ಕಲ್ಪ ಮೀಡಿಯಾ ಹೌಸ್ | ಮೈಸೂರು |
ರಾಜ್ಯದಲ್ಲಿ ರಾಮನ ಹಾಡು ಹಾಡಳಲೂ ಸಹ ಅನುಮತಿ ಪಡೆಯುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ Basavanagowda Patil Yatnal ಕಟುವಾಗಿ ಟೀಕಿಸಿದ್ದಾರೆ.
ಹನುಮ ಜಯಂತಿ ವೇಳೆ ಇತ್ತಿಚೆಗೆ ಹತ್ಯೆಗೀಡಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಗೌರವಾರ್ಥ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಸ್ತುತ ಹಿಂದೂಗಳು ಜೀವನ ನಡೆಸಲಾಗದ ವಾತಾವರಣ ನಿರ್ಮಾಣವಾಗಿದೆ. ಗಣಪತಿ ಕೂರಿಸಲು ಕೂಡ ಪರದಾಡುವ ಸ್ಥಿತಿ ಇದೆ. ದೇಶಪ್ರೇಮ ಬೆಳೆಸುವ ಕಾರ್ಯಕ್ರಮಕ್ಕೂ ಅನುಮತಿ ಅನಿವಾರ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
Also read: ಬೆಂಗಳೂರಿನಲ್ಲಿ ಬಂಧಿತರಾದ ಶಂಕಿತ ಭಯೋತ್ಪಾದಕರ ಫೋಟೋಗಳಿವು
ಹತ್ಯೆಗಳು, ಜೋಡಿ ಕೊಲೆ, ಸಮಾಜ ವಿರೋಧಿ ಕೃತ್ಯದಲ್ಲಿ ಭಾಗಿಯಾಗುವವರಿಗೆ ಈಗ ಹೊಸ ಹುಮ್ಮಸ್ಸು ಬಂದಿದೆ ಎಂದು ಟೀಕಿಸಿದರು.
ವೇಣುಗೋಪಾಲ್ ದೇಶದ್ರೊಹಿ ಚಟುವಟಿಕೆ ಮಾಡಿದ್ರಾ? ಪಾಕಿಸ್ತಾನದ ಪರ ಜೈಕಾರ ಕೂಗಿದ್ರಾ? ನಮ್ಮೆಲ್ಲರ ಪುಣ್ಯ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಇದೆ. ಸದ್ಯ ನ್ಯಾಯಾಲಯದಲ್ಲಿ ಕಾನೂನು ಸಿಗುತ್ತಿದೆ. ಇಲ್ಲವಾಗಿದ್ದರೆ ನಮ್ಮ ಸ್ಥಿತಿ ಚಿಂತಾಜನಕವಾಗುತ್ತಿತ್ತು ಎಂದರು.
ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಇಲ್ಲಿ ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು. ಮುಂದಿನ ವರ್ಷ ಈ ವರ್ಷಕ್ಕಿಂತಲೂ ಜೋರಾಗಿ ಜಯಂತಿ ನಡೆಯಬೇಕು. ಇದೇ ವೇಣುಗೋಪಾಲ್ ಸಾವಿಗೆ ನಿಜವಾದ ಶ್ರದ್ಧಾಂಜಲಿ ಎಂದು ಕರೆ ನೀಡಿದರು.
ನಮ್ಮದೇ ಹುಡುಗನ ಸಾವಿಗೆ ಶ್ರದ್ಧಾಂಜಲಿ ಸಭೆ ಮಾಡಲು ಅನುಮತಿ ಸಿಗುವುದಿಲ್ಲ ಎಂದಾದರೆ ನಾವು ಯಾವ ಸಮಾಜದಲ್ಲಿದ್ದೇವೆ? ವೇಣುಗೋಪಾಲ್ ಮನೆ ಹತ್ತಿರ 20 ಮಂದಿ ಸೇರಿ ಸಭೆ ಮಾಡಿಕೊಳ್ಳಿ ಅಂದಿದ್ದರು. ಕೊನೆಗೆ ಹೈಕೋರ್ಟ್’ಗೆ ಹೋಗಿ ಹೋರಾಡಿ ಅನುಮತಿ ಪಡೆಯಬೇಕಾಯಿತು. ಹಿಂದೂ ಸಮಾಜವನ್ನು ಹೆದರಿಸುವ, ಬೆದರಿಸುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post