ತೀರ್ಥಹಳ್ಳಿ: ಸುಳ್ಳು ಭರವಸೆಗಳನ್ನು ನೀಡಿದ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ, ದೇಶದ ರೈತರನ್ನು ಕಡೆಗಣಿಸಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ತೀರ್ಥಹಳ್ಳಿಯಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಪ್ರಬುದ್ಧರು ಹಾಗೂ ಸುಸಂಸ್ಕೃತರು ಸಜ್ಜನರಿದ್ದು, ಈ ಹಿಂದಿನ ಎಲ್ಲ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿಕೊಂಡು ಬಂದಿರುವ ಹೆಗ್ಗಳಿಕೆ ಇದೆ ಎಂದಿದ್ದಾರೆ.
ಇತ್ತೀಚೆಗೆ ಶಾಂತವೇರಿ ಗೋಪಾಲ ಗೌಡರು ಜನ್ಮವೆತ್ತಿದ ಹಾಗೂ ಕುವೆಂಪು ಅವರು ಹುಟ್ಟಿದ ಈ ಮಣ್ಣಿನಲ್ಲಿ ಕೋಮುವಾದಿಗಳ ಅಬ್ಬರ ಹೆಚ್ಚಾಗಿರುವುದು ನೋವಿನ ಸಂಗತಿ. ಈಗಿನ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು ಕಳೆದ ಐದು ವರ್ಷಗಳಲ್ಲಿ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ನಮ್ಮೆಲ್ಲರಿಗೂ ತಿಳಿದ ವಿಷಯ. ಒಂದು ವರ್ಷಕ್ಕೆ ಒಂದು ಕೋಟಿ ಉದ್ಯೋಗವನ್ನು ನೀಡುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದು, ಈ ದೇಶದ ಕೋಟ್ಯಂತರ ಯುವಕರನ್ನು ನಿರುದ್ಯೋಗ ಸಮಸ್ಯೆ ಕಾಡುವಂತೆ ಮಾಡಿ ಕೋಟ್ಯಂತರ ಯುವಕರು ಇವತ್ತು ನಿರುದ್ಯೋಗಿಗಳಾಗಿ ಅನಾಥ ಪ್ರಜ್ಞೆ ಕಾಡುವಂತೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ನೋಟ್ ಬ್ಯಾನ್ ಮುಖಾಂತರ ಆರ್ಥಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲ ಆಗುವಂತೆ ತಪ್ಪು ಹೆಜ್ಜೆಯನ್ನಿಟ್ಟು ಸರ್ವಾಧಿಕಾರಿ ಧೋರಣೆ ತೋರಿದೆ. ಜಿಎಸ್’ಟಿ ಜಾರಿಯಿಂದ ಸಣ್ಣಪುಟ್ಟ ವ್ಯಾಪಾರಸ್ಥರು ಸಣ್ಣಪುಟ್ಟ ಉದ್ದಿಮೆದಾರರು ಇವತ್ತು ತಮ್ಮ ಉದ್ಯೋಗವನ್ನು ಬಂದ್ ಮಾಡಿ ನಷ್ಟವನ್ನು ಅನುಭವಿಸುವಂತಾಗಿದೆ. ರಾಮನ ಹೆಸರು ಹೇಳಿ ಅಧಿಕಾರಕ್ಕೆ ಬಂದ ಇವರು ಈಗ ರಾಮನ ಜಪವನ್ನು ಮರೆತು ಮೋದಿ ಜಪ ಮಾಡಿ ಮತ್ತೆ ಅಧಿಕಾರಕ್ಕೆ ಬಂದು ತಮ್ಮ ದುರಾಡಳಿತವನ್ನು ಮುಂದುವರಿಸುವ ಅಪಾಯವಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಜಾತ್ಯತೀತ ರಾಷ್ಟ್ರದ ಗಟ್ಟಿಯ ನೆಲೆಗಟ್ಟಾಗಿ ಜಾತ್ಯತೀತ ಪಕ್ಷಕ್ಕೆ ಮತ ನೀಡುವ ಅವಶ್ಯಕತೆ ಇದೆ ಎಂದರು.
ರಾಜ್ಯದ ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ವರ್ಗದ ರೈತರ, ಕಾರ್ಮಿಕರ, ಮಹಿಳೆಯರ, ಯುವಕರ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕಳೆದ ಬಜೆಟ್’ನಲ್ಲಿ ಶಿವಮೊಗ್ಗ ಜಿಲ್ಲೆಗೆ ಅತಿ ಹೆಚ್ಚು ನೀರಾವರಿ ಯೋಜನೆಗೆ, ವಿಮಾನ ನಿಲ್ದಾಣಕ್ಕೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಹೆಚ್ಚು ಅನುದಾನವನ್ನು ನೀಡಿ ಅಭಿವೃದ್ಧಿಯತ್ತ ಶಿವಮೊಗ್ಗ ಜಿಲ್ಲೆ ಕೊಂಡೊಯ್ಯುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ ಎಂದರು.
ಮುಖ್ಯವಾಗಿ ಈ ಜಿಲ್ಲೆಯ ಬಗರ್ ಹುಕುಂ ರೈತರ ಸ್ವಾಭಿಮಾನವನ್ನು ಅವರ ಬದುಕನ್ನು ಕಾಪಾಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಸುಪ್ರೀಂ ಕೋರ್ಟ್’ನ ಆದೇಶದ ಮೇಲೆ ಮೇಲ್ಮನವಿಯನ್ನು ಸಲ್ಲಿಸದೇ ಬೇಜವಾಬ್ದಾರಿಯನ್ನು ನಿರ್ವಹಿಸಿರುವ ಸಂಸದರನ್ನು ನಾವು ನೋಡಿದ್ದೇವೆ. ಈ ಹಿಂದಿನ ಎಲ್ಲ ಚುನಾವಣೆಗಳನ್ನು ಬಂಗಾರಪ್ಪ ಅವರನ್ನು ತಾವುಗಳು ಬೆಂಬಲಿಸಿ ಆಶೀರ್ವದಿಸಿದ್ದಾರೆ. ಅದೇ ರೀತಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಕೂಡ ಬೆಂಬಲಿಸಿ ಆಶೀರ್ವದಿಸಿ ಅತಿ ಹೆಚ್ಚಿನ ಮತದಿಂದ ಆಯ್ಕೆಯಾಗಲು ಎಲ್ಲ ಕಾರ್ಯಕರ್ತರು ಮುಖಂಡರು ಸಹಕರಿಸಬೇಕಾಗಿ ವಿನಂತಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ ಗೌಡರು, ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ, ಜಿಲ್ಲಾ ಕಾಂಗ್ರೆಸ್ ಮುಖಂಡ ಮಂಜುನಾಥ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಭೆಯಲ್ಲಿ ಉಪಸ್ಥಿತರಿದ್ದರು.
Discussion about this post