ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಂಗದಲ್ಲಿ ಗೆಜ್ಜೆ ಕಟ್ಟಿ ತಾಳಕ್ಕೆ ತಕ್ಕಂತೆ ಕುಣಿಯುವ, ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವ, ಕವಿಯ ಕಲ್ಪನೆಯ ಪದ್ಯಗಳ ಸಾಲುಗಳಿಗೆ ಸುಮಧುರ ಕಂಠ ಸಿರಿಯ ನೀಡುವ, ಹಾಗೆಯೇ ನೆರೆದ ಕಲಾ-ಅಭಿಮಾನಿಗಳನ್ನು ನಕ್ಕು ನಗಿಸುವ ಎಷ್ಟೊ ಕಲಾವಿದರ ಬದುಕು, ಕೇವಲ ರಂಗದ ಎದುರಿನ ಬದುಕಿಗೆ ಮಾತ್ರ ಆಕರ್ಷಣೀಯವಾಗಿರುತ್ತದೆ.ಅಂತಹ ಯಕ್ಷಗಾನ ಕಲಾವಿದರ ರಂಗಸ್ಥಳದ ಹಿಂದಿನ ಬದುಕನ್ನು, ನಿಮ್ಮ ಕಣ್ಣಿನ ಎದುರು ಇರಿಸುವ ಒಂದು ಪ್ರಾಮಾಣಿಕ ಪ್ರಯತ್ನ ಬಂಧುಗಳೇ. ಬನ್ನಿ, ಯಕ್ಷಗಾನ ಕಲಾವಿದನ ಬದುಕು,ನೋವು- ನಲಿವು ಗಳ ಜೊತೆಗೆ ಒಂದಷ್ಟು ಸಮಯವನ್ನು ಕಳೆಯೋಣ…
ಸಾವಿರಾರು ವರುಷಗಳ ಇತಿಹಾಸವಿರುವ ವೈಶಿಷ್ಟ್ಯ ಪೂರ್ಣವಾದ ಕಲೆ ಯಕ್ಷಗಾನ. ಮೊದಮೊದಲು ಕೇವಲ ಕರಾವಳಿ ಕರ್ನಾಟಕದ ತುಳುನಾಡಿಗೆ ಸೀಮಿತವಾಗಿದ್ದ ಯಕ್ಷಗಾನ, ಈಗ ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ತನ್ನ ಭವ್ಯ ಪರಂಪರೆಯ ಸೊಗಡನ್ನು ಬೀಸಿ ಬಂದಿದೆ. ಈ ಯಕ್ಷಗಾನ ಕಲೆಯ ಇಷ್ಟರ ಮಟ್ಟಿಗಿನ ಬೆಳವಣಿಗೆಗೆ ಪ್ರಮುಖ ಕಾರಣ ಈ ಭವ್ಯ ಪರಂಪರೆಗೆ ಬೆವರು ಸುರಿಸಿದ, ಯಕ್ಷಗಾನಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿರಿಸಿ ಕಾಲದಲ್ಲಿ ಲೀನವಾಗಿ ಹೋದ ಅದೆಷ್ಟೋ ಹಿರಿಯ ಚೇತನಗಳು. ಜೊತೆಗೆ ಇಂದಿಗೂ ಯಕ್ಷಗಾನ ರಂಗದಲ್ಲಿ ದುಡಿಯುತ್ತಿರುವ ಬಹಳಷ್ಟು ಕಲಾವಿದರು. ಇಂದು ಯಕ್ಷಗಾನ ತನ್ನ ಮಟ್ಟಿಗೆ ಸಮೃದ್ಧವಾಗಿ ಬೆಳೆದುನಿಂತಿದೆ, ಇದಕ್ಕೆ ಮುಖ್ಯ ಕಾರಣ ಯಕ್ಷಗಾನವೆಂಬ ಈ ಬೃಹತ್ ವೃಕ್ಷಕ್ಕೆ ನೀರು ಹಾಕಿ ಪೋಷಿಸಿದ ಪುಣ್ಯಾತ್ಮರು. ಈಗ ಲೋಕ ಮುಖಕ್ಕೆ ಪರಿಚಯವಿಲ್ಲದೇ ಹೋದರು ಅವರ ಪರಿಶ್ರಮ ಚಿರಸ್ಥಾಯಿಯಾಗಿ ಈ ಭೂಮಿಯಲ್ಲಿ ಉಳಿಯುತ್ತದೆ.
ಒಳ್ಳೆಯ ಓಡುವ, ಪ್ರಶಸ್ತಿಯನ್ನು ಗೆಲ್ಲುವ ಕುದುರೆಯ ಹಿಂದೆ ಸಾವಿರಾರು ಜನವಂತೆ. ಅದೇ ಹೆಚ್ಚು ಪ್ರಾಯವಾಗಿ ಕಾಲಿನಲ್ಲಿ ಬಲವಿಲ್ಲದೆ ಮೂಲೆಗುಂಪಾದ ಮುದಿ ಕುದುರೆಯ ಹಿಂದೆ ಯಾರಿಲ್ಲವಂತೆ. ಎಂಬ ಮಾತಿನ ಪ್ರಕಾರ ಕಲಾವಿದನೊಬ್ಬ ತನ್ನ ಕಾಲಿನಲ್ಲಿ ಬಲ ಇರುವವರೆಗೆ, ದೇಹದಲ್ಲಿ ಶಕ್ತಿ ಇರುವವರೆಗೆ, ತನ್ನ ಧ್ವನಿಯಲ್ಲಿ ಕಂಠ ತ್ರಾಣ ಇರುವವರೆಗೆ ಆತ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ನೀಡಬಲ್ಲ. ಯಾವಾಗ ಕಲಾವಿದನ ದೇಹದ ಸಾಮರ್ಥ್ಯ ಕುಗ್ಗುತ್ತಾ ಬರುತ್ತದೆಯೊ ಆವತ್ತು ಆತನ ಪ್ರದರ್ಶನವೂ ಕಳೆಗುಂದುತ್ತಾ ಬರುತ್ತದೆ. ಪ್ರಚಾರ, ಬೇಡಿಕೆಗಳೂ ಕಡಿಮೆಯಾಗುತ್ತದೆ. ಹೀಗೆ ದಿನಗಳೆದಂತೆ ಮೂಲೆಗುಂಪಾದ ಅದೆಷ್ಟೋ ಕಲಾವಿದರುಗಳನ್ನು ನಾವು ಕಂಡಿದ್ದೇವೆ. ಇಂದಿಗೂ ಎಷ್ಟೊ ವರುಷಗಳ ಕಾಲ ತಿರುಗಾಟ ನಡೆಸಿದ ಒಬ್ಬ ಕಲಾವಿದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆದರೂ ಒಂದು ಮಾತು ಮಾತ್ರ ಸತ್ಯ. ಕಲಾವಿದನ ದೇಹದ ಒಳಗಿನ ಸತ್ವ ಕುಂದಿರಬಹುದು ಆದರೆ ಆತನ ರಕ್ತದಲ್ಲಿ ಇರುವ ಕಲಾವಿದನೆಂಬ ಜೀವಕ್ಕೆ ಎಂದಿಗೂ ಸಾವು ಬರಲಾರದು.
ಮನುಷ್ಯನ ದೇಹಕ್ಕೆ ಬಹಳ ಪ್ರಾಮುಖ್ಯವಾಗಿ ಬೇಕಿರುವುದು ದುಡಿದು ಬಂದ ದೇಹಕ್ಕೆ ವಿಶ್ರಾಂತಿಯಂತೆ. ಅಂದರೆ ಅದರಲ್ಲಿ ನಿದ್ದೆಯೂ ಕೂಡ ಬರುತ್ತದೆ. ಪ್ರಸ್ತುತ ತಿರುಗಾಟ ನಡೆಸುತ್ತಿರುವ ಅದೆಷ್ಟೋ ಕಲಾವಿದರು ಹಗಲು ಹೊತ್ತಿನಲ್ಲಿ ದುಡಿದು ರಾತ್ರಿಯ ಹೊತ್ತಿಗೆ ದೂರದೂರಿನಲ್ಲಿ ಇರುವ ತನ್ನ ಮೇಳದ ಆಟಕ್ಕೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾರೆ. ರಾತ್ರಿ ಎಲ್ಲಾ ನಿದ್ದೆಗೆಟ್ಟು, ವೇಷಭೂಷಣಗಳನ್ನು ಧರಿಸಿ, ಮುಖಕ್ಕೆ ಬಣ್ಣಹಚ್ಚಿ, ಕುಣಿಯುವ ಯಕ್ಷಗಾನ ಕಲಾವಿದ. ದೇಹಕ್ಕೆ ಅಷ್ಟೊಂದು ದಣಿವಿದ್ದರೂ ಯಕ್ಷಗಾನ ನೋಡಬಂದ ಕಲಾ-ಅಭಿಮಾನಿಗಳಿಗೆ ಒಂದಿನಿತೂ ಕೊರತೆಯಾಗದಂತೆ ತನಗೆ ನೀಡಿದ ಪಾತ್ರಗಳಿಗೆ ಜೀವತುಂಬುವ ಪುಣ್ಯಾತ್ಮರು ಅವರು. ಇವುಗಳೆಲ್ಲಾ ಕೇವಲ ಒಂದು ಎರಡು ದಿನಗಳಿಗೆ ಸೀಮಿತವಲ್ಲ ಪ್ರತಿದಿನವೂ ಕಲಾವಿದನೊಬ್ಬನ ದಿನಚರಿ ಇದು. ಈಗೀಗ ದೂರದಲ್ಲಿ ಕುಳಿತು ಮಾತನಾಡುವ ಕೆಲ ವಿಮರ್ಶಕನ ಬಾಯಿಗೆ ಸುಲಭದ ತುತ್ತಾಗುವುದೂ ಈ ಬಡಕಲಾವಿದನೇ. ಕಾರಣ ಆರೋಗ್ಯದ ಸಮಸ್ಯೆ ಇಂದಲೊ, ಮನೆಯ ಸಮಸ್ಯೆ ಇಂದಲೊ ಅಥವಾ ಇನ್ನಿತರ ತೊಂದರೆ ಇಂದಲೊ ಕಲಾವಿದನ ಪ್ರದರ್ಶನದಲ್ಲಿ ಅಥವಾ ಆತ ಬರದೇ ಹೋದಲ್ಲಿ ಈ ಬಡಕಲಾವಿದನೇ ಅವರ ಪಾಲಿಗೆ ಸುಲಭವಾಗಿ ಸಿಕ್ಕುವ ವಿಷಯವಾಗಿರುತ್ತದೆ. ಅದರೂ ನೈಜ ಕಲಾವಿದ ಎಂದಿಗೂ ಟೀಕೆಗಳಿಂದ ಕುಗ್ಗದೆ, ಪ್ರಶಂಸೆಗಳಿಗೆ ಹಿಗ್ಗದೆ ಸಾಗುವ ಹೋರಾಟದ ಹಾದಿಯೇ ಆತನ ಸಾಧನೆಗೆ ದಾರಿದೀಪವಾಗಿರುತ್ತದೆ.
ಹುಟ್ಟು ಮತ್ತು ಸಾವುಗಳ ಮಧ್ಯೆ ನಾಲ್ಕು ದಿನದ ಜೀವನ ನಮ್ಮದು.ಮನುಷ್ಯ ಸತ್ತ ಮೇಲು ಈ ಭೂಮಿಯಲ್ಲಿ ಬದುಕ ಬೇಕಿದ್ದರೆ ಅದು ಆತ ತನ್ನ ಜೀವತದ ಅವಧಿಯಲ್ಲಿ ಮಾಡಿದ ಒಂದಷ್ಟು ಪುಣ್ಯ ಕಾರ್ಯದಿಂದ ಮಾತ್ರ ಅಥವಾ ಆತನ ವೈಯುಕ್ತಿಕ ಸಾಧನೆಯಿಂದ. ಮತ್ತೊಂದು ದಾರಿಯಿದೆ ಇಂತಹ ಸಾಂಸ್ಕೃತಿಕ ಕಲೆಗಳಲ್ಲಿ ಆತ ಮಾಡಿದ ಸಾಧನೆಯಿಂದ ಆತನ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಒಬ್ಬ ಕಲಾವಿದನಿಗೆ ತನ್ನ ಬಂಧು ಬಳಗದವರೊಡನೆ ಕಳೆಯಲು ಸಿಗುವ ಸಮಯ ಬಹಳಷ್ಟು ಕಡಿಮೆ ಎನ್ನಬಹುದು. ಸಿಕ್ಕ ಸಮಯದಲ್ಲಿ ಪ್ರೀತಿ ವಿಶ್ವಾಸ ತೋರಿ ಅವರ ಬೇಕು ಬೇಡಗಳನ್ನು ಪೂರೈಸಿ ನಡೆಸುವ ಜೀವನ ನಿಜವಾಗಿಯೂ ಅದೊಂದು ತಪಸ್ಸು ಎಂದರೆ ತಪ್ಪಾಗಲಾರದು. ಕಲಾವಿದನ ಪಾಲಿಗೆ ಮತ್ತು ಆತನ ಸಾಧನೆಗೆ ಆತನ ಮನೆಯವರ ಪ್ರೋತ್ಸಾಹ ಅತ್ಯಂತ ಪ್ರಾಮುಖ್ಯವಾಗಿರುತ್ತದೆ. ಹೆಚ್ಚಾಗಿ ಆತನಿಗೆ ಯಕ್ಷಗಾನದ ಚೌಕಿಯೇ ಆತನ ಎರಡನೆಯ ಮನೆ ಅಲ್ಲಿಯೇ ಆತನ ನಿದ್ದೆ, ತಿಂಡಿ, ಊಟ ಎಲ್ಲವೂ. ಮೇಳದಲ್ಲಿ ನೆಲೆಸಿರುವ ದೇವರೇ ಆತನ ಆರಾಧ್ಯ ಮೂರ್ತಿಯಾಗಿರುತ್ತದೆ.
ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ ಕಲಾವಿದನಿಗೆ ವರುಷಕ್ಕೆ ಆರು ತಿಂಗಳು ತಿರುಗಾಟವಾದರೆ ಉಳಿದ ಮಳೆಗಾಲದಲ್ಲಿ ಆತನಿಗೆ ಅನಿವಾರ್ಯವಾಗಿ ಬೇರೆ ಕೆಲಸಗಳ ಕಡೆಗೆ ಮುಖ ಮಾಡಬೇಕಾಗುತ್ತದೆ. ಈಗೀಗ ಅತ್ಯಂತ ಹೆಚ್ಚಾಗಿ ಮಳೆಗಾಲದಲ್ಲೂ ಯಕ್ಷಗಾನ ಪ್ರದರ್ಶನವಾಗುತ್ತಿದೆ. ಹಾಗಾಗಿ ಸ್ಪಲ್ಪ ಮಟ್ಟಿಗೆ ಕಲಾವಿದನ ಬದುಕು ಸುಧಾರಿಸಿದೆ ಎನ್ನಬಹುದು. ಸಾಮಾಜಿಕ ಜಾಲತಾಣಗಳು ಇಲ್ಲದ ಹಿಂದಿನ ಕಾಲದಲ್ಲಿ ಮನೆ ಮನೆಗೂ ಯಕ್ಷಗಾನದ ಕಂಪನ್ನು ಚೆಲ್ಲಿದ ದಿವ್ಯ ಚೇತನಗಳನ್ನು ನೆನಪಿಸಿಕೊಳ್ಳಲೇ ಬೇಕಾಗುತ್ತದೆ. ಇತ್ತೀಚಿಗೆ ರಂಗಸ್ಥಳದಲ್ಲೇ ಅರುಣಾಸುರ ಪಾತ್ರವನ್ನು ನಿರ್ವಹಿಸುತ್ತಿದ್ದ ಸಂಧರ್ಭದಲ್ಲಿ ಕುಸಿದು ಬಿದ್ದು ಯಕ್ಷಲೋಕದಲ್ಲಿ ಲೀನವಾಗಿ ಹೋದ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ತನ್ನ ಕೊನೆಯ ಉಸಿರು ಇರುವವರೆಗೆ ಯಕ್ಷ ರಂಗದಲ್ಲಿ ಭಾಗವತನಾಗಿ ಸೇವೆ ಸಲ್ಲಿಸಿದ ಕುಬಣೂರು ಶ್ರೀಧರರಾಯರು, ಮಾತಿನಲ್ಲೇ ಮಂತ್ರಾಲವನ್ನು ನಿರ್ಮಿಸಬಲ್ಲ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಮತ್ತು ಚೆನ್ನಪ್ಪ ಶೆಟ್ರು, ಬಡಗಿನ ಶ್ರೇಷ್ಠ ಭಾಗವತರಾಗಿದ್ದ ದಿವಂಗತ ಕಾಳಿಂಗ ನಾವುಡರಂತಹ ಇನ್ನೂ ಹತ್ತು ಹಲವಾರು ಕಲಾವಿದರನ್ನು ನೆನಪಿಸಿಕೊಳ್ಳಬೇಕಾಗುತ್ತದೆ.
ಕಟೀಲು ತಾಯಿಯ ಅನುಗ್ರಹ ಮತ್ತು ಕೃಪೆ ಎಲ್ಲಾ ಕಲಾವಿದರ ಮೇಲಿರಲಿ ಎಂಬ ಶುಭ ಆಶಯದೊಂದಿಗೆ. ಪ್ರಸ್ತುತ ಲೋಕಕ್ಕೆ ಒದಗಿರುವ ಆಪತ್ತು ಕೊರೊನ ವೈರಸ್ ಭೀತಿಯಿಂದ ಎಲ್ಲಾ ಯಕ್ಷಗಾನ ಪ್ರದರ್ಶನಗಳೂ ನಿಂತಿವೆ. ಅದೆಷ್ಟೋ ಕಲಾವಿದರ ಬದುಕು ಅತಂತ್ರವಾಗಿದೆ. ಬಂಧುಗಳೇ, ಕಟೀಲು ತಾಯಿ ಎಲ್ಲರ ಕಷ್ಟವನ್ನು ನೀಗಿಸಿ ಮತ್ತೊಮ್ಮೆ ಯಕ್ಷ ರಂಗದಲ್ಲಿ ಎಲ್ಲಾ ಕಲಾವಿದರು ಗೆಜ್ಜೆಕಟ್ಟಿ ಕುಣಿಯುವ ಸೌಭಾಗ್ಯವನ್ನು ಒದಗಿಸಲಿ ಎಂದು ಬೇಡುವ ಜೊತೆಗೆ ಪ್ರತಿಯೊಂದು ಕಲಾವಿದನ ಮನೆಯು ನಂದಾದೀಪದಂತೆ ಬೆಳಗಿ, ಸಾಧನೆಯ ಹಾದಿಯ ಮೂಲಕ ಯಶಸ್ಸು ಎಂಬ ಉತ್ತುಂಗದ ಶಿಖರವನ್ನು ತಲುಪಲಿ ಕಲಾವಿದನ ಬದುಕು ಎಂಬುದು ಬಂಗಾರವಾಗಲಿ ಎಂಬ ಆಶಯದೊಂದಿಗೆ ಈ ಲೇಖನ.
Get in Touch With Us info@kalpa.news Whatsapp: 9481252093
Discussion about this post