ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಮುಸಿಯಾವೊಂದು ಜನರ ಮೇಲೆ ಏಕಾಏಕಿ ಎರಗಿ ದಾಳಿ ನಡೆಸುತ್ತಿರುವ ಘಟನೆ ಭೀತಿ ಮೂಡಿಸಿದೆ. ಈ ಘಟನೆಗಳಿಂದ ಗ್ರಾಮಸ್ಥರು ಆತಂಕದಲ್ಲಿದ್ದು, ದಿನನಿತ್ಯ ಜೀವನದಲ್ಲೇ ಭಯಭೀತ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ 15 ವರ್ಷದ ಬಾಲಕನ ಮೇಲೆ ಮುಸಿಯಾ ದಾಳಿ ನಡೆಸಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಲಕನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗಾಯಗೊಂಡ ಬಾಲಕನ ಚಿಕಿತ್ಸಾ ವೆಚ್ಚವನ್ನು ಇಲಾಖೆ ಭರಿಸುವುದಾಗಿ ಭರವಸೆ ನೀಡಿದರು.
Also read>> ವಿದ್ಯಾರ್ಥಿಗಳು ಕಲಿಕೆಯಲ್ಲಿ ಕ್ರಿಯಾಶೀಲ ಮನೋಭಾವ ಹೊಂದಬೇಕು: ಡಿ. ಮಂಜುನಾಥ
ಇದೇ ಮುಸಿಯಾ ಸುಮಾರು ಹದಿನೈದು ದಿನಗಳ ಹಿಂದೆ ಮೈದೊಳಲು ಗ್ರಾಮದಲ್ಲಿಯೂ ಜನರ ಮೇಲೆ ದಾಳಿ ನಡೆಸಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಅದೇ ವೇಳೆ, ಈ ಮುಸಿಯಾವನ್ನು ಈಗಾಗಲೇ ಸೆರೆ ಹಿಡಿದಿರುವುದಾಗಿ ಹೇಳಿಕೊಂಡ ಕೋತಿ ಹಿಡಿಯುವವರು ಅರಣ್ಯಾಧಿಕಾರಿಗಳಿಂದ ₹30,000 ಮೊತ್ತ ಪಡೆದಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಮುಸಿಯಾ ಉಪಟಳದಿಂದ ಗ್ರಾಮಸ್ಥರು, ವಿಶೇಷವಾಗಿ ಮಕ್ಕಳು ಹೊರಗೆ ಓಡಾಡಲು ಸಹ ಹೆದರುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಈ ಮುಸಿಯಾವನ್ನು ಶೀಘ್ರದಲ್ಲೇ ಸೆರೆ ಹಿಡಿಯುವಂತೆ ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










