ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕಳೆದ ಮುಂಗಾರು ಅವಧಿಯಲ್ಲಿ ರಾಜ್ಯದಾದ್ಯಂತ ಬಿದ್ದ ಕುಂಭದ್ರೋಣ ಮಳೆಯಿಂದಾಗಿ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿಯಲ್ಲಿ ಉಂಟಾಗಿದ್ದ ಭೂಕುಸಿತ ಉಂಟಾಗಿದ್ದ ಸ್ಥಳದಲ್ಲಿ ಸ್ವಾತಂತ್ರ್ಯ ಪೂರ್ವದ ಕೆಲವು ದಶಕಗಳ ಹಿಂದೆ ಗಣಿಗಾರಿಕೆ ನಡೆದಿತ್ತು ಎಂಬ ಬಗ್ಗೆ ಕುರುಹುಗಳು ದೊರೆತಿದ್ದು, ಇನ್ನಷ್ಟು ಮಾಹಿತಿ ಕಲೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯ ಭೂಕುಸಿತ ಅಧ್ಯಯನ ಸಮಿತಿ ಹಾಗೂ ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಅವರು ನಿನ್ನೆ ಹೆಗಲತ್ತಿ ಗ್ರಾಮಕ್ಕೆ ಅರಣ್ಯಾಧಿಕಾರಿಗಳು, ಕಂದಾಯಾಧಿಕಾರಿಗಳು, ತಜ್ಞರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಈ ಪ್ರದೇಶದಲ್ಲಿನ ನಿವಾಸಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಅಗತ್ಯವೆಂದಾದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಈ ಕುರಿತು ತಹಶೀಲ್ದಾರರು ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಭೂಕುಸಿತದಿಂದಾಗಿ ರೈತರಿಗೆ ಅಪಾರ ಹಾನಿ ಉಂಟಾಗಿರುವುದನ್ನು ಗಮನಿಸಲಾಗಿದೆ. ಸಂತ್ರಸ್ಥರಿಗೆ ಸರ್ಕಾರ ಭಾಗಶಃ ಪರಿಹಾರ ಧನ ವಿತರಿಸಿದೆ. ಆದಾಗ್ಯೂ ಮೂಡಿಗೆರೆ ಮಾದರಿಯಲ್ಲಿ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಅವರು ತಿಳಿಸಿದರು.
ಭಾರತೀಪುರದ ಎಡಗುಡ್ಡೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಇಲ್ಲಿನ ಸ್ವಾಭಾವಿಕ ಅರಣ್ಯ ಪ್ರದೇಶದಲ್ಲಿ ಏಕಜಾತಿ ನೆಡುತೋಪು ನಿರ್ಮಾಣ ಮಾಡುವುದು ಬೇಡ ಎಂದು ಅರಣ್ಯಾಧಿಕಾರಿಗಳಿಗೆ ಸಲಹೆ ನೀಡಲಾಗಿದೆ. 400 ಎಕರೆ ಅರಣ್ಯ ಕಣಿವೆ ರಕ್ಷಣೆಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಗೇರು ಅಭಿವೃದ್ಧಿಗಾಗಿ ಗೇರು ಅಭಿವೃದ್ಧಿ ನಿಗಮದ ಯೋಜನೆಯಂತೆ ಪ್ರತ್ಯೇಕ ನೆಡುತೋಪು ಮಾಡುವಂತೆಯೂ ಸೂಚಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಅರಣ್ಯ ಕಾನು ಅಭಿವೃದ್ಧಿ ಮಾಡುವ ಕುರಿತು ಕುರುವಳ್ಳಿ ಕೃಷಿ ಪ್ರಯೋಗ ಪರಿವಾರದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್, ಸಹಾಯಕ ಅರಣ್ಯಾಧಿಕಾರಿ, ವಲಯ ಅರಣ್ಯಾಧಿಕಾರಿಗಳು, ವಿಜ್ಞಾನಿಗಳು, ಪರಿಸರವಾದಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post