ಕಲ್ಪ ಮೀಡಿಯಾ ಹೌಸ್ | ಮೈಸೂರು |
ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಅಮಾಯಕರನ್ನು ನಂಬಿಸಿ ನಕಲಿ ನೇಮಕಾತಿ ಪತ್ರ ನೀಡಿ ಕೋಟ್ಯಂತರ ರೂ. ವಂಚನೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರು ಸಂರಕ್ಷಣಾ ರೈಲ್ವೆ ದಳದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಇದೊಂದು ಬೃಹತ್ ಜಾಲ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದ್ದು, ಇದರ ಹಿಂದಿರುವ ಹಲವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಸದ್ಯ ಚಂದ್ರಗೌಡ ಎಸ್. ಪಾಟೀಲ್ ಹಾಗೂ ರೈಲ್ವೆ ಇಲಾಖೆಯ ನಿವೃತ್ತ ನೌಕರ ಶಿವಸ್ವಾಮಿ ಎನ್ನುವವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 4.15ಲಕ್ಷ ರೂ., ನಗದು ಹಾಗೂ ಹಲವರಿಂದ ಸಹಿ ಮಾಡಿಸಿಕೊಂಡಿರುವ 221 ಖಾಲಿ ಚೆಕ್‌ಗಳು ಆಕಾಂಕ್ಷ ಅಭ್ಯರ್ಥಿಗಳ ಮೂಲ ದಾಖಲೆಗಳು, ಚೆಕ್ ಬುಕ್, 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಪಿಟಿಇ ನಕಲಿ ನಾಮಫಲಕಗಳು, ಒಂದು ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್ ಸೇರಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ವಂಚಕರು ಉದ್ಯೋಗದ ಆಸೆ ತೋರಿಸಿ ಸುಮಾರು 400 ಅಭ್ಯರ್ಥಿಗಳಿಂದ 22 ಕೋಟಿ ರೂ.ಗಳಷ್ಟು ಹಣ ವಂಚಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಆಕಾಂಕ್ಷ ಅಭ್ಯರ್ಥಿಗಳನ್ನು ನಂಬಿಸುವ ಸಲುವಾಗಿ ನಗರದ ಹೈವೇ ಸರ್ಕಲ್ ಬಳಿ ಮನೆಯೊಂದನ್ನು ರೈಲ್ವೆ ಕಚೇರಿಯಾಗಿ ಬಿಂಬಿಸಿದ್ದರು ಎಂದು ವರದಿಯಾಗಿದೆ.
ಬಡ ಹಾಗೂ ಮಧ್ಯಮವರ್ಗದ ಯುವಕರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಮಂಡಿಮೊಹಲ್ಲಾ ಠಾಣೆಗೆ ಪ್ರಕರಣ ಹಾಗೂ ಆರೋಪಿಗಳನ್ನು ಹಸ್ತಾಂತರಿಸಲಾಗಿದ್ದು, ಇವರ ವಿರುದ್ಧ ಐಪಿಸಿ ಸೆಕ್ಷನ್ 97/2021, ಯು/ಎಸ್ 464, 419, 420, 465, 468, 471ಆರ್/ಡಬ್ಲ್ಯೂ34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಆಯುಕ್ತ ಥಾಮಸ್ ಜಾನ್, ಸಹಾಯಕ ಭದ್ರತಾ ಆಯುಕ್ತ ಎ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಸತೀಶನ್, ಎಮ್. ನಿಶಾನ್, ವೆಂಕಟೇಶ್, ರಾಧಾಕೃಷ್ಣ ಸೇರಿ ಇನ್ನಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಸಾರ್ವಜನಿಕರೇ ಎಚ್ಚರ ವಹಿಸಿ:
ಪ್ರಕರಣ ಕುರಿತಂತೆ ಮಾತನಾಡಿರುವ ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್, ರೈಲ್ವೆ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ ಅಥವಾ ಮಾಹಿತಿಗಾಗಿ ಆಕಾಂಕ್ಷಿಗಳು ರೈಲ್ವೆ ನೇಮಕಾತಿ ಮಂಡಳಿಗಳ ಅಧಿಕೃತ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ನೀಡಬೇಕು. ಅಧಿಕೃತವಲ್ಲದ ಯಾವುದೇ ವ್ಯಕ್ತಿಗಳು ನೀಡುತ್ತಿರುವ ಜಾಹೀತುಗನ್ನು ನಿಲಕ್ಷಿಇಸ ಬೆಕು ಎಂದು ಸಲಹೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post