ಕಲ್ಪ ಮೀಡಿಯಾ ಹೌಸ್ | ಮೈಸೂರು |
ನವ ನವೀನ ತಂತ್ರಜ್ಞಾನಗಳನ್ನು ನಮ್ಮದಾಗಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಮೈಸೂರು ವಿವಿ ತಾಂತ್ರಿಕ ಶಾಲೆ (ಸ್ಕೂಲ್ ಆಫ್ ಇಂಜಿನಿಯರಿಂಗ್) ನಿರ್ದೇಶಕ ಡಾ. ಟಿ. ಅನಂತ ಪದ್ಮನಾಭ ಹೇಳಿದರು.
ವಿದ್ಯಾರ್ಥಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಾಂತ್ರಿಕ ಶಾಲೆಯ ಎಐಎಂಎಲ್ ವಿಭಾಗ ಮತ್ತು ಮತ್ತು ವೆಬ್ ಕ್ಯಾಸ್ಕೇಡ್ ಸಂಸ್ಥೆ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ರೀಸೆಂಟ್ ಟ್ರೆಂಡ್ಸ್ ಇನ್ ಇನ್‌ಫಾರ್ಮೇಷನ್ ಟೆಕ್ನಾಲಜಿ’ ವಿಶೇಷ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸದಾ ಹೊಸದನ್ನು ಹುಡುಕುವ, ಅನ್ವೇಷಿಸುವ ಮತ್ತು ಅನ್ವಯಿಸಿಕೊಳ್ಳುವ ಮನೋಭಾವ ಇರಬೇಕು. ಆಗ ಮಾತ್ರ ಜೀವನದ ಗುರಿಯನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿವಿ ಮತ್ತು ಕಾಲೇಜು ಆಯೋಜಿಸುವ ಶಿಬಿರ, ಕಾರ್ಯಾಗಾರ ಮತ್ತು ಸಂಪನ್ಮೂಲ ವ್ಯಕ್ತಿಗಳ ವಿಶೇಷ ಉಪನ್ಯಾಸದಿಂದ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
Also read: ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ದಿಢೀರ್ ಭೇಟಿ: ವಾರ್ಡ್‌ಗಳ ಪರಿಶೀಲನೆ
ವಯೋಸಹಜವಾಗಿರುವ ಆಸೆ, ಆಮಿಷಗಳನ್ನು ಪದವಿ ವಿದ್ಯಾರ್ಥಿಗಳು ಗೆಲ್ಲಬೇಕು. ತಾಂತ್ರಿಕ ವಿಭಾಗದ, ಅದರಲ್ಲೂ ಕೃತಕ ಬುದ್ಧಿಮತ್ತೆ (ಎಐ), ರೋಬಾಟಿಕ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಅಧ್ಯಯನದೊಂದಿಗೆ ಸಂಶೋಧನಾ ಪ್ರವೃತ್ತಿಯೂ ಇಮ್ಮಡಿಗೊಳ್ಳಬೇಕು. ಈ ನಿಟ್ಟಿನಲ್ಲಿ ಯಾವುದೇ ಸಂಪನ್ಮೂಲ ದೊರಕಿಸಿಕೊಡಲು ಕಾಲೇಜು ಬದ್ಧವಾಗಿದೆ. ಇದನ್ನು ಸದುಪಯೋಗ ಪಡೆದುಕೊಂಡು ಉನ್ನತ ಮಟ್ಟಕ್ಕೇರುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಅನಂತ ಪದ್ಮನಾಭ ಹೇಳಿದರು.
ನಿರುದ್ಯೋಗ ಸಮಸ್ಯೆ ಉಂಟಾಗದು
ಬೆಂಗಳೂರಿನ ವೆಬ್ ಕ್ಯಾಸ್ಕೇಡ್ ಟೆಕ್ನಾಲಜೀಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಎಸ್. ಜಯಂತ್ ಕಾರ್ಯಾಗಾರ ಉದ್ಘಾಟಿಸಿ, ಪ್ರಧಾನ ಉಪನ್ಯಾಸ ನೀಡಿದರು. ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಶರವೇಗದಲ್ಲಿ ಬೆಳೆಯುತ್ತಿರುವುದು ಪ್ರಗತಿಯ ಸೂಚಕ. ಇದರಿಂದ ಯಾವುದೇ ನಿರುದ್ಯೋಗ ಸಮಸ್ಯೆ ಉಂಟಾಗದು ಎಂದರು.
ಎಐ ತಂತ್ರಜ್ಞಾನದಿಂದ ಜೀವನ ಮಟ್ಟ ಉತ್ತಮವಾಗುತ್ತದೆ. ದೈಹಿಕ ಶ್ರಮ ಕಡಿಮೆಯಾಗುತ್ತದೆ. ಮಾನವ ಸಂಪನ್ಮೂಲವೂ ಕಡಿತವಾಗುತ್ತದೆ. ಆದರೆ ತಂತ್ರಜ್ಞಾನ ನಿಯಂತ್ರಿಸುವ, ನಿರ್ವಹಿಸುವ ಮತ್ತು ಹೊಸದನ್ನು ಕಂಡುಹಿಡಿಯುವ ರಂಗದಲ್ಲಿ ಕೌಶಲ ಇದ್ದವರಿಗೆ ಸದಾ ಉದ್ಯೋಗಾವಕಾಶ ಹೇರಳವಾಗಿರುತ್ತದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದವರು ಹೇಳಿದರು.
ಐಓಟಿ, ರೋಬಾಟಿಕ್ ಮತ್ತು ಆರ್ಡಿನೋ ಮೈಕ್ರೋ ಕಂಟ್ರೋಲರ್ ತಂತ್ರಜ್ಞಾನದ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ನೀಡಿದ ಜಯಂತ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೊಸ ಹೊಸ ಆವಿಷ್ಕಾರದ ಬಗ್ಗೆ ವಿಷಯ ಮನದಟ್ಟು ಮಾಡಿದರು. ವೆಬ್ ಕ್ಯಾಸ್ಕೇಡ್ ಟೆಕ್ನಾಲಜೀಸ್ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಎಚ್. ಎಂ. ಸುಸ್ಮಿತಾ ದಿಕ್ಸೂಚಿ ಭಾಷಣ ಮಾಡಿದರು. ಎಐ ಎಂಎಲ್ ವಿಭಾಗದ ಮುಖ್ಯಸ್ಥ ಕೆ.ಎಸ್. ಸಂತೋಷ ಕುಮಾರ್, ಸಹಾಯಕ ಪ್ರಾಧ್ಯಾಪಕಿ ಡಾ. ಬಿ.ವಿ. ದಿವ್ಯಶ್ರೀ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post