ಕಲ್ಪ ಮೀಡಿಯಾ ಹೌಸ್ | ಮಿಜೋರಾಂನಿಂದ ಪ್ರತ್ಯಕ್ಷ ವರದಿ-4 |
ಸುಮಾರು 5300 ಕಿಲೋ ಮೀಟರ್’ಗೂ ಅಧಿಕ ಗಡಿ ಪ್ರದೇಶ, 1132 ಮೀಟರ್ ಸಮುದ್ರ ಮಟ್ಟದಿಂದ ಎತ್ತರ, ವಿಭಿನ್ನ, ವಿಶಿಷ್ಠ ಪ್ರಾಕೃತಿಕ ಸಂಪತ್ತಿನ ಸೌಂದರ್ಯದ ಜೊತೆಯಲ್ಲಿ ಭಯಾನಕ ಪ್ರಪಾತ, ಕಣಿವೆಗಳನ್ನೂ ಸಹ ಹೊಂದಿರುವ ರಾಜ್ಯ. ಅದೇ ಮಿಜೋರಾಂ.
ಇಲ್ಲಿನ ಭೌಗೋಳಿಕ ಪ್ರದೇಶ ಹೇಗಿದೆ ಎಂದರೆ ಐಜ್ವಾಲ್ ಸೇರಿದಂತೆ ಇಡೀ ಮಿಜೋರಾಂ ರಾಜ್ಯದ ಜನರ ಜೀವನವೇ ಅಕ್ಷರಶಃ ಒಂದು ಸಾಹಸ.
ಸ್ಥಳೀಯ ಮೀಜೋ ಭಾಷೆಯಲ್ಲಿ ಮಿಜೋರಾಂ ಎಂದರೆ ಬೆಟ್ಟಗಳಲ್ಲಿ ವಾಸಿಸುವ ಜನರರಿವ ಸ್ಥಳ. ಬೃಹತ್ ಪರ್ವತಗಳು, ದಟ್ಟಾರಣ್ಯದ ನಡುವೆ ತನ್ನದೇ ಆದ ರೀತಿಯಲ್ಲಿ ರೂಪುಗೊಂಡಿರುವ ಮಿಜೋರಾಂ ಅದರಲ್ಲೂ ಐಜ್ವಾಲ್’ಗೆ ಈಗ ಹೊಸದೊಂದು ಜೀವಕಳೆ ಬಂದಿದೆ.
ಯೋಜನೆಯ ಹಿನ್ನೆಲೆ
ಸೈರಾಂಗ್ – ಬೈರಾಬಿ ರೈಲು ಸಂಪರ್ಕಕ್ಕಾಗಿ ಪ್ರಾಥಮಿಕ ಇಂಜಿನಿಯರಿಂಗ್ ಮತ್ತು ಸಂಚಾರ ಸಮೀಕ್ಷೆ (ಪಿಇಟಿ)ಯನ್ನು ಈಶಾನ್ಯ ಗಡಿನಾಡು ರೈಲ್ವೆಗಳು ಮಾರ್ಚ್ 2006 ರಲ್ಲಿ ನಡೆಸಿದ್ದವು. ಇದರ ಆಧಾರದ ಮೇಲೆ, ಬೈರಾಬಿ-ಸೈರಾಂಗ್’ನಿಂದ ಹೊಸ ರೈಲ್ವೆ ಮಾರ್ಗಕ್ಕಾಗಿ 2008 ರಲ್ಲಿ ನಿರ್ಮಾಣ ಪೂರ್ವ ಸಮೀಕ್ಷೆ ಮತ್ತು ಭೂ-ತಾಂತ್ರಿಕ ತನಿಖೆಯನ್ನು ಕೈಗೊಳ್ಳಲು ಆರ್’ಐಟಿಇಎಸ್ ಅನ್ನು ಕೇಳಲಾಯಿತು. ಅದರಂತೆ, ಆರ್’ಐಟಿಇಎಸ್ ತನ್ನ ಅಂತಿಮ ವರದಿಯನ್ನು ಆಗಸ್ಟ್ 2011 ರಲ್ಲಿ ಸಲ್ಲಿಸಿತು.
ಎನ್’ಎಫ್ ರೈಲ್ವೇಸ್ 2014-2015 ರ ವೇಳೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು ಮತ್ತು ಒಂದು ವರ್ಷದ ನಂತರ, 2015-16 ರಲ್ಲಿ, ಅದು ಪೂರ್ಣ ಪ್ರಮಾಣದಲ್ಲಿ ನಿರ್ಮಾಣವನ್ನು ಪ್ರಾರಂಭಿಸಿತು.
ದಕ್ಷಿಣ, ಉತ್ತರ ಸೇರಿ ಭಾರತದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈಶಾನ್ಯ ರಾಜ್ಯಗಳ ಜನರು ಹೆಚ್ಚು ಶ್ರಮಜೀವಿಗಳು. ಪಪ್ರಮುಖವಾಗಿ ಮಿಜೋರಾಂನ ಪ್ರತ್ಯಕ್ಷ ಅನುಭವ ಹೇಳುವುದಾದರೆ ಇಲ್ಲಿನ ಭೌಗೋಳಿಕ ಪರಿಸ್ಥಿತಿಯಲ್ಲಿ ಇಲ್ಲಿನ ಜನರ ಜೀವನವೇ ಸವಾಲಿನದ್ದು. ಕೃಷಿಯೇ ಮೂಲವಾಗಿರುವ ಇಲ್ಲಿನ ಜನರಿಗೆ ಬೃಹತ್ ಕೈಗಾರಿಕೆಗಳು, ದೊಡ್ಡ ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳು ಎನ್ನುವುದು ಮರೀಚಿಕೆಯಾಗಿದೆ.
ಪ್ರಮುಖವಾಗಿ, ವಾಯು ಹಾಗೂ ರಸ್ತೆ ಮಾರ್ಗವೇ ಇಲ್ಲಿಗೆ ಈವರೆಗೂ ಆಧಾರವಾಗಿತ್ತು. ಅಲ್ಲಿನ ರಸ್ತೆ ಮಾರ್ಗ ಅತ್ಯಂತ ಕಠಿಣವಾದುದು.
ಬೈರಾಬಿ-ಸೈರಾಂಗ್ ಹೊಸ ರೈಲು ಮಾರ್ಗ ಯೋಜನೆಯು ಮೊದಲ ಬಾರಿಗೆ ರಾಜ್ಯ ರಾಜಧಾನಿ ಐಜ್ವಾಲ್’ಗೆ ನೇರ ರೈಲು ಸಂಪರ್ಕವನ್ನು ಕಲ್ಪಿಸಿದೆ. ಈ ಐತಿಹಾಸಿಕ ಸಾಧನೆಯು ಪ್ರಯಾಣಿಕರು ಮತ್ತು ಸರಕು ಸಾಗಣೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಮಿಜೋರಾಂ ಜನರ ದೀರ್ಘಕಾಲದ ಆಕಾಂಕ್ಷೆಯನ್ನು ಪೂರೈಸುತ್ತದೆ.
ಸಿಲ್ಚಾರ್’ನಿಂದ ಐಜ್ವಾಲ್’ಗೆ ರಸ್ತೆಯ ಮೂಲಕ ಒಂದು ಇಡೀ ದಿನದ ಪ್ರಯಾಣ ಬೇಸರದ ಸಂಗತಿಯಾಗಿತ್ತು. ಪ್ರಯಾಣಿಕ ಮತ್ತು ಸರಕು ಸಾಗಣೆ ಎರಡೂ ರೈಲು ಸೇವೆಗಳು ಕೈಗೆಟುಕುವ ದರಗಳು ಮತ್ತು ಸುಂಕಗಳನ್ನು ನೀಡುವ ಮೂಲಕ ಸಂಪರ್ಕದಲ್ಲಿ ಹೆಚ್ಚು ಅಗತ್ಯತೆಗಳನ್ನು ಪೂರೈಸುತ್ತದೆ. ಎರಡೂ ಸ್ಥಳಗಳ ನಡುವಿನ ರಸ್ತೆ ಅಂತರವು 172 ಕಿಲೋ ಮೀಟರ್ ಆಗಿದ್ದರೆ, ರೈಲು ಅಂತರವು 154 ಕಿಲೋ ಮೀಟರ್ ಆಗಿದೆ. ಇದು, ಪ್ರಯಾಣದ ಸಮಯವು ನಾಲ್ಕು ಗಂಟೆಗಳಿಗಿಂತ ಕಡಿಮೆಯಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ನೂತನ ರೈಲು ಮಾರ್ಗದಿಂದ ಮಿಜೋರಾಂನಿಂದ ಹೊರಭಾಗಕ್ಕೆ ರಫ್ತು ಮಾಡಲು ಅದರಲ್ಲು ಕಡಿಮೆ ವೆಚ್ಚದಲ್ಲಿ ಸಾಗಾಟ ಮಾಡಲು ಅನುಕೂಲವಾಗಲಿದೆ.
ಅಲ್ಲದೇ, ಇಲ್ಲಿಗೆ ಅಗತ್ಯವಿರುವ ವಸ್ತುಗಳನ್ನು ಹೊರಗಿನಿಂದ ಸರಬರಾಜು ಮಾಡುವ ಕಾರ್ಯಕ್ಕೂ ಸಹ ಅನುಕೂಲವಾಗುತ್ತದೆ.
ಪ್ರಾಕೃತಿಕ ಸೊಬಗಿನ ಈ ಪ್ರದೇಶದಲ್ಲಿ ನೂತನ ರೈಲು ಮಾರ್ಗ ಪ್ರವಾಸೋದ್ಯಮಕ್ಕೆ ರಾಜಪಥವನ್ನು ತೆರೆಯಲಿದೆ. ಇದಕ್ಕೆ ಪೂರಕವಾಗಿ, 2025ರ ಆಗಸ್ಟ್’ನಲ್ಲಿ ಐಅರ್’ಸಿಟಿಸಿಯು ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಒಪ್ಪಂದ ಮಾಡಿಕೊಂಡಿದೆ.
ಪ್ರಮುಖವಾಗಿ, ಮಿಜೋರಾಂ ಜನರ ಸಾಂಪ್ರದಾಯಿಕ ಹಸ್ತಕಲೆ, ವಸ್ತ್ರ ಹಾಗೂ ಕೃಷಿ ಸಂಬಂಧಿತ ವ್ಯಾಪಾರಗಳಿಗೆ ಇದು ಬಾಗಿಲು ತೆರೆಯಲಿದೆ. ಈ ಮೂಲಕ ಇಲ್ಲಿನ ಜನರ ಜೀವನ ಸುಧಾರಣೆಯಾಗಲಿದೆ.
ಈ ನೂತನ ರೈಲು ಮಾರ್ಗ ರಾಷ್ಟ್ರೀಯ ಸಂಪರ್ಕ ಜಾಲಕ್ಕೆ ಸೇರಿಕೊಳ್ಳುವ ಹಿನ್ನೆಲೆಯಲ್ಲಿ ಐಜ್ವಾಲ್ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಹದಾರಿಯಾಗಲಿದೆ.
(ಸೈರಾಂಗ್-ಬೈರಾಬಿ ನಡುವಿನ ಈ ಯೋಜನೆಯ ಪ್ರತ್ಯಕ್ಷ ಅನುಭವ ಪಡೆಯಲು ಭಾರತೀಯ ರೈಲ್ವೆ ಆಯೋಜಿಸಿದ್ದ ಮೂರು ದಿನಗಳ ಕ್ಷೇತ್ರ ಭೇಟಿಯಲ್ಲಿ ಕಲ್ಪ ನ್ಯೂಸ್ ಸಂಪಾದಕರು ಪಾಲ್ಗೊಂಡಿದ್ದ ಖುದ್ಧು ಅನುಭವದ ಲೇಖನ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post