ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕಬ್ಬಿಗೆ ಹೆಚ್ಚುವರಿ ದರ ನಿಗದಿಗೆ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ನೂರಾರು ಕಬ್ಬು ಬೆಳೆಗಾರ ರೈತರು ಇಂದು ಮೈಸೂರು ಎಪಿಎಂಸಿ ವೃತ್ತದ ಬಳಿ ರಸ್ತೆ ಬಂದ್ ಚಳುವಳಿ ನಡೆಸಿ ಉರುಳು ಸೇವೆ ಮಾಡಿದರು,
ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರಗಳು ಸುಳ್ಳು ಹೇಳಿ ರೈತರನ್ನು ಮರಳು ಮಾಡುವುದು ನಿರಂತರವಾಗಿ ಮುಂದುವರಿಯುತ್ತಿದೆ. ರೈತರ ಓಟಿನಿಂದ ಗೆದ್ದ ಎಂಎಲ್ಎಗಳು ಮಂತ್ರಿಗಳು, ಸಕ್ಕರೆ ಕಾರ್ಖಾನೆಯ ಮಾಲೀಕರ ಕೈಗಾರಿಕೋದ್ಯಮಿಗಳ, ಶಿಕ್ಷಣ ಸಂಸ್ಥೆಯ, ಭೂ ಮಾಫಿಯಾ, ಮಧ್ಯದ ಮಾರಾಟಗಾರ ಮಾಲೀಕರ ಪರವಾಗಿ ಮಾತ್ರ ಮಾತನಾಡುತ್ತಾರೆ, ರೈತರ ಪರವಾಗಿ ಯಾರೂ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ನಾಲ್ಕು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಮೌನವಾಗಿರುವುದು ಬೆಕ್ಕಿಗೆ ಚೆಲ್ಲಾಟ ಇಲಿಗೆ ಸಂಕಟ ಎನ್ನುವಂತಾಗಿದೆ. ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರ ಹಿತರಕ್ಷಣೆ ಕಾಣಿಸುತ್ತಿಲ್ಲವಾಗಿದೆ. ಮುಂದೆ ಚುನಾವಣೆ ಬರುತ್ತಿದೆ ರಾಜ್ಯದ 38 ಸಕ್ಕರೆ ಕಾರ್ಖಾನೆ ಮಾಲಿಕತ್ವದ ಎಂಎಲ್ಎ ಎಂಪಿ ಮಂತ್ರಿಗಳನ್ನು ಸೋಲಿಸಿ ಮನೆಗೆ ಕಳಿಸಿದರೆ ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುತ್ತದೆ ಈ ಬಗ್ಗೆ ರಾಜ್ಯದ ರೈತರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಇಂದು ರಾಜ್ಯದ ಬೆಳಗಾವಿ ದಾವಣಗೆರೆ, ಧಾರವಾಡ, ಕಲಘಟಗಿ, ಹಳಿಯಾಳ, ಮೈಸೂರು ಬಳ್ಳಾರಿ ಹಡಗಲಿ, ಗುಲ್ಬರ್ಗ ಅಫ್ಜಲ್ಪುರ, ಬಿಜಾಪುರ ಬಾಗಲಕೋಟೆ, ಗದಗ್ ಮುಂಡರಗಿ, ಯಲಹಂಕ ರಾಜಾನುಕುಂಟೆ, ಚಾಮರಾಜನಗರ, ಹಾಸನ ಬೀದರ್, ಚನ್ನರಾಯಪಟ್ಟಣ, ಕೊಪ್ಪಳ, ರಾಜ್ಯ ಹೆದ್ದಾರಿ ಜಿಲ್ಲೆಗಳಿಂದ ಚಳುವಳಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ 31ರಂದು ಆಯಾ ಜಿಲ್ಲೆಯ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಯಾಕಿ ನ್ಯಾಯ ಸಿಗುವ ತನಕ ನಿರಂತರ ಹೋರಾಟ ನಡೆಸಲಾಗುವುದು ಎಂದರು
ಪಂಜಾಬ್ ರಾಜ್ಯದಲ್ಲಿ 3800, ಉತ್ತರ ಪ್ರದೇಶದಲ್ಲಿ 3500, ಗುಜರಾತ್ ನಲ್ಲಿ 4400 ದರ ನಿಗದಿ ಮಾಡಿದ್ದಾರೆ ಎಂಬುದು ರಾಜ್ಯ ಸರ್ಕಾರಕ್ಕೆ ತಿಳಿದ ವಿಚಾರವೇ ಆಗಿದೆ. ಇದನ್ನು ಗಮನಿಸಿ ಎಫ್ ಆರ್ ಪಿ ಬೆಲೆಯನ್ನು ಕನಿಷ್ಠ ಇಳುವರಿಗೆ ಟನ್‌ಗೆ 3500 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
Also read: ಭೂಸ್ವಾಧೀನ ಪ್ರಕ್ರಿಯೆ ತ್ವರಿತ ವಿಲೇವಾರಿಗೆ ಕ್ರಮ: ಸಚಿವ ಗೋವಿಂದ ಕಾರಜೋಳ ಸೂಚನೆ
ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಕಬ್ಬು ಕಟಾವು 16 ತಿಂಗಳಾಗುತ್ತಿದೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್ ಆಧಾರದ ದರ ಕಡಿತ ಮಾಡಬೇಕು. ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕಬ್ಬು ಕಟಾವು16-18 ತಿಂಗಳು ವಿಳಂಬವಾಗುತ್ತಿದೆ. ಈ ರೀತಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗೆ ಬಡ್ಡಿ ಸೇರಿಸಿ ಹೆಚ್ಚುವರಿ ದರ ಕೊಡಬೇಕು. ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ಕಡಿತಗೊಳಿಸಬೇಕು. ಸಕ್ಕರೆ ಕಾರ್ಖಾನೆ ಫೀಲ್ಡ್ ಮೆನ್‌ಗಳು ಬಿಲ್ ನಲ್ಲಿ ನೋಂದಾಯಿಸದೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ನಿಲ್ಲಬೇಕು
ರೈತ ಮತ್ತು ಕಾರ್ಖಾನೆ ನಡುವೆ ಸರ್ಕಾರ ಜಾರಿಗೆ ತಂದಿರುವ ದ್ವಿಪಕ್ಷೀಯ ಪತ್ರ ಒಪ್ಪಂದವಾಗಬೇಕು. ಕೃಷಿ ಲಾಭದಾಯಕ ಆಗುವವರೆಗೂ ರೈತರ ಎಲ್ಲಾ ಸಾಲಗಳು ಮನ್ನಾ ಆಗಬೇಕು. ಬ್ಯಾಂಕುಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪದ್ಧತಿಯನ್ನು ಕೈಬಿಡಬೇಕು ಕೃಷಿ ಉದ್ದೇಶಕ್ಕೆ ಅನ್ವಯಿಸಬಾರದು ಸರ್ಕಾರ ನೀಡುವ ಪರಿಹಾರ, ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನದ ಹಣವನ್ನು ಸಾಲದ ಖಾತೆಗಳಿಗೆ ಜಮಾ ಮಾಡಬಾರದು. ಬಗರ್ ಹುಕುಂ ಮತ್ತು ಹಿಂದಿನಿಂದಲೂ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ,ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವವರಿಗೆ ಸಾಗುವಳಿ ಪಟ್ಟಾವನ್ನು ನೀಡಬೇಕು. ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಿ ಕಾಡುಪ್ರಾಣಿಗಳಿಂದ ಬೆಳೆಗಳ ಹಾನಿಯಾಗುತ್ತಿದ್ದು ವೈಜ್ಞಾನಿಕ ನಷ್ಟವನ್ನು ತುಂಬಿಕೊಡಬೇಕು ಎಂದು ಒತ್ತಾಯಿಸಲಾಯಿತು.
ಎಲ್ಲಾ ಒತ್ತಾಯಗಳ ಬಗ್ಗೆ ಜಿಲ್ಲಾಧಿಕಾರಿಗಳ ಪರವಾಗಿ ಚಳುವಳಿ ಜಾಗಕ್ಕೆ ಬಂದ ಆಹಾರ ಇಲಾಖೆ ಉಪ ನಿರ್ದೇಶಕರಾದ ರಮಣಿಯವರು ರೈತರ ಒತ್ತಾಯ ಪತ್ರ ಪಡೆದು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಿರ್ಲಕ್ಷ್ಯ ಮಾಡಿದರೆ 31ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ನಿರಂತರ ಚಳುವಳಿ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕುರುಬೂರು ಸಿದ್ದೇಶ್, ವೆಂಕಟೇಶ್, ಹಾಡ್ಯರವಿ, ಕಿರಗಸೂರು ಶಂಕರ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post