ಕಲ್ಪ ಮೀಡಿಯಾ ಹೌಸ್ | ಮೈಸೂರು |
ತನ್ನ ಅಮೋಘ ಪ್ರತಿಭೆಯಿಂದ ವಿಶ್ವದಾಖಲೆ ಸೃಷ್ಠಿಸಿ ಖ್ಯಾತಿ ಗಳಿಸಿರುವ ಬಾಲ ಪ್ರತಿಭೆ ಡಾ.ಪೃಥು ಪಿ. ಅದ್ವೈತ್’ನನ್ನು ಅರಮನೆ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಅರಮನೆ ಆವರಣದಲ್ಲಿ ನಡೆದ ಫಲಪುಷ್ಪ ಪ್ರದರ್ಶನ ವೇದಿಕೆಯಲ್ಲಿ ಪೃಥುವನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ವೇದ ಘೋಷ ಮಾಡಿ ಮಾತನಾಡಿದ ಪೃಥು, ತನ್ನನ್ನು ಗುರುತಿಸಿ ಅಭಿನಂದಿಸಿದ ಮೈಸೂರು ಮಹಾರಾಜರು, ಸುಬ್ರಹ್ಮಣ್ಯ ಅವರು ಹಾಗೂ ಅರಮನೆ ಮಂಡಳಿಯ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ, ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ನಿಮ್ಮ ಸಹಕಾರ ಅಗತ್ಯ ಎಂದು ತಿಳಿಸಿದರು.
ಪೃಥುವಿನ ಸಾಧನೆ
ಮೈಸೂರಿನ ಪೂರ್ಣ ಚೇತನ ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಪೃಥು ಪಿ. ಅದ್ವೈತ್ ಈಗಾಗಲೇ ಸ್ತೋತ್ರ ಪಠಣದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ್ದು ನವದೆಹಲಿಯ ಮ್ಯಾಜಿಕ್ ಅಂಡ್ ಆರ್ಟ್ ಯುನಿವರ್ಸಿಟಿ ಹಾಗೂ ವರ್ಲ್ಡ್ ಕಲ್ಚರ್ ಅಂಡ್ ಎನ್ವಿರಾನ್ಮೆಂಟ್ ಕಮಿಷನ್ ವತಿಯಿಂದ ಎರಡು ಗೌರವ ಡಾಕ್ಟರೇಟ್ ಪಡೆದಿದ್ದಾನೆ.
ಇದರೊಂದಿಗೆ ಹಿಂದೂಸ್ಥಾನಿ ಸಂಗೀತದ ತಬಲಾ ವಾದಕ ಹಾಗೂ ಬ್ಯಾಡ್ಮಿಂಟನ್ ಆಟಗಾರ ಸಹ ಆಗಿದ್ದಾನೆ . ಚಿಕ್ಕ ವಯಸ್ಸಿನಲ್ಲೇ ಕವನ ರಚನೆ ಹಾಗೂ ಲೇಖನ ಬರೆಯುವ ಹವ್ಯಾಸ ಹೊಂದಿರುವ ಪೃಥುವಿನ ಕವನ ಹಾಗೂ ಲೇಖನಗಳು ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಗೊಂಡಿವೆ.
ಚಿಕ್ಕ ವಯಸ್ಸಿನಲ್ಲೇ ಅವರ ಸಮಗ್ರ ಸಾಧನೆಗಳನ್ನು ಗುರುತಿಸಿ ಮೈಸೂರು ಅರಮನೆ ಮಂಡಳಿ ನಿರ್ದೇಶಕರಾದ ಟಿ.ಎಸ್. ಸುಬ್ರಹ್ಮಣ್ಯ ಅವರು ಫಲಪುಷ್ಪ ಪ್ರದರ್ಶನದ ಸಾಂಸ್ಕೃತಿಕ ವೇದಿಕೆಯಲ್ಲಿ ಅಭಿನಂದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪೃಥುವಿನ ಪೋಷಕರಾದ ಪುನೀತ್ ಜಿ. ಕೂಡ್ಲೂರು, ಪೂಜಾ. ಎನ್, ಕೇಂದ್ರ ರೇಷ್ಮೆ ಮಂಡಳಿಯ ವಿಶ್ರಾಂತ ತಾಂತ್ರಿಕ ಅಧಿಕಾರಿ ಕೆ.ಆರ್. ಗಣೇಶ್, ಅರಮನೆ ಮಂಡಳಿಯ ಟಿ.ಎಸ್. ಸುಬ್ರಹ್ಮಣ್ಯ, ಹೊಯ್ಸಳ ಕರ್ನಾಟಕ ಸಂಘದ ವಿಜಯ್, ಆಕಾಶವಾಣಿ ಮಂಜುನಾಥ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















