ಕಲ್ಪ ಮೀಡಿಯಾ ಹೌಸ್ | ವಿಶೇಷ ಸಂದರ್ಶನ: ಶಿವಮೊಗ್ಗ ರಘುರಾಮ |
ಪ್ರಖ್ಯಾತ ಪಿಟೀಲು ವಿದ್ವಾಂಸ ಡಾ.ಮೈಸೂರು ಮಂಜುನಾಥ್ ಅವರು ಇಂಗ್ಲೆಂಡ್’ನ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡಲು ಆಯ್ಕೆಯಾಗಿದ್ದಾರೆ. ವಿವಿಯ ಸಂಗೀತ ಮತ್ತು ಲಲಿತ ಕಲೆಗಳ ವಿಭಾಗದಲ್ಲಿ ಮಂಜುನಾಥ್ `ಕರ್ನಾಟಕ ಶಾಸ್ತ್ರೀಯ ಸಂಗೀತ’ ವಿಷಯ ಕುರಿತು ಮಾ. 9ರಂದು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. `ಸೌಂಡ್ಸ್ ಆಫ್ ಸೌತ್ ಏಷ್ಯಾ’ ಸರಣಿ ಕಾರ್ಯಕ್ರಮದಲ್ಲಿ ಆಕ್ಸ್ಫರ್ಡ್ ವಿವಿ ಉಪನ್ಯಾಸಕ್ಕೆ ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ವಿದ್ವಾಂಸ ಎಂಬ ಕೀರ್ತಿಗೆ ಮಂಜುನಾಥ್ ಭಾಜನರಾಗಿರುವುದು ಬಹಳ ವಿಶೇಷ. ಈ ಶುಭ ಸಂದರ್ಭದಲ್ಲಿ ಅವರು ಲೇಖಕ ಶಿವಮೊಗ್ಗ ರಘುರಾಮ್ ಅವರೊಂದಿಗೆ ಸೋದಾಹರಣವಾಗಿ ತಮ್ಮ ಅಂತರಂಗದ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕನಸುಗಳನ್ನು ಬಿಡಿಸಿ ಇಟ್ಟಿದ್ದಾರೆ. ನೆಲದಲ್ಲಿ ಬೇರು ಬಿಡುವುದರೊಂದಿಗೆ ನಕ್ಷತ್ರಗಳಲ್ಲೂ ನಮ್ಮ ಟೊಂಗೆಗಳು ವಿಸ್ತರಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೃದಯದ ಭಾಷೆಯಿಂದ ಬಿಂಬಿಸಿದ್ದಾರೆ. ಅವುಗಳ ಸಂಗ್ರಹಿತ ಅಕ್ಷರರೂಪ ನಮ್ಮ ಓದುಗ ದೊರೆಗಳಿಗಾಗಿ ಇಲ್ಲಿ ಅರಳಿಸಿ ಇಡಲಾಗಿದೆ.
ಬನ್ನಿ. ಓದಿ ….
ಎಲ್ಲ ಮಾನ್ಯತೆಗಳೂ ನನ್ನ ತಂದೆಗೆ ಸಮರ್ಪಣೆ
ನನಗೆ ಯಾವುದೇ ಸ್ಥಾನಮಾನ, ಮನ್ನಣೆ, ಕಛೇರಿ, ಪ್ರಶಸ್ತಿ- ಪುರಸ್ಕಾರ-ಹೀಗೆ ಏನೆಲ್ಲಾ ಬಂದರೂ ಅದರ ಕೀರ್ತಿ ಮತ್ತು ಪತಾಕೆಗಳು ನನ್ನ ತಂದೆ ವಿದ್ವಾನ್ ಶ್ರೀ ಮಹದೇವಪ್ಪನವರಿಗೆ ಸಮರ್ಪಣೆ ಮಾಡುವೆ ಎಂದು ಅತ್ಯಂತ ವಿಧೇಯತೆಯಿಂದ ಹೇಳುತ್ತಾರೆ ಡಾ. ಮೈಸೂರು ಮಂಜುನಾಥ್. ಹೌದು. ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೆಸರನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ವಯೋಲಿನ್ ಮಾಂತ್ರಿಕ ಹೀಗೆ ಹೇಳುವುದು ಅವರ ಸಂಸ್ಕೃತಿ, ಸಂಸ್ಕಾರ, ಕುಟುಂಬ ವಾತ್ಸಲ್ಯ ಮತ್ತು ಹೆತ್ತವರ ಬಗೆಗಿನ ಅದಮ್ಯ ಅಭಿಮಾನ, ಗುರುವೂ ಆದ ತಂದೆ ಬಗ್ಗೆ ಅಪಾರ ಗೌರವವನ್ನು ಬಿಂಬಿಸುತ್ತದೆ.
ಆಕ್ಸ್ಫರ್ಡ್ ವಿವಿಯಲ್ಲಿ ಮಾ. 9ರಂದು ಪ್ರಾತ್ಯಕ್ಷಿಕೆ ನೀಡಲು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರು ಕೆಲ ಸಮಯವನ್ನು ಬಿಡುವು ಮಾಡಿಕೊಂಡು ನನ್ನೊಂದಿಗೆ ಮಾತಿಗಿಳಿದರು. ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಗಳ ಬಗ್ಗೆ ಎಚ್ಚರದ ಮಾತುಗಳನ್ನು ಹೇಳಿದ್ದು ಬಹಳ ವಿಶೇಷ.
ನಾವು ಕೇವಲ ನಮ್ಮ ಸಂಗೀತವನ್ನು ಮಾತ್ರ ಕೇಳುವುದಲ್ಲ, ಇತರ ದೇಶ-ಭಾಷೆ-ನಾಡಿನಲ್ಲಿರುವ ಗಾನದ ಇಂಪಿನ ಪರಿಮಳವನ್ನೂ ಕೊಂಚ ತಿಳಿದಿರಬೇಕು. ಇಷ್ಟು ಮಾತ್ರವಲ್ಲ, ನಮ್ಮದನ್ನೂ ಅವರಿಗೆ ತಿಳಿಸುವಲ್ಲಿ ಸದಾ ಮುಂದೆ ಇರಬೇಕು ಎಂಬುದು ಅವರ ಅಂತರಂಗದ ಕಳಕಳಿ. ಸತನಾತನವಾದ, ಸದಾ ಆನಂದವನ್ನೇ ನೀಡುವ, ಅಧ್ಯಾತ್ಮವನ್ನೂ ಸ್ಫುರಣೆ ಮಾಡುವ- ಒಟ್ಟಾರೆ ಯಾವುದೇ ದೇಶ ಕಾಲಕ್ಕೂ ಸ್ಪಂದಿಸುವ ಮಹತ್ವ ನಮ್ಮ ಕರ್ನಾಟಕ ಶಾಸ್ತಿçÃಯ ಸಂಗೀತಕ್ಕೆ ಇದೆ. ವಿದೇಶದ ಕಲಾ ರಸಿಕರಿಗೆ ನಮ್ಮ ಕೃತಿ ರಚನೆಕಾರರು, ಕೃತಿಗಳಿಗಿಂತ ರಾಗಕ್ಕೆ ಹೆಚ್ಚು ಸ್ಪಂದನೆ ಸಿಗುತ್ತದೆ. ಅದರಲ್ಲಿ ನನಗೆ ವಯೋಲಿನ್ ವಾದ್ಯ ವರವಾಗಿದೆ ಎಂದವರು ಹೆಮ್ಮೆಯಿಂದ ಹೇಳುತ್ತಾರೆ.
ಚೌಕಟ್ಟುಗಳನ್ನು ಮೀರಿದ ವಾದ್ಯ
ಭಾಷೆ, ಕೃತಿಗಳ ಚೌಕಟ್ಟನ್ನು ಮೀರಿದ ವಾದ್ಯ ವಯೋಲಿನ್. ಸಾಗರದ ಆಚೆಯಿಂದ ಬಂದರೂ ಇದು ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅತ್ಯಂತ ಆಪ್ತವಾಗಿ ಒಗ್ಗಿಕೊಂಡಿದೆ. ಒಲಿದುಬಂದಿದೆ. ವಿಶಾಲವಾಗಿ ಗಮನಿಸಿದಾಗ ದು ಅಂತಾರಾಷ್ಟ್ರೀಯ ವಾದ್ಯವೆಂದು ವೇದ್ಯವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಸಂಭ್ರಮದಿಂದ ಹೇಳುತ್ತಾರೆ ಮಂಜುನಾಥ್.
ಈವರೆಗೆ ನಾನು 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಕಛೇರಿ ಮಾಡಿದಿಂದ ದ್ದೇನೆ. ದೇಶ ವಿದೇಶಗಳ ಪ್ರಮುಖ ವೇದಿಕೆಗಳಲ್ಲಿ ನನಗೆ `ಸಂಗೀತದ ಧರ್ಮ’ ಪ್ರಚಾರ ಮಾಡುವ ಯೋಗ ಸಿಕ್ಕಿದೆ. ಇದೀಗ ವಿಶ್ವದಲ್ಲೇ ಅತಿ ಶ್ರೇಷ್ಠ ಮತ್ತು ಮಾದರಿ ಎನಿಸಿದ ಅಗ್ರಪಂಕ್ತಿಯ ವಿಶ್ವವಿದ್ಯಾನಿಲಯವಾದ ಆಕ್ಸ್ಫರ್ಡ್ ನನಗೆ ಮಾನ್ಯತೆ ನೀಡಿದೆ. ಭಾರತದ ಸಂಗೀತ ರಾಯಭಾರಿ ಎಂದು ನನ್ನನ್ನು ಆಮಂತ್ರಣ ಪತ್ರಿಕೆಯಲ್ಲಿ ಗೌರವಾರ್ಥ ಪದ ಬಳಸಿದೆ. ಇದು ನನ್ನ ಪರಂಪರೆಗೆ ದೊರೆತ ಗೌರವ. ನಮ್ಮ ಸಂಗೀತಕ್ಕೆ ಸಿಕ್ಕ ಹಿರಿಮೆ. ನನ್ನ ತಂದೆ ಮತ್ತು ಗುರುವೂ ಆದ ಮಹದೇವಪ್ಪನವರಿಗೆ ಲಭಿಸಿದ ಕೀರ್ತಿ ಎಂದು ಭಾವಿಸುವೆ ಎಂದು ವಿನೀತರಾಗಿ ಹೇಳಿಕೊಳ್ಳುವ ಸೌಜನ್ಯ ಮಂಜುನಾಥರಿಗಿದೆ.
ಶ್ರೋತೃಗಳನ್ನು ಒಲಿಸಿಕೊಳ್ಳುವ ತಂತ್ರ
ಸಾವಿರಾರು ಶ್ರೋತೃಗಳು ನಿಮಗೆ ಒಲಿದಿರುವ ರಹಸ್ಯ ಏನು ಎಂದು ಕೇಳಿದಾಗ ಅವರು ಉತ್ತರಿಸುವ ಪರಿ ಭಿನ್ನ. ವಿಭಿನ್ನ. ನಾನು ಮೈಸೂರು ವಿವಿ ಸಂಗೀತ ವಿಭಾಗದಲ್ಲಿ ಕಾಯಕ ಮಾಡುವುದರಿಂದ ವಿವಿಧ ದೇಶಗಳ ಸಂಗೀತದ ಬಗ್ಗೆ ಅಧ್ಯಯನ ಮಾಡುವ ಅವಕಾಶ ಸಿಕ್ಕಿದೆ. ಸಾಗರದ ಆಚೆ ಇರುವ ನಾಡಿನ ಕಛೇರಿಗಳಲ್ಲಿ ಅಲ್ಲಿನ ಜನರ ಮನೋಧರ್ಮ ಅರ್ಥಮಾಡಿಕೊಳ್ಳುತ್ತೇನೆ. ಅದಕ್ಕೆ ಅನುಗುಣವಾಗಿ ಅವರು ಯಾವ ಸ್ಕೇಲ್ ಬಯಸುತ್ತಾರೆಂದೆ ಕೇಳುತ್ತೇನೆ. ಆ ಶ್ರೋತೃಗಳ ಮನೋ ಇಂಗಿತಕ್ಕೆ ಸ್ಪಂದಿಸುವ ರಾಗಗಳನ್ನು ನುಡಿಸುತ್ತೇನೆ. ನಾನು `ಮೂರರಲ್ಲಿ ಮತ್ತೊಂದು’ ಆಗಬಾರದು. ಮೂರರ ಮೇಲೆ ಒಂದಾಗಿ ಉತ್ತುಂಗದಲ್ಲಿ ನಿಲ್ಲಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದವನು ಎಂದು ತಮ್ಮ ಮನೋಇಂಗಿತ ವ್ಯಕ್ತಪಡಿಸಿದರು.
ನಮ್ಮ ರಾಗಗಳ ಸೌಂರ‍್ಯವನ್ನು ಪಿಟೀಲು ವಾದನದಲ್ಲಿ ಹಿಡಿದು ಇಡುವುದೇ ವಿದೇಶೀಯರಿಗೆ ಇಷ್ಟ. ಹಾಗಾಗಿ ನಾನು ಆಕ್ಸ್ಫರ್ಡ್ ವಿವಿಯಲ್ಲಿ ಮೊದಲ ದಿನ ಭಾರತೀಯ ಸಂಗೀತದ ಬಗ್ಗೆ ಉಪನ್ಯಾಸ ಮಾಡಿ, ಉಳಿದ 4 ದಿನವೂ ಪ್ರಾತ್ಯಕ್ಷಿಕೆ ನೀಡಲು ಅಣಿಯಾಗಿದ್ದೇನೆ. ಭಾರತೀಯ ಸಂಗೀತಕ್ಕೆ ವಯೋಲಿನ್ ಹೇಗೆ ಒಗ್ಗಿದೆ, ನಾವು ಏಕೆ ನೆಲದ ಮೇಲೆ ಕುಳಿತೇ ಈ ವಾದ್ಯ ನುಡಿಸುತ್ತೇವೆ, ರಾಗ- ಮನೋಧರ್ಮಗಳನ್ನು ಬಿಂಬಿಸುವುದು ಹೇಗೆ- ಇತ್ಯಾದಿಗಳ ಬಗ್ಗೆ ಅಲ್ಲಿನ ಸಂಗೀತಜ್ಞರು, ಸಂಗೀತ ಕಲಿಕೆ ವಿದ್ಯಾರ್ಥಿಗಳು, ಪ್ರೊಫೆಸರ್‌ಗಳಿಗೆ ಮತ್ತು ಆಸಕ್ತ ಶ್ರೋತೃಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸುವ ಯೋಗ ನನಗೆ ಒದಗಿಬಂದಿದೆ ಎಂದು ಮಂಜುನಾಥ್ ವಿವರಿಸುತ್ತಾರೆ.
ಕಲಾವಿದನಿಗೆ ಅರ್ಹತೆ ದೊರಕುವುದು ಹೀಗೆ
ಕೇವಲ ವಿಮಾನದಲ್ಲಿ ಹಾರಾಟ ಮಾಡಿ, ಕಛೇರಿ ಮಾಡಿ, ಸಂಭಾವನೆ ಪಡೆದು ಜೀವಿಸುವುದಷ್ಟೇ ನಮ್ಮ ಕೆಲಸ ಅಲ್ಲ. ಭಾರತೀಯ ಮೂಲಕದ ಕರ್ನಾಟಕ ಸಂಗೀತವನ್ನು ಹಾಡಿ, ನುಡಿಸಿ, ಡೆಮೋ ನೀಡಿ ವಿದೇಶೀಯರಿಗೆ ವಿವರಿಸಬೇಕು. ಇದನ್ನು ಆಕ್ಸ್ಫರ್ಡ್ ವಿವಿ ಬಯಸಿದೆ. ನಮ್ಮ ಕಲೆಯನ್ನು ವಿಶ್ವಮಟ್ಟದಲ್ಲಿ ಬೆಳೆಸಬೇಕು ಎಂದರೆ ನಾವೇ ಅದನ್ನು ಕೊಂಡೊಯ್ಯಬೇಕು. ಇದು ನಮ್ಮ ಜವಾಬ್ದಾರಿ. ಇಷ್ಟಪಟ್ಟು ವಯೋಲಿನ್ ಕೇಳುವ ಜನ ಜಗತ್ತಿನ ಎಲ್ಲೆಡೆ ಇದ್ದಾರೆ. ಅದಕ್ಕೆ ನಾವು ಸ್ಪಂದಿಸಿ ನಮ್ಮತನವನ್ನು ಪರಿಚಯ ಮಾಡಿ ಕೊಡಲೇಬೇಕು. ಹಾಗಾದಾಗ ಮಾತ್ರ ನಾವು ಕಲಾವಿದರಾಗಲು ಅರ್ಹರು ಎಂದು ತೌಲನಿಕವಾಗಿಯೇ ತಮ್ಮ ಮಾತಿನ ಲಹರಿ ಹರಿಸಿದರು ಮಂಜುನಾಥ್.
ಕಲಿತ ವಿದ್ಯೆಗೆ ನ್ಯಾಯ ಒದಗಿಸೋಣ
ಒಟ್ಟಾರೆ ಒಬ್ಬ ಹೆಸರಾಂತ ಕಲಾವಿದ ತಾನು ಕಲಿತ ವಿದ್ಯೆಗೆ ಹೇಗೆ ನ್ಯಾಯ ಒದಗಿಸಬೇಕು, ಅದನ್ನು ಹೇಗೆ ಪ್ರಚಾರ, ಪ್ರಸಾರ ಮಾಡಬೇಕು, ಯಾವ ಪಟ್ಟುಗಳನ್ನು ಬಳಸಿ ಶ್ರೋತೃಗಳನ್ನು ಸೆಳೆದುಕೊಳ್ಳಬೇಕು, ಹೇಗೆ ವಿದೇಶಿ ವಿವಿಗಳ ಪಾಶ್ಚಾತ್ಯ ಸಂಗೀತಗಾರರಿಗೆ ನಮ್ಮ ಕರ್ನಾಟಕ ಸಂಗೀತದ ಘಮಲನ್ನು ಆಘ್ರಾಣಿಸಿ ಆನಂದ ಪಡುವಂತೆ ಮಾಡಬೇಕು ಎಂಬೆಲ್ಲಾ ತಂತ್ರಗಾರಿಕೆಯನ್ನು ಅರಿತ ಡಾ. ಮಂಜುನಾಥ್ ನಿಜಕ್ಕೂ ನಮ್ಮ ಸಂಗೀತ ಪರಂಪರೆಯ ರಾಯಭಾರಿಯೇ ಸರಿ. ಇಂಥ ಕೆಲಸಗಳು ಇಂದು ಜಾಗತಿಕ ಮಟ್ಟದಲ್ಲಿ ಆಗುವುದು ಅವಶ್ಯ ಮತ್ತು ಅನಿವಾರ್ಯವೂ ಆಗಿದೆ. ಅಂಥ ಸೇವೆಗೆ ಕರುನಾಡಿನ ಅಗ್ರಮಾನ್ಯ ಪಿಟೀಲು ಕಲಾವಿದರೊಬ್ಬರು ಸನ್ನದ್ಧರಾಗಿರುವುದು ಭರತಭೂಮಿಯ ಸುಕೃತವೇ ಸರಿ.
ಮಂಜುನಾಥ್ ವ್ಯಕ್ತಿಚಿತ್ರ
ವಾದನದ ಮೂಲಕ ಜಗತ್ತಿನಾದ್ಯಂತ ಅಪಾರ ಮನ್ನಣೆ ಗಳಿಸಿದ ಕೀರ್ತಿ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಡಾ.ಮೈಸೂರು ಮಂಜುನಾಥ್‌ರವರಿಗೆ ಸಲ್ಲುತ್ತದೆ.
ಡಾ. ಮಂಜುನಾಥ್, ಮಾಸ್ರ‍್ಸ್ ಆಫ್ ಮ್ಯೂಸಿಕ್ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಹಾಗೂ 4 ಚಿನ್ನದ ಪದಕ ಪಡೆದು ನಂತರ ಮೈಸೂರು ವಿವಿಯಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಹಲವಾರು ವಿದೇಶಿ ಪ್ರೊಫೆಸರ್ ಹಾಗೂ ಸಂಶೋಧಕರು ಫೆಲೋಶಿಪ್ ಮೂಲಕ ಸಂಗೀತದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿ ಗಳಿಸಿರುವುದು ಮಹತ್ವದ ಸಂಗತಿ.
ಇವರಿಗೆ ತಂದೆಯೇ ಗುರು. ಸಂಗೀತವಿದ್ವಾನ್ ಮಹದೇವಪ್ಪನವರ ಬಳಿ ಸಂಗೀತ ಶಿಕ್ಷಣ ಪಡೆದ ಮಂಜುನಾಥ್ ಕೇವಲ 8ನೆಯ ಎಳೆ ವಯಸ್ಸಿನಲ್ಲೇ ತಮ್ಮ ಮೊದಲಕಾರ್ಯಕ್ರಮವನ್ನು ನೀಡಿ ಎಲ್ಲರನ್ನೂ ವಿಸ್ಮಯಗೊಳಿಸಿದರು. ಅದ್ಭುತ ಬಾಲಪ್ರತಿಭೆ ಎಂದೇ ಸಂಗೀತ ವಿಮರ್ಶಕರ ಹಾಗೂ ವಿದ್ವಾಂಸರ ಮನ್ನಣೆ ಗಳಿಸಿದ ಇವರು ಅತ್ಯಂತ ಶೀಘ್ರದಲ್ಲೇ ತಮ್ಮ ಪಾಂಡಿತ್ಯದಿಂದ ಅಸಾಧಾರಣ ಕೀರ್ತಿ ಗಳಿಸಿ ಇಂದು ವಿಶ್ವದ ಶ್ರೇಷ್ಠ ವಯೋಲಿನ್ ವಾದಕರೆಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಲಂಡನ್ ನಗರದ ಪ್ರತಿಷ್ಠಿತ ರಾಯಲ್ ಆಲ್ಬರ್ಟ್ ಹಾಲ್, ಆಸ್ಟ್ರೇಲಿಯಾದ ಸಿಡ್ನಿ ಆಪೇರಾ ಹೌಸ್, ನ್ಯೂಮೆಕ್ಸಿಕೋದ ಸ್ಯಾಂಟಾ ಫೆ ಸಂಗೀತೋತ್ಸವ, ಚಿಕಾಗೊ ನಗರದ ಪ್ರತಿಷ್ಠಿತ ವಿಶ್ವ ಸಂಗೀತೋತ್ಸವ, ಸಿಂಗಾಪುರದ ಎಸ್‌ಪ್ಲನೆಡ್ ಥಿಯೇಟರ್, ಸ್ವಿಟ್ಜರ್‌ಲ್ಯಾಂಡ್‌ನ ಜಾಸಾರ್ ಸಮ್ಮೇಳನ, ಸಾರ್ಕ್ ಸಮ್ಮೇಳನ, ಮೆಲ್ಬೋರ್ನ್ ಫೆಡರೇಶನ್ ಸ್ಕ್ವೇರ್, ಪ್ಯಾರಿಸ್ ನಗರದ ವಿಶ್ವಪ್ರಸಿದ್ಧ ಥಿಯೇಟರ್ ದ ವಿಲ್ಲಾ, ಜಪಾನ್ ದೇಶದ ಒಸಾಕಾ
ವಿಶ್ವವಿದ್ಯಾನಿಲಯದ ಸಮ್ಮೇಳನ ಹೀಗೆ ಜಗತ್ತಿನಾದ್ಯಂತ ಅಸಂಖ್ಯಾತಪ್ರತಿಷ್ಠಿತ ವೇದಿಕೆಗಳಲ್ಲಿ ಭಾರತೀಯ ಸಂಗೀತಸುಧೆಯನ್ನು ಹರಿಸಿದ್ದಾರೆ. ಈ ಮೂಲಕ ಕರ್ನಾಟಕ ಸಂಗೀತದ ಮೇರು ಕಲಾವಿದರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರತಿಷ್ಠಿತ ದಿ ಲಾಸ್ ಏಂಜಲೀಸ್ ಟೈಮ್ಸ್ ಪತ್ರಿಕೆ ಇವರ ಸಂಗೀತವನ್ನು ಎಲ್ಲಾ ಎಲ್ಲೆಗಳನ್ನೂ ಮೀರಿ ಬೆಳೆದು ನಿಂತ ಸಂಗೀತದ ಅದ್ಭುತ ಎಂದೇ ಬಣ್ಣಿಸಿದೆ. ಅಂತಾರಾಷ್ಟ್ರೀಯ ಸಂಗೀತ ವಿಮರ್ಶಕರಿಂದ ಭಾರತೀಯ ಸಂಗೀತದ ವರ್ಚಸ್ಸು ಹಾಗೂ ಮಹಾನ್ ಕಲಾವಿದ ಎಂದು ಗೌರವಿಸಲ್ಪಟ್ಟ ಡಾ. ಮಂಜುನಾಥ್ ತಮ್ಮ ಅಣ್ಣ-ಖ್ಯಾತ ವಯೋಲಿನ್‌ವಾದಕ ಮೈಸೂರು ನಾಗರಾಜ್‌ರೊಡನೆ ಸೇರಿ ಅಸಂಖ್ಯಾತ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ನಡೆಸಿಕೊಟ್ಟು ಅಪಾರ ಜನಮನ್ನಣೆ ಪಡೆದಿರುವುದು ಬಹಳ ವಿಶೇಷ.
ಸ್ಯಾಂಡಿಯಾಗೊನ ವಿಶ್ವ ವಯೋಲಿನ್ ಸಮ್ಮೇಳನ, ಇರಾನ್ ದೇಶದ ಪರ್ಶಿಯನ್ ಅಕಾಡೆಮಿ ಹಾಗೂ ಇಟಲಿಯ ರಾಯಲ್ ಪ್ಯಾಲೆಸ್ ಆಫ್ ಮಿಲಾನ್ ನಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಆಮಂತ್ರಿತರಾದ ಪ್ರಪ್ರಥಮ ಭಾರತೀಯ ವಿದ್ವಾಂಸರೆಂಬುದು ಇವರ ಹೆಗ್ಗಳಿಕೆ ಇವರಿಗೆ ಸಂದಿದೆ.
ಸ್ವಾತಂತ್ರ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಭಾರತ ಸರ್ಕಾರವು ಡಾ. ಮಂಜುನಾಥ್‌ರವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಸ್ಲೋವೇನಿಯಾ, ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಇರಾನ್ ದೇಶಗಳಿಗೆ ವಿಶೇಷ ವಯೋಲಿನ್ ಕಾರ್ಯಕ್ರಮಗಳಿಗಾಗಿ ಕಳುಹಿಸಿ ಗೌರವ ಸಮರ್ಪಿಸಿದೆ ಎಂಬುದು ಗಮನೀಯ ಸಂಗತಿ. ಯೂರೋಪ್‌ನ ಹೆಸರಾಂತ ಅಕಮಾನ್, ಸ್ಪಿನಿಫೆಕ್ಸ್ಹಾಗೂ ಇಕ್ಟಸ್ ಆರ್ಕೆಸ್ಟಾçಗಳೊಂದಿಗೆ ಮಂಜುನಾಥ್ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಪ್ರಪಂಚದ ಶ್ರೇಷ್ಠ ವಿಶ್ವವಿದ್ಯಾಲಯಗಳೆನಿಸಿದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಚಿಕಾಗೊ ವಿಶ್ವವಿದ್ಯಾನಿಲಯ, ಜಪಾನ್‌ನ ಒಸಾಕಾ ವಿವಿ, ನಾರ್ತ್ ಟೆಕ್ಸಾಸ್ ವಿಶ್ವವಿದ್ಯಾನಿಲಯ, ಕಾನ್ಸಾಸ್ ಸ್ಟೇಟ್ ವಿಶ್ವವಿದ್ಯಾನಿಲಯ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಡಾ.ಮಂಜುನಾಥ್ ವಿಶೇಷ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಭಾರತದ ಸಾಂಸ್ಕೃತಿಕ ರಾಯಭಾರಿಗಳೇ ಆಗಿದ್ದಾರೆ ಎಂಬುದು ನಾಡಿನ ಜನರೆಲ್ಲರೂ ಅಭಿಮಾನಪಡುವ ಸಂಗತಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post