ್ಷಿಸಿ ತೂಗಬಹುದು. ಆದರೆ ರಾಯರು ರಾಯರೇ. ಸಾಗರಕ್ಕೆ ಸಾಗರವೇ ಉಪಮೆ ಎಂಬಂತೆ. ಅವರಿಗೆ ಅವರೇ ಸಾಟಿ. ದೇವರೆಂದರೆ ತಿರುಪತಿ ತಿಮ್ಮಪ್ಪ … ಗುರುಗಳೆಂದರೆ ಮಂತ್ರಾಲಯದ ರಾಘಪ್ಪ… ಎಂಬ ಮಾತು ಜನ ಮಾನಸದಲ್ಲಿ ಚಿರ ಸ್ಥಾಯಿ ಆಗಿದೆ.
ಕೆಲವರಿಗೆ ಅನುಗ್ರಹ, ಉಳಿದವರಿಗೆ ಸಪ್ನ, ಕೊಂಚ ಆಳವಾಗಿ ಜೀವನ ನೋಡುವವರಿಗೆ ನಿದರ್ಶನ, ಪಂಡಿತರಿಗೆ ದರ್ಶನ, ಪಾಮರರಿಗೆ ವಿವಿಧ ರೂಪದಲ್ಲಿ ಗ್ರಂಥ ಸ್ವರೂಪದಲ್ಲಿ ಮಹಾಮಾರ್ಗ ತೋರಿದ ಮೇರು- ಹೀಗೆ ರಾಯರ ಕರುಣೆಯ ಹರವು.
ಶ್ರಾವಣ ಕೃಷ್ಣ ದ್ವಿತೀಯ ತಿಥಿಯಂದು ತಾವೇ ಆದೇಶಿಸಿ ನಿರ್ಮಿಸಿಕೊಂಡ ವೃಂದಾವನದಲ್ಲಿ ರಾಯರು ಸಜೀವವಾಗಿ ಪ್ರವೇ ಶ ಮಾಡಿಬಿಟ್ಟರು. ರಾಯರನ್ನು ನೋಡಲೇಬೇಕು ಎಂದು ತುಂಬಿದ ತುಂಗೆಯನ್ನು ಈಜಿ ಬಂದ ಅಪ್ಪಣ್ಣಾಚಾರ್ಯರು ವೃಂದಾವನ ನೋಡಿ ಕಣ್ಣೀರಿಡುತ್ತಾ ಸ್ತುತಿಸಿದಾಗ ಹಯಗ್ರೀವ ದೇವರೇ ನಿನ್ನ ಉಕ್ತಿಗಳಿಗೆ ಸಾಕ್ಷಿ ಎಂದರು. ಅದೇ ರಾಯರ ಸ್ತೋತ್ರವಾಯಿತು. ಭಜತಾಂ ಕಲ್ಪವೃಕ್ಷಾಯ… ನಮತಾಂ ಕಾಮಧೇನವೇ ಎಂಬುದು ಲಕ್ಷ, ಲಕ್ಷ ಜನ ನಿರಕ್ಷರ ಕುಕ್ಷಿಗಳನ್ನೂ ಉದ್ಧರಿಸಿಬಿಟ್ಟಿತು.
ತುಂಗಾ ತೀರದ ಉತ್ತುಂಗ ಮುನಿ
ಅದಕ್ಕಾಗಿಯೇ ತುಂಗೆಯ ತಟದಲ್ಲಿ ಉತ್ತುಂಗ ಮುನಿ ಎನಿಸಿದರು ರಾಯರು. ವೃಂದಾವನದ ಒಳಗಿದ್ದುಕೊಂಡೇ ನಿತ್ಯ ನೂರಾರು ಸಾತ್ವಿಕ ಪವಾಡಗಳನ್ನೇ ಸೃಷ್ಟ್ಟಿಸಿದರು. ಮಂಚಾಲೆ ಎಂಬುದು ಪವಿತ್ರ ಮಂತ್ರಾಲಯವೆಂದು ಖ್ಯಾತವಾಯಿತು. ವಿಶ್ವ ಭೂಪಟದಲ್ಲಿ ಮೇರು ಧಾರ್ಮಿಕ ನೆಲೆಯಾಗಿ, ಸಂತನ ಬೀಡಾಗಿ, ನೊಂದು ಬಂದವರಿಗೆ ನೆರಳು ನೀಡುವ ಬೃಹತ್ ವೃಕ್ಷತಾಣವಾಗಿ ಮೆರೆಯಿತು.
ಈ ಕ್ಷೇತ್ರದಲ್ಲಿ ಹರಿದ ತುಂಗೆಯೂ ಧನ್ಯತೆ ಮೆರೆದಳು. ಇಂಥ ಯೋಗಿ, ಕಾವಿ ತೊಟ್ಟ ಕರುಣಾಶ್ರಯ ಇನ್ನಾರಿಲ್ಲವೆಂದು ಸಾಕ್ಷೀಕರಿಸಿದಳು.
ಮತ ಮೀರಿದ ಅನುಗ್ರಹ
ದೇಶ- ವಿದೇಶದಲ್ಲಿ ಇಂದು ರಾಯರ ಲಕ್ಷಾಂತರ ಮೃತ್ತಿಕಾ ಬೃಂದಾವನಗಳಿವೆ. ನೆನೆದವರ ಮನದಲ್ಲೇ ನೆಲೆಸಿ ಮನೆ ಮನಗಳನ್ನು ಅವರು ಮಂತ್ರಾಲಯವಾಗಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಕರುಣೆಯ ಕಡಲಾಗಿದ್ದಾರೆ. ಜಾತಿ-ಮತ-ಪಂಥಗಳನ್ನು ಸಾವಿರ ಪಟ್ಟು ದಾಟಿ ನಿಂತು ಕಲಿಯುಗದ ಕಲ್ಪತರುವಾಗಿ ಸ್ಥಾಯಿ ಆಗಿದ್ದಾರೆ. ಸುಮ್ಮನೆ ವೀಕ್ಷಣೆಗೆ ಬಂದ ಮನ್ರೋ ಎಂಬ ಬ್ರಿಟಿಷ್ ಅಧಿಕಾರಿಗೂ ರೋಮಾಂಚನಗೊಳಿಸಿ ಉದ್ಧರಿಸಿದ್ದಾರೆ. ಪರೀಕ್ಷಿಸಲು ಬಂದ ಹೈದರಾಬಾದಿನ ನವಾಬನಿಗೆ ಅಭಯವಿತ್ತಿದ್ದಾರೆ. ಅವರೆಲ್ಲರ ಬಾಯಲ್ಲಿ ಸ್ಥಿರವಾಗಿದ್ದು ಒಂದೇ ಮಂತ್ರ ‘ನಮೋ ಶ್ರೀ ರಾಘವೇಂದ್ರ ಗುರುವೇ ಅತ್ಯಂತ ದಯಾಳುವೇ….
ಅಂದು ಹಸಿದರು, ಇಂದು ಮೃಷ್ಟಾನ್ನ ಉಣಿಸಿದರು
ಎಲ್ಲರೂ 14 ದಿನ ಊಟ, ಒಂದು ದಿನ ಏಕಾದಶಿ ಮಾಡಿದರೆ ರಾಯರು ತಮ್ಮ ಪೂರ್ವಾಶ್ರಮದ ಘಟ್ಟದಲ್ಲಿ ಒಂದು ದಿನ ಊಟ ಮಾಡಿದರೆ 14 ದಿನ ಉಪವಾಸ ಇರಬೇಕಾದ ಸ್ಥಿತಿ ಇತ್ತು. ಆದರೆ ಇಂದು ಅವರ ಹೆಸರಿನ ಸಾವಿರ ಸಾವಿರ ಮಠಗಳಲ್ಲಿ ನಿತ್ಯ ಅನ್ನ ದಾಸೋಹ ನಡೆಯುತ್ತಿದೆ. ರಾಯರು ಅಂದು ಉಪವಾಸವಿದ್ದು ಮಾಡಿದ ಅನುಷ್ಠಾನ, ತಪಸ್ಸು ಇಂದು ಅನ್ನಬ್ರಹ್ಮನ ಕರುಣೆಯನ್ನು ಅದೆಷ್ಟೋ ಮಂದಿಗೆ ಕರುಣಿಸಿದೆ. ಸ್ಮರಸಿ ಬದುಕಿರೋ ದಿವ್ಯ ಚರಣಕೆರಗಿರೋ….
ನಂಬಿ ಬದುಕೋಣ
ರಾಯರ ಕಾಲದಲ್ಲಿ ಬದುಕಿನ ಅನೇಕರು ಅವರ ಕರುಣೆ, ಅನುಗ್ರಹ ಮತ್ತು ಪವಾಡಗಳಿಂದ ಜೀವನ ಉದ್ಧರಿಸಿಕೊಂಡರು. ನಿಂದಕರು ಇರಲಿಲ್ಲವೆಂದೇನೂ ಅಲ್ಲ. ಆದರೆ ಅವರೆಲ್ಲರಿಗೆ ಇಂಥ ಮಹಾನ್ ಯತಿಯನ್ನು ನೋಡಿದ ಭಾಗ್ಯವಾದರೂ ಇದೆ. ಸಮಕಾಲದಲ್ಲಿ ಬದುಕಿದ ಪುಣ್ಯವಂತೂ ಇದೆಯಲ್ಲವೇ? ಅವೆಲ್ಲವೂ ಅರಿವಾಗಿದ್ದು ಅವರು ವೃಂದಾವನ ಪ್ರವೇಶಿಸಿದ ಮೇಲೆ. ಅಲ್ಲಿದ್ದೂ ಇಲ್ಲಿನ ಜನೋದ್ಧಾರ ಮಾಡಿದ ಮೇಲೆ. ಇರಲಿ. ಬಂದದ್ದೆಲ್ಲಾ ಬರಲಿ, ಗುರು ರಾಯರ ದಯೆವೊಂದಿರಲಿ.
ರಾಯರ ವರ್ಧಂತಿ ಮತ್ತು ಪೀಠಾರೋಹಣ ಮಹೋತ್ಸವ ಹಿಂದೆ ಹೇಗೆಲ್ಲಾ ಆಗಿತ್ತೋ ತಿಳಿದಿಲ್ಲ. ಇಂದಂತೂ ವಿಜೃಂಭಿಸುತ್ತಿದೆ. ರಾಯರು ನಮ್ಮ ಮನದಂಗಳದಲ್ಲಿ ಪೀಠಾರೋಹಣ ಮಾಡಬೇಕು. ಅದಕ್ಕಾಗಿ ಹೃದಯ ಹೊಲವಾಗಬೇಕು, ಮನ ನೇಗಿಲಾಗಬೇಕು. ಶ್ವಾಸೋಚ್ಛಾಸಗಳು ಎರಡು ಎತ್ತುಗಳಾಗಬೇಕು. ಜ್ಞಾನವೆಂಬ ಹಗ್ಗ ಕಣ್ಣಿಯಾಗಿ ಚಂಚಲವೆಂಬ ಹಕ್ಕಿಗಳನ್ನು ಹೊಡೆದು ಓಡಿಸಬೇಕು. ಅವರು ತೋರಿದ ಮಾರ್ಗದಲ್ಲಿ ಕೆಲವೇ ಹೆಜ್ಜೆ ಹಾಕಲಾದರೂ ಯತ್ನ ಮಾಡಬೇಕು. ಆಗ ರಾಯರು ನಮ್ಮಲ್ಲಿ ನಿಂತಾರು. ಕೈ ಹಿಡಿದು ನಡೆಸಿಯಾರು. ಮಾನವ ಜನುಮದಲ್ಲಿ 4 ಜನರಿಗೆ ಉಪಕಾರಿಯಾಗಿ ಬಾಳಬೇಕು. ನಮ್ಮ ಉದಾತ್ತ ಸಂಸ್ಕೃತಿ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಮುಂದಾಗಬೇಕು. ಆಗ ಮಾತ್ರ ರಾಯರ ವರ್ಧಂತಿ, ಪೀಠಾರೋಹಣಗಳನ್ನು ವಿಜೃಂಭಣೆಯಿಂದ ಮಾಡಿದ್ದಕ್ಕೂ ಸಾರ್ಥಕ.
ಏನಂತೀರಿ ಭಕುತ ಜನರೇ ?
Get in Touch With Us info@kalpa.news Whatsapp: 9481252093
Discussion about this post