ರಂಗಶಂಕರದಲ್ಲಿ ಕಡಲತೀರದ ಭಾರ್ಗವ ಕೋಟ ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು ” ನಾಟಕ. ಇಂಡಿಯಾ, ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಮ್ಯಾಚ್ ಇದ್ದಾಗ್ಯೂ ತುಂಬಿದ ರಂಗಮಂದಿರ. ಜ್ಞಾನಪೀಠ ಪ್ರಶಸ್ತಿ ಪಡೆದಿರುವ “ಮೂಕಜ್ಜಿಯ ಕನಸುಗಳು ” ಕಾದಂಬರಿಯನ್ನು ವೇದಿಕೆಯ ಮೇಲೆ ತರುವುದು ಸಾಮಾನ್ಯ ವಿಷಯವಲ್ಲ.
ಕಾದಂಬರಿಯಲ್ಲಿ ಇರುವಂತೆಯೇ ಮೂಕಜ್ಜಿಯ ಕನಸಿನಲ್ಲಿ ಮೂಡಿ ಬಂದಿರುವಂತೆಯೇ ಹಿಂದು, ಜೈನ, ಬುದ್ಧ, ವೈದಿಕಧರ್ಮ, ಜೊತೆ ಜೊತೆಯಲ್ಲಿ ಯೇ ಮೂಡಿದ ನಾಗರೀಕತೆಯ ಬದಲಾವಣೆಗಳು ಎಲ್ಲವೂ ಶ್ಲಾಘನೀಯ. ರಂಗಸಜ್ಜಿಕೆಯ ನಿರ್ವಹಣೆ ಅದ್ಭುತ. ಅದಕ್ಕಾಗಿ ಶ್ರಮಿಸಿದ ತೆರೆಯ ಹಿಂದಿನ ಕಲಾವಿದರಿಗೆ ಅಭಿನಂದನೆಗಳು.
ಪಾತ್ರಧಾರಿಗಳು ಆ ಪಾತ್ರಗಳಲ್ಲಿ ಲೀನವಾಗಿ, ಲೀಲಾಜಾಲವಾಗಿ ನಟಿಸಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಎಲ್ಲ ಪಾತ್ರಗಳ ಸೇತುವಾಗಿ ಮಂಗಳ ಅವರ ಅಭಿನಯ, ಮಾಣಿಯಾಗಿ ಸಿದ್ಧಾರ್ಥ, ಸೀತೆಯಾಗಿ ವಿದ್ಯಾ, ತಿಪ್ಪಜ್ಜಿಯಾಗಿ ಲೀಲಾಬಸವರಾಜು ಇವರುಗಳ ಅಭಿನಯ ಅಮೋಘ.
ಮೂಕಜ್ಜಿಯ ಹಾಗು ತಿಪ್ಪಜ್ಜಿ ಬಾಲ್ಯ ಗೆಳತಿಯರ ಸಮ್ಮಿಲನ ರಂಗಾಸಕ್ತರ ಹೃದಯದಲ್ಲಿ ಅಚ್ಚೊತ್ತಿದೆ. ಅದೇ ರೀತಿಯಲ್ಲಿ ತಿಪ್ಪಜ್ಜಿ ಹಾಗು ಮಾಣಿಯ ಭೇಟಿಯ ದೃಶ್ಯ, ಇಲ್ಲಿ ಲೀಲಾ ಬಸವರಾಜು ಅವರ ಅಭಿನಯದ ಬಗ್ಗೆ ಹೇಳಲೇ ಬೇಕು. ಈ ವಯಸ್ಸಿನಲ್ಲಿ, ಅವರ ಸಂಭಾಷಣೆಯಲ್ಲಿನ ದೃಡತೆ, ಸನ್ನಿವೇಶಕ್ಕೆ ತಕ್ಕಂತೆ ರಸಭಾವ, body language ಎಲ್ಲವೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. ಎಪ್ಪತ್ಮೂರರ ಈ ಕಲಾವಿದೆ ಇಂದಿನ ಕಲಾವಿದರಿಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು.
ಪ್ರತಿಯೊಬ್ಬ ಸಣ್ಣ ಸಣ್ಣ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ನ್ಯಾಯಸಲ್ಲಿಸಿ ಈ ಪ್ರಯೋಗ 50 ಪ್ರದರ್ಶನ ಕಂಡು ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಶಿವರಾಮ ಕಾರಂತರಿಗೆ ಸಾಹಿತ್ಯ ನಮನ ಸಲ್ಲಿಸಿದ್ದಾರೆ. ಈ ಎಲ್ಲದಕ್ಕೂ ಕಾರಣೀಭೂತರಾದ ಡಾ: ಬಿ. ವಿ. ರಾಜಾರಾಂ ನಿರ್ದೇಶನದಲ್ಲಿ ಪ್ರೇಕ್ಷಕರ ಮನಸೆಳೆದು ಸದಭಿರುಚಿ ಹೆಚ್ಚುವಂತೆ ಮಾಡಿ ಜನರನ್ನು ನಾಟಕಗಳಿಗೆ ಬರುವಂತೆ ಮಾಡಿದೆ ಎಂಬುದು ಗಮನಾರ್ಹ.
-ಡಾ.ಗುರುರಾಜ ಪೋಶೆಟ್ಟಿಹಳ್ಳಿ
Discussion about this post