ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಧನೆ ಮಾತನಾಡಬೇಕು ಮಾತನಾಡುವುದು ಸಾಧನೆಯಾಗಬಾರದು ಎಂಬುದು ದಾರ್ಶನಿಕರ ವಾಕ್ಯ. ಅಪೂರ್ವಕ್ಕೊಮ್ಮೆ ಈ ಮಾರ್ಮಿಕವಾದ ವಾಕ್ಯ ಕೃತಿಯಾಗಿ ಎಲೆಮರೆಯ ಸುಮದಂತೆ ಮರ್ಮರಿಸಿ ಪರಿಮಿಳಿಸಿದಾಗಲೇ ಸುತ್ತಣ ಪ್ರಪಂಚಕ್ಕೆ ಗೋಚರಿಸುವುದು. ಸಾಸಿವೆಯನ್ನು ಪರ್ವತವೆಂಬಂತೆ ಬಣ್ಣಿಸುವ ಬಣ್ಣನೆಯ ಲೋಕದಲ್ಲಿ ನಿಜ ಸೌರಭ ಸೂಸುವ ವನಸುಮಗಳು ಜೈ ಪರಾಕು ಹೇಳುವವರ ಕಣ್ಣಿಗೆ ಕಾಣುವುದಿಲ್ಲ ಅಥವಾ ಹೇಳಿಕೆಗೆ ವಸ್ತು ಆಗುವುದಿಲ್ಲ. ಅದರೆ ವನಸುಮಗಳು ಯಾರು ಗಮನಿಸದಿದ್ದರೂ ತಮ್ಮಷ್ಟಕ್ಕೆ ತಾವು ಅರಳುತ್ತ ಪರಿಮಳವನು ಪಸರಿಸುತ್ತಲೇ ಇರುತ್ತವೆ. ಈ ತೆರನಾದ ವನಸುಮದಂತೆ ಎಲೆಮರೆಯಿಂದಲೇ ಅನನ್ಯ ಸಾಧನೆಗಳನ್ನು ಸಾಧಿಸುತ್ತಿರುವವರು ಕಟೀಲು ಸಮೀಪದ ಕೊಡೆತ್ತೂರಿನ ಕು. ಮೇಘಶ್ರೀ ಶೆಟ್ಟಿ.
ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಬಾಲ್ಯದಿಂದಲೇ ವಿದ್ಯಾಭ್ಯಾಸದಲ್ಲಿ ಮುಂದಿದ್ದ ಮೇಘಶ್ರೀ ತಮ್ಮ ಎಂಟರ ವಯಸ್ಸಿನಲ್ಲಿ ಯಕ್ಷಹೆಜ್ಜೆಗೆ ಮಾರುಹೋಗಿ ಗೆಜ್ಜೆ ಕಟ್ಟಿದವರು. ಪೌರಾಣಿಕ ಪ್ರಸಂಗಗಳಾದ ’ಪಾಂಚಜನ್ಯ’ದ ಕೃಷ್ಣ, ’ತರಣಿಸೇನ ಕಾಳಗ’ದ ತರಣಿಸೇನ ’ಸುಧನ್ವಾರ್ಜುನ’ದ ಸುಧನ್ವ, ’ಸುದರ್ಶನ ವಿಜಯ’ ದ ಸುದರ್ಶನ ಮುಂತಾದ ಮುಖ್ಯ ಪಾತ್ರಗಳನ್ನು ಅಭಿನಯಿಸಿದವರು ಹಾಗೂ ಅನೇಕ ಸ್ಪರ್ಧಾತ್ಮಕ ಪ್ರದರ್ಶನಗಳನ್ನೂ ನೀಡಿದವರು.
ಮೂಡಬಿದ್ರೆ ಆಳ್ವಾಸ್ ಅವರ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಅಂತಾರಾಜ್ಯ ಮಟ್ಟದ ಮಕ್ಕಳ ಯಕ್ಷಗಾನ ಸ್ಪರ್ಧೆ ’ಯಕ್ಷಕಾರಂಜಿ’ಯಲ್ಲಿ ಸ್ಪರ್ಧಿಸಿ ದ್ವಿತೀಯ ಬಹುಮಾನ ಪಡೆದವರು. 2009-10ರ ಸಾಲಿನ ಮಕ್ಕಳ ತೆಂಕುತಿಟ್ಟು ಪ್ರದರ್ಶನದಲ್ಲಿ ’ಉತ್ತಮ ಅಭಿನಯ’ ಪ್ರಶಸ್ತಿ ಪಡೆದವರು. ದಕ್ಷಿಣ ಕನ್ನಡ ’ಕರಾವಳಿ ಉತ್ಸವ’ದಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ ಹಿರಿಮೆ ಮೇಘಶ್ರೀ ಅವರದ್ದು.
ಮೇಘಶ್ರೀ ಅವರು ಒಂಬತ್ತನೆಯ ಹರೆಯದಲ್ಲಿ, ಯೋಗ ಶಿಕ್ಷಕರಾದ ಹರಿರಾಜ್ ಶೆಟ್ಟಿಗಾರ್ ಅವರಲ್ಲಿ ಯೋಗಾಭ್ಯಾಸಕ್ಕೆ ತೊಡಗಿಕೊಂಡವರು. ಅವಕಾಶಗಳು ಬಾಗಿಲು ತಟ್ಟತೊಡಗಿದಾಗ ಕರ ಮುಗಿದು ಸದಾ ಸ್ವಾಗತಿಸಿದವರು ಮೇಘಶ್ರೀ. ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಎಂಟು ಬಾರಿ ಪ್ರಶಸ್ತಿ ಪಡೆದರೆ; ಜಿಲ್ಲಾ ಮಟ್ಟದಲ್ಲಿ ನಾಲ್ಕು ಬಾರಿ ಪ್ರಶಸ್ತಿ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಯಾಗಿ ಎರಡು ಸಲ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 2012 ರಲ್ಲಿ ನಡೆದ ’ಮುಕ್ತ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ. 2016-17ನೆಯ ಸಾಲಿನಲ್ಲಿ ಕಲ್ಲಡ್ಕದಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬಹುಮಾನಿತರಾಗಿ, ಬಳ್ಳಾರಿಯಲ್ಲಿ ನಡೆದಿದ್ದ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅನಂತರ ಕಿನ್ನಿಗೋಳಿ ರೋಟರಿ ಕ್ಲಬ್ ಆಯೋಜಿಸಿದ್ದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕಾಟಿಪಳ್ಯದಲ್ಲಿ ನಡೆದ ಸಾರ್ವಜನಿಕ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವರು. ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಅದ್ವಿತೀಯ ಯೋಗಪಟು ಎಂದು ಗೌರವಿಸಲ್ಪಟ್ಟಿದ್ದಾರೆ.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆ ಆಯೋಜಿಸಿದ್ದ ’ನನ್ನಲ್ಲಿ ಅನನ್ಯ’ (Unique in me) ಸ್ಪರ್ಧೆಯಲ್ಲಿ ನಲ್ವತ್ತು ವೈವಿಧ್ಯಮಯ ಪ್ರತಿಭೆಗಳೊಂದಿಗೆ ಮೇಘಶ್ರೀ ಅವರು ಯೋಗಾಸನ ಪ್ರದರ್ಶಿಸಿ 20,000 ರೂ. ಗಳ ನಗದು ಬಹುಮಾನ ಪಡೆದು ’ಬಂಗಾರದ ಹುಡುಗಿ’ ಎಂದು ಪುರಸ್ಕೃತರಾಗಿದ್ದಾರೆ. 2019 ರಲ್ಲಿ ಬಂಟ್ವಾಳದಲ್ಲಿ ನಡೆದ ’ಮುಕ್ತ ರಾಜ್ಯ ಮಟ್ಟದ’ ಯೋಗಾಸನ ಸ್ಪರ್ಧೆಯಲ್ಲಿ ಬಹುಮಾನಿತರಾಗಿದ್ದು, ಮೋತಿಮಹಲ್ ಹೋಟೆಲ್ ಮ್ಯಾನೇಜ್ಮೆಂಟ್ ಇವರು ಸಂಘಟಿಸಿದ್ದ ಪ್ರತಿಭಾನ್ವೇಷಣೆ (Talent Trace) 2020 ಅಂತರ- ಕಾಲೇಜು ಸ್ಪರ್ಧೆಯಲ್ಲಿ ’60 Second Frame’ ವಿಭಾಗದಲ್ಲಿ ಯೋಗಾಸನ ಮಾಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೇ, ಯೋಗಾಸನ ಪ್ರದರ್ಶನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ, ಚಿಕ್ಕಮಗಳೂರು, ಬಳ್ಳಾರಿ ಮುಂತಾದ ಜಿಲ್ಲೆಗಳಿಗೂ ವಿಸ್ತರಿಸಿದ್ದಾರೆ.
ಮೇಘಶ್ರೀ ಅವರು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧಿಸಿರುವ ಸಾಧನೆಗಳೊಂದಿಗೆ ವಿದ್ಯಾಭ್ಯಾಸವನ್ನು ಕಡೆಗಣಿಸಿದವರಲ್ಲ. 2014-15ರಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಜ್ಯ ಭಾಷೆ ಕನ್ನಡದಲ್ಲಿ 121/125 ಅಂಕಗಳನ್ನು ಪಡೆಯುವ ಮೂಲಕ ಸಾಂಸ್ಕೃತಿಕ ಕಲಾ ಕೇಂದ್ರ ಪುತ್ತೂರು ಇವರಿಂದ ’ಕನ್ನಡ ಕೌಸ್ತುಭ’ ಪ್ರಶಸ್ತಿ ಪಡೆದಿದ್ದಾರೆ. ’ಗಡಿನಾಡ ಮಾಸ ಪತ್ರಿಕೆ’ ಆಶ್ರಯದಲ್ಲಿ ನಡೆದ ಕರ್ನಾಟಕ ಗಡಿನಾಡ ಸಮ್ಮೇಳನ – 2016ರಲ್ಲಿ ’ಕನ್ನಡ ಧ್ವನಿ’ ಎಂಬ ಪ್ರತಿಷ್ಠಿತ ಬಿರುದಿಗೆ ಭಾಜನರಾಗಿದ್ದಾರೆ. 2019ರಲ್ಲಿ ’ಸುರಸರಸ್ವತಿ ಸಭಾ, ಶೃಂಗೇರಿ’ ಇವರು ಏರ್ಪಡಿಸಿದ್ದ ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ ಮಂಗಳೂರು ಕೆನರಾ ಕಾಲೇಜನ್ನು ಪ್ರತಿನಿಧಿಸಿದ ಮೇಘಶ್ರೀ ಅವರು 144/150 ಅಂಕಗಳನ್ನು ಪಡೆದು ವಿಶೇಷ ಯೋಗ್ಯತಾ ಶ್ರೇಣಿಯೊಂದಿಗೆ ರಜತ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೇಘಶ್ರೀ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಲ್ಲಂಜೆಯಿಂದ ಪಡೆದಿರುವರು. ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಮುಂದಿನ ವ್ಯಾಸಂಗವನ್ನು ಪೂರೈಸಿದರು. ಪದವಿ ಪೂರ್ವ ಶಿಕ್ಷಣವನ್ನು ವಿಜ್ಞಾನ ವಿಷಯದಲ್ಲಿ ಗಳಿಸಿದ ಮೇಘಶ್ರೀ ಇಂಜಿನಿಯರಿಂಗ್ ಮಾಡಬಹುದಿತ್ತು. ಆದರೆ ಯೋಗವಿದ್ಯೆಯಲ್ಲಿ ಏನಾದರೂ ಸಾಧನೆ ಮಾಡುವ ಪ್ರಬಲವಾದ ಒಳ ತುಡಿತದಿಂದ ಮಂಗಳೂರಿನ ಪ್ರತಿಷ್ಠಿತ ಕೆನರಾ ಕಾಲೇಜಿನಲ್ಲಿ ಬಿಎಸ್ಸಿ ಪದವಿಗೆ ಸೇರಿ ಇದೀಗ ಅಂತಿಮ ವರ್ಷದಲ್ಲಿದ್ದಾರೆ. ಶಾಲೆ, ಕಾಲೇಜುಗಳ ನಿಗದಿತ ಮತ್ತು ನಿಯಮಿತ ಅಧ್ಯಯನ, ಯೋಗ ಶಿಕ್ಷಣ, ಯಕ್ಷಗಾನಗಳಿಗೆ ಸೀಮಿತಗೊಳ್ಳದ ಈಕೆ ನೃತ್ಯ, ಚಿತ್ರಕಲೆ, ಭಾಷಣ, ಪ್ರಬಂಧ ಬರವಣಿಗೆ ಕಾರ್ಯಕ್ರಮ ನಿರೂಪಣೆ, ಕಲಾತ್ಮಕವಾಗಿ ಮೆಹಂದಿ ರಚನೆ ಮೊದಲಾದ ಲಲಿತ ಕಲೆಗಳಿಗೂ ತಮ್ಮ ಪ್ರತಿಭೆಯನ್ನು ವಿಸ್ತರಿಸಿಕೊಂಡಿರುವುದು ಕೇಳುಗರ ಕೌತುಕವನ್ನು ಉತ್ತೇಜಿಸುತ್ತದೆ.
ಮುಂದೆ ಯೋಗ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಆಶಿಸುವ ಇವರಿಗೆ ಹೆತ್ತವರ ಉತ್ತೇಜನ ಮತ್ತು ಹಾರೈಕೆಗಳು ಸದಾ ಬೆಂಗಾವಲಿಗಿವೆ. ಕೊಡೆತ್ತೂರು ಕವಿತಾ ಶೆಟ್ಟಿ ಮತ್ತು ದಯಾನಂದ ಶೆಟ್ಟಿ ಅವರ ಮುದ್ದಿನ ಮೊದಲ ಮಗಳು ಮೇಘಶ್ರೀ. ಇವರ ಅನುಜೆ ಕು. ಪ್ರೀತಿಕಾ ಶೆಟ್ಟಿ. ಗುರುಹಿರಿಯರ, ತಂದೆ ತಾಯಿಗಳ, ಬಂಧು ಬಾಂಧವರ, ಹಿತೈಷಿಗಳ ಹಾರೈಕೆ ಆಶೀರ್ವಾದಗಳಿಂದಲೂ, ತನ್ನ ಎಡೆಬಿಡದ ಪರಿಶ್ರಮದಿಂದಲೂ ಮೇಘಶ್ರೀ ಅವರ ಸಾಧನೆಗಳು ಗರಿಗೆದರಿ ಮುಗಿಲೆತ್ತರದಲ್ಲಿ ಹಾರಾಡಲಿ. ಈ ವನಸುಮದ ಸೌರಭ ನಾಲ್ದೆಸೆಗೂ ಪಸರಿಸಲಿ. ಇನ್ನೂ ನೂರಾರು ಮೈಲುಗಲ್ಲುಗಳನ್ನು ಕ್ರಮಿಸಲಿ. ತನ್ಮೂಲಕ ಭವಿತವ್ಯದ ಬದುಕು ಹಸನಾಗಲಿ ಎಂದು ಆಶಿಸೋಣ.
ಲೇಖನ: ಕಿರಣ್ ಶೆಟ್ಟಿ ಅತ್ತೂರ್
ಸಹಕಾರ: ಉದಯ ಶೆಟ್ಟಿ ಪಂಜಿಮಾರ್
Get in Touch With Us info@kalpa.news Whatsapp: 9481252093
Discussion about this post