ಕಲ್ಪ ಮೀಡಿಯಾ ಹೌಸ್ | ಹರಿಹರಪುರ |
ಸಮೀಪದ ಹರಿಹರಪುರದಲ್ಲಿ ಪುನರುತ್ಥಾನಗೊಂಡ ಶ್ರೀ ಲಕ್ಷ್ಮೀ ಮಾಧವ ಕೃಷ್ಣ ದೇವಾಲಯದ ಲೋಕಾರ್ಪಣೆ, ಮರು ಪ್ರತಿಷ್ಠಾಪನಾ ಉತ್ಸವ ಮತ್ತು ಬ್ರಹ್ಮ ಕುಂಭಾಭಿಷೇಕ ಸಮಾರಂಭ ಮಾ. 26ರಿಂದ 28ರ ವರೆಗೆ ಆಯೋಜನೆಗೊಂಡಿದೆ. ಶ್ರೀ ಶೃಂಗೇರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನೆರವೇರುವ ವಿಧಿ- ವಿಧಾನಗಳನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮದ ಸಾವಿರಾರು ಭಕ್ತರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಸುಮಾರು 800 ವರ್ಷ ಪುರಾತನ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿತ್ತು. ಸೂಕ್ತ ನಿರ್ವಹಣೆ ಇಲ್ಲದ ಕಾರಣ ಗಿಡ, ಮರಗಳು ಬೆಳೆದು ಶಿಥಿಲಾವಸ್ಥೆ ತಲುಪಿತ್ತು. ಕಳೆದ 2 ವರ್ಷದಿಂದ ದೇಗುಲ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಇದೀಗ ಸನ್ನಿಧಿ ಸೇವೆಗೆ ಸನ್ನದ್ಧವಾಗಿದೆ.

Also read: ಬಸ್ಟಾಂಡ್ ರಾಘುನಿಂದ ಏನು ಅಭಿವೃದ್ಧಿ ಆಗಿದೆ? ನಮಗೆ ಅಧಿಕಾರ ಕೊಡಿ: ಬೇಳೂರು ವಾಗ್ದಾಳಿ
27ರಂದು ರತ್ನನ್ಯಾಸಪೂರ್ವಕ ದೇವರ ಪ್ರತಿಷ್ಠೆ, ಕಲಾ ತತ್ವ ಹೋಮ, ಜೀವ ಕುಂಭಾಭಿಷೇಕ, 108 ಬ್ರಹ್ಮ ಕುಂಭ ಪ್ರತಿಷ್ಠೆ ಅಧಿವಾಸ ಹೋಮ ಸಂಪನ್ನಗೊಳ್ಳಲಿದೆ. ಅಂದು ಸಂಜೆ 5ಕ್ಕೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ಹಮ್ಮಿಕೊಳ್ಳಲಾಗಿದೆ. ಗುರುಗಳಿಗೆ ಧೂಳಿ ಪಾದಪೂಜೆ ನಂತರ ಸಭಾ ಕಾರ್ಯಕ್ರಮ ಯೋಜನೆಗೊಂಡಿದೆ. ಪೂಜ್ಯ ಜಗದ್ಗುರುಗಳು ಆಶೀರ್ವಚನ ನೀಡಲಿದ್ದಾರೆ. ರಾತ್ರಿ 8.30ಕ್ಕೆ ಶ್ರೀಗಳಿಂದ ಶ್ರೀ ಶಾರದಾ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ.
ಐತಿಹಾಸಿಕ ದೇವಾಲಯವು ಸಂಪೂರ್ಣ ಶಿಥಿಲವಾಗಿತ್ತು. ಗ್ರಾಮಕ್ಕೆ ಆಗಮಿಸಿದ್ದ ನಾಗ ಸಾಧು ಒಬ್ಬರು ನೀಡಿದ ಸೂಚನೆಗಳನ್ನು ಅರ್ಚಕರು, ಮುಖಂಡರು ಅನುಸರಿಸಿ ಈ ದೇಗುಲವನ್ನು ಪುನರುತ್ಥಾನ ಮಾಡಲು ಸಂಕಲ್ಪ ಮಾಡಲಾಯಿತು. ಮುಜರಾಯಿ ಇಲಾಖೆ ಅಧಿಕಾರಿಗಳು ಸಮ್ಮತಿಸಿದರು. ಮೊದಲ ಹಂತದ ಅನುದಾನ ಬಂತು. ನಂತರ ಸರ್ಕಾರದ ಉನ್ನತ ಅಧಿಕಾರಿಗಳು ಅಷ್ಟಾಗಿ ಸ್ಪಂದನೆ ತೋರಲಿಲ್ಲ. ಶಾಸಕ ರೇವಣ್ಣ ಅವರು ವಿಶೇಷವಾದ ಆಸಕ್ತಿಯನ್ನು ತೋರಿ, ತಾವೂ ದೊಡ್ಡದಾದ ದೇಣಿಗೆ, ನಿಧಿ ಸಮರ್ಪಿಸಿ, ದೇಗುಲ ಜೀರ್ಣೋದ್ಧಾರ ಪೂರ್ಣವಾಗಿ ಮಾಡಲು ಬೆಂಬಲಿಸಿದರು. ಪೂಜ್ಯ ಶ್ರೀ ಶೃಂಗೇರಿ ಜಗದ್ಗುರುಗಳ ಮಹಾ ಸನ್ನಿಧಾನವು ದೇವಾಲಯ ಲೋಕಾರ್ಪಣೆ ಗೊಳಿಸಲಿರುವುದು ನಮ್ಮ ಅಹೋ ಭಾಗ್ಯ.
-ಎಚ್.ಎಸ್. ವೇಣುಗೋಪಾಲ, ಅರ್ಚಕರು
ಬ್ರಹ್ಮ ಕುಂಭಾಭಿಷೇಕ
28ಂದು ವೃಷಭ ಲಗ್ನದಲ್ಲಿ ಶ್ರೀ ಜಗದ್ಗುರುಗಳು ಶ್ರೀ ಲಕ್ಷ್ಮೀ ಮಾಧವ ಕೃಷ್ಣ ದೇವರಿಗೆ ಬ್ರಹ್ಮ ಕುಂಭಾಭಿಷೇಕ ಮಹಾಪೂಜೆ ನೆರವೇರಿಸಲಿದ್ದಾರೆ. ನಂತರ ನೂತನ ಕಟ್ಟಡದ ಶಿಲಾನ್ಯಾಸ ಮಾಡಲಿದ್ದಾರೆ. ಇದೇ ಸಂದರ್ಭ ಸ್ವಾಮೀಜಿಯವರಿಗೆ ಫಲ, ಪುಷ್ಪ, ಕಾಣಿಕೆ ಸಮರ್ಪಿಸಲು ಮತ್ತು ಪಾದಪೂಜೆ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು 3 ದಿನಗಳ ಧಾರ್ಮಿಕ ಸೇವಾ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ದೇವಾಲಯದ ಪ್ರಧಾನ ಅರ್ಚಕ ಎಚ್.ಎಸ್. ವೇಣುಗೋಪಾಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post