ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪ್ರಪಂಚದ ಸೃಷ್ಟಿ ಬಹಳ ವೈವಿಧ್ಯವಾಗಿದ್ದು, ಯಾವುದನ್ನೂ ನಿಂದನೆ ಮಾಡಬಾರದು ಎನ್ನುವುದೇ ಭಾಗವತದ ಸಂದೇಶ ಎಂದು ಪಂಡಿತ ಅನಿರುದ್ಧಾಚಾರ್ಯ ಹೇಳಿದರು.
ಅಗ್ರಹಾರದ ಉತ್ತರಾದಿ ಮಠದ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಅಧಿಕ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿರುವ ಒಂದು ತಿಂಗಳ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಂಗಳವಾರ ಮಾತನಾಡಿದರು.
ಪರರ ದೋಶ ಹುಡುಕಿ ನಿಂದನೆಯಲ್ಲೇ ಸಮಯ ಕಳೆದರೆ ಮಹತ್ವಪೂರ್ಣ ಬದುಕು ವ್ಯರ್ಥವಾಗುತ್ತದೆ. ಮಾನವ ಜನ್ಮ ಬಹಳ ದೊಡ್ಡದು. ಹಾಗಾಗಿ ಕಿರಿಯರಿಗೆ ವಿನಂತಿ ಮಾಡಿಯಾದರೂ ಸತ್ಕಾರ್ಯಗಳನ್ನು ಮಾಡಲು ಹಿರಿಯರು ಪ್ರೇರಣೆ ನೀಡಬೇಕು. ಪೃಥು ಚಕ್ರವರ್ತಿ ತನ್ನ ಸಾಮ್ರಾಜ್ಯದ ಜನರಿಗೆ ಕೈ ಮುಗಿದು ಧರ್ಮ ಕಾರ್ಯಗಳಲ್ಲಿ ನಿರತರಾಗಿ ಎಂದು ವಿನಂತಿ ಮಾಡುತ್ತಿದ್ದ. ಯಾವ ಕೆಲಸವನ್ನು ಆದೇಶ, ಆಜ್ಞೆಗಳಿಂದ ಮಾಡಲಾಗದೋ ಅಂಥಾ ಕೆಲಸವನ್ನು ವಿನಂತಿಯಿಂದ ಮಾಡು ಎಂದು ಭಾಗವತ ಸೂಚನೆ ನೀಡಿದೆ ಎಂದರು.
ಹಿರಿಯರು ಎಲ್ಲೇ ಇರಲಿ, ಹೇಗೇ ಇರಲಿ, ಧರ್ಮ ಬೋಧೆಯನ್ನು ಮಾತ್ರ ಬಿಡಬಾರದು. ಶಾಸ್ತç ಕಲಿತವರು ಸುಮ್ಮನೆ ಕೂರಬಾರದು. ಯಾವ ತಿಳಿವಳಿಕೆ ನಮ್ಮನ್ನು ದೇವರ ಬಳಿ ಕೊಂಡೊಯ್ಯುವುದೋ ಅದೇ ಜ್ಞಾನ. ಸಾತ್ವಿಕರ ಸಂಗ, ಸದ್ಭಕ್ತರ ಸಹವಾಸ ಎಂಬುದು ಸ್ವರ್ಗಕ್ಕಿಂತಲೂ ದೊಡ್ಡದು ಎಂದು ಭಾಗವತ ತಿಳಿಸಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಾಗುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದರು.
ನಾವು ಅಪೂರ್ಣ ಮಾಡಿದ್ದನ್ನು ದೇವರು ಪೂರ್ಣ ಮಾಡುತ್ತಾನೆ. ಯಾರಿಗೆ ಯಾವ ಫಲವನ್ನು ಕೊಡಬೇಕು ಎಂಬುದು ಭಗವಂತನ ಸಂಕಲ್ಪ. ಲೋಕಕ್ಕೆ ಹಿತವಾಗುವ ಕಾರಣಕ್ಕಾಗಿ ಆತ ಪ್ರತಿ ಯುಗದಲ್ಲೂ ಅವತಾರ ಮಾಡಿದ್ದಾನೆ. ಸಾತ್ವಿಕ ಗುಣಗಳಿಂದ ಲೋಕ ಪಾಲನೆ ಮಾಡುವ ದೇವತೆಗಳಿಗೆ ಅಮೃತ ದೊರಕಿದ್ದು ಭಗವಂತನ ಕಾರುಣ್ಯದಿಂದಲೇ ಎಂದ ಅವರು ` ಸಮುದ್ರ ಮಥನ’ ಪ್ರಸಂಗವನ್ನು ವಿವರಿಸಿದರು.
Also read: ಹರೀಶಿ ಗ್ರಾಪಂ ಚುನಾವಣೆ: ಅನುಸೂಯ, ಎಲ್. ರವಿಕುಮಾರ ಅವಿರೋಧ ಆಯ್ಕೆ
ವಿಗ್ರಹ ಕೊಡುಗೆ:
ನಂತರ ಶ್ರೀಮದ್ ಆನಂದತೀರ್ಥ ಹರಿವಾಯು ಸ್ತುತಿ ಪಾರಾಯಣ ವೃಂದಕ್ಕೆ ನಿವೃತ್ತ ಇಂಜಿನಿಯರ್ ಮಹಿಷಿ ವಾಸುದೇವಮೂರ್ತಿ ಅವರು ಶ್ರೀ ಲಕ್ಷ್ಮಿ ನರಸಿಂಹ ವಿಗ್ರಹವನ್ನು ಕೊಡುಗೆಯಾಗಿ ನೀಡಿದರು. ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ, ಪಾರಾಯಣ ವೃಂದದ ಅಧ್ಯಕ್ಷ ಕೆ. ವೇಣುಗೋಪಾಲ ರಾವ್, ಪುರುಷೋತ್ತಮ ಇತರರು ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















