ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕಲಾ ಚಟುವಟಿಕೆಗಳು ನಮ್ಮ ಸಂಸ್ಕಾರವನ್ನೂ ವೃದ್ಧಿಸುತ್ತವೆ ಎಂದು ಹಿರಿಯ ರಂಗನಟ, ನಿರ್ದೇಶಕ ಮಂಡ್ಯ ರಮೇಶ್ #MandyaRamesh ಹೇಳಿದರು.
ನಗರದ ನೃತ್ಯ ಗಿರಿ-ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರವು ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಿದ್ದ ಯುವ ಕಲಾವಿದೆ ತನುಶ್ರೀ ಚಿನ್ನಯ್ಯ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Also Read>> ಅಪಘಾತ | ಕಾಲೇಜು ವಿದ್ಯಾರ್ಥಿ ಸಾವು
ಶ್ರದ್ಧಾವಂತರಿಗೆ ಮಾತ್ರ ಕಲೆ ಒಲಿಯುತ್ತದೆ. ಭಾರತೀಯ ಕಲೆಗಳಲ್ಲಿ #IndianArt ಮಾತೃತ್ವದ ಪ್ರಧಾನ ಸೆಲೆ ಇದೆ. ಇದನ್ನು ಮಕ್ಕಳಿಗೆ ಪರಿಚಯಿಸಬೇಕು. ಹೆಣ್ಣುಮಕ್ಕಳಿಗೆ ಸಂಗೀತ- ನೃತ್ಯ ಬಹುಬೇಗ ಒಲಿಯುತ್ತದೆ. ಪಾಲಕರು ಇದರ ಮಹತ್ವ ಅರಿತು ಪ್ರೋತ್ಸಾಹಿಸಬೇಕು ಎಂದು ರಮೇಶ್ ಆಶಿಸಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್ )ನಿರ್ದೇಶಕಿ ಡಾ. ಎಂ. ಪುಷ್ಪಾವತಿ ಮಾತನಾಡಿ, ನೃತ್ಯ ಮತ್ತು ಸಂಗೀತಕ್ಕೆ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದರು.
ವಾಕ್ ಮತ್ತು ಶ್ರವಣ ತಜ್ಞರ ವೃತ್ತಿಗೆ ಕಲಾ ವಂತಿಕೆ ಸಾಕಷ್ಟು ಸಹಕಾರಿಯಾಗಲಿದೆ. ಥೆರಪಿ ಸಂದರ್ಭ ಔಷಧಕ್ಕಿಂತಲೂ ಮನಕ್ಕೆ ಮುದ ನೀಡುವ ಸಂಗೀತ- ನಾಟ್ಯದಿಂದ ರೋಗಿ ಗುಣಮುಖನಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ಕಲಾವಿದೆ ತನುಶ್ರೀಗೆ ಉತ್ತಮ ಭವಿಷ್ಯವಿದೆ ಎಂದರು.
ಹಿರಿಯ ವಿದುಷಿ, ನೃತ್ಯ ಗಿರಿ ಸಂಸ್ಥೆ ನಿರ್ದೇಶಕಿ ಕೃಪಾ ಫಡ್ಕೆ, ಮುಖ್ಯ ಶಿಕ್ಷಕ ಚಿನ್ನಯ್ಯ, ಅಭಿಯೋಜನಾ ಇಲಾಖೆ ಎಫ್‌ಡಿಸಿ ಸುಮಲತಾ ಹಾಜರಿದ್ದರು.
ಗುರುವಂದನೆ
ಇದೇ ಸಂದರ್ಭ ಹಿರಿಯ ವಿದುಷಿಯರಾದ ಡಾ. ಆರ್.ಎನ್. ಶ್ರೀಲತಾ, ಡಾ. ಕೃಪಾ ಫಡ್ಕೆ ಅವರಿಗೆ ಕಲಾವಿದೆ ತನುಶ್ರೀ ಗುರುವಂದನೆ ಸಮರ್ಪಿಸಿ ಗೌರವಿಸಿದರು.
ಪ್ರಸ್ತುತಿಗಳು
ತನುಶ್ರೀ ಅವರು ಗಂಭೀರ ನಾಟ ರಾಗದ ಮಲ್ಲಾರಿ ಪ್ರಸ್ತುತಿಯೊಂದಿಗೆ ನರ್ತನ ಆರಂಭಿಸಿದರು. ಗಣೇಶ ಸ್ತುತಿ, ಮಲಯ ಮಾರುತ ರಾಗದ ಆಂಡಾಳ್ ಕೌತ್ವಂ ಮತ್ತು ತ್ರಿಕಾಲ ಜತಿ ಉಳ್ಳ ಸಿಂಹವಾಹಿನಿ ವರ್ಣದಲ್ಲಿ ಪ್ರೌಢಿಮೆ ಪ್ರದರ್ಶನ ಮಾಡಿದರು.
ಓಂ ನಮೋ ನಾರಾಯಣಾ… ಕೃತಿ , ಇದೇನೇ ಸಖಿ ಎಂಬ ಜಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿ ತೋರಿಸಿ ಚಪ್ಪಾಳೆ ಗಿಟ್ಟಿಸಿದರು. ತಿಲ್ಲಾನದೊಂದಿಗೆ ಭರತನಾಟ್ಯ ಪ್ರದರ್ಶನಕ್ಕೆ ಮಂಗಳ ಹಾಡಿ ಕಲಾರಸಿಕರ ಮನಗೆದ್ದರು.
ಹಿಮ್ಮೇಳ
ತನುಶ್ರೀ ರಂಗಪ್ರವೇಶಕ್ಕೆ ವಿದ್ವಾಂಸರಾದ ಪೂಜಾ ಸುಗಂ ನಟವಾಂಗ, ಆರ್. ರಾಜೀವ್ ಗಾಯನ, ಜಿ.ಎಸ್. ನಾಗರಾಜ್ ಮೃದಂಗ ಮತ್ತು ಎ.ಪಿ. ಕೃಷ್ಣಪ್ರಸಾದ್ ಕೊಳಲು ವಾದನದ ಹಿಮ್ಮೇಳ ಸಹಕಾರ ನೀಡಿ ಪ್ರಸ್ತುತಿಯ ರಂಗು ಇಮ್ಮಡಿಸಿದರು.
ವಿದುಷಿ ಡಾ. ಕೃಪಾ ಫಡ್ಕೆ, ಆಯಿಷ್ ನಿರ್ದೇಶಕಿ ಡಾ. ಎಂ. ಪುಷ್ಪಾವತಿ, ಮುಖ್ಯ ಶಿಕ್ಷಕ ಚಿನ್ನಯ್ಯ ಮತ್ತು ಸುಮಲತಾ ಹಾಜರಿದ್ದರು. ನೃತ್ಯಗಿರಿ ಸಂಸ್ಥೆ ಆಯೋಜಿಸಿದ್ದ ರಂಗಪ್ರವೇಶ ಕಾರ್ಯಕ್ರಮದಲ್ಲಿ ಯುವ ಕಲಾವಿದೆ ತನುಶ್ರೀ ನರ್ತನ ಪ್ರದರ್ಶನ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post