ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಅಕಾಡೆಮಿ ಪ್ರಕಟಿಸಿರುವ ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ಫೆಬ್ರವರಿ 11, 2019ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ವಸಂತ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ.
ಪತ್ರಿಕೋದ್ಯಮದಲ್ಲಿ ಜೀವಮಾನ ಸಾಧನೆಗೆ ನೀಡುವ ವಿಶೇಷ ಪ್ರಶಸ್ತಿಯೂ ಸೇರಿದಂತೆ 50 ಮಂದಿ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಇದರೊಂದಿಗೆ ವಿಶೇಷ ಪ್ರಶಸ್ತಿಗಳಾದ ಆಂದೋಲನ ಪತ್ರಿಕಾ ಸಂಸ್ಥೆಯವರು ಸ್ಥಾಪಿಸಿರುವ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ “ಆಂದೋಲನ ಪ್ರಶಸ್ತಿ”, ಅಭಿಮಾನಿ ಸಂಸ್ಥೆಯವರು ಸ್ಥಾಪಿಸಿರುವ “ಅಭಿಮಾನಿ” ಹಾಗೂ “ಅರಗಿಣಿ” ಪ್ರಶಸ್ತಿ, ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯವರು ಸ್ಥಾಪಿಸಿರುವ “ಮೈಸೂರು ದಿಗಂತ ಪ್ರಶಸ್ತಿ“ ಹಾಗೂ ಪತ್ರಕರ್ತ ಕೆ. ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ “ಮೂಕನಾಯಕ ಪ್ರಶಸ್ತಿ” ಗಳನ್ನು ಪ್ರದಾನ ಮಾಡಲಾಗುವುದು.
ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಬರಹಗಾರರು ಬರೆದಿರುವ ಪುಸ್ತಕಗಳ ಲೋಕಾರ್ಪಣೆಯನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಮಾಡಲಿದ್ದು, ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕವನ್ನು ಜಲ ಸಂಪನ್ಮೂಲ ಹಾಗೂ ಕನ್ನಡ ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ವಿಧಾನಸಭಾ ಸದಸ್ಯರು ಹಾಗೂ ಮಾಜಿ ಸಚಿವ ಆರ್. ರೋಷನ್ ಬೇಗ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ. ಮೋಹನ್ ಹಾಗೂ ಸರ್ಕಾರದ ಕಾರ್ಯದರ್ಶಿಗಳಾದ ಪಂಕಜ್‌ಕುಮಾರ್ ಪಾಂಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎಂ. ರವಿಕುಮಾರ್ ಭಾಗವಹಿಸಲಿದ್ದಾರೆ. ಆಶಯ ನುಡಿಯನ್ನು ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ನೆರವೇರಿಸಲಿದ್ದಾರೆ.
Discussion about this post