ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೇವರು ಜ್ಞಾನ ಆಸಕ್ತರನ್ನು, ವಿದ್ಯಾ ವಿಷಯದ ಹಸಿವು ಇರುವವರನ್ನು ಸದಾ ಅನುಗ್ರಹಿಸುತ್ತಾನೆ. ಹಾಗಾಗಿ ಜ್ಞಾನಿಗೆ ವಿಶ್ವದ ಎಲ್ಲೆಡೆ ಮಾನ್ಯತೆ ಇರುತ್ತದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ನುಡಿದರು.
ಸೋಸಲೆ ಗ್ರಾಮದ ಶ್ರೀ ಮಠದಲ್ಲಿ ಬೆಂಗಳೂರಿನ ಶ್ರೀ ಸರ್ವಜ್ಞ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ 2 ದಿನಗಳ ‘ಶ್ರೀ ಜಗನ್ನಾಥ ದಾಸರ ಹರಿ ಕಥಾಮೃತಸಾರದ ಪ್ರಧಾನ ಪ್ರಮೇಯಗಳನ್ನು ಶಾಸ್ತ್ರ ಗ್ರಂಥಗಳ ಆಧಾರದಿಂದ ವಿವರಿಸುವ ವಿಶೇಷ ಜ್ಞಾನ ಸತ್ರ- ಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು.
ಲೌಕಿಕ ವಿಚಾರಗಳನ್ನು ಕೊಂಚ ಬದಿಗೆ ಇರಿಸಿ ನಾವುಗಳು ತತ್ವ ಜ್ಞಾನದ ಶ್ರವಣ, ಮನನ ಮತ್ತು ನಿಧಿ ಧ್ಯಾಸನದಲ್ಲಿ ಆಸಕ್ತರಾದರೆ ಜೀವನ ಸಾರ್ಥಕವಾಗಲಿದೆ ಎಂದು ಅವರು ಹೇಳಿದರು.
ಹರಿ ಕಥಾಮೃತಸಾರ ಗ್ರಂಥ ಜನ ಸಾಮಾನ್ಯರಿಗೂ ಸರಳವಾಗಿ ಅರ್ಥವಾಗುವ ಕನ್ನಡದ ಕೃತಿ. ದೈವಿಕ ಆಸಕ್ತರನ್ನು ಪಾರಮಾರ್ಥಿಕ ವಿಚಾರಗಳತ್ತ ಸಾಗುವಂತೆ ಮಾಡುವ ವಿಶೇಷ ಪದ್ಯಗಳ ರಚನೆ ಅದರಲ್ಲಿ ಇದೆ. ಇದರ ಪ್ರಧಾನ ಪ್ರಮೇಯಗಳನ್ನು ಶಾಸ್ತ್ರ ಗ್ರಂಥಗಳ ಆಧಾರದಿಂದ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಜ್ಞಾನ ಸತ್ರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಜಗನ್ನಾಥದಾಸರ ಸೇವೆ ದೊಡ್ಡದು
ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಹಿರಿಯ ವಿದ್ವಾಂಸ ವಿದ್ವಾನ್ ಡಾ. ಎ.ವಿ. ನಾಗಸಂಪಿಗೆ ಆನಂದತೀರ್ಥ ಆಚಾರ್ಯರ ಪ್ರಸ್ತಾವಿಕವಾಗಿ ಮಾತನಾಡಿ, ದ್ವೈತ ಮತ ಸಿದ್ಧಾಂತಿ ಆಚಾರ್ಯ ಶ್ರೀ ಮಧ್ವರ ಮತ್ತು ಅವರ ಸಂದೇಶಗಳನ್ನು ಜನರಿಗೆ ಸರಳ ಕನ್ನಡದಲ್ಲಿ ತಿಳಿಸಿಕೊಡುವ ನಿಟ್ಟಿನಲ್ಲಿ ಹರಿ ಕಥಾಮೃತ ಸಾರ ಮಹತ್ವದ ಕಾರ್ಯವನ್ನು ಮಾಡಿದೆ. ಈ ದಿಸೆಯಲ್ಲಿ ದಾಸ ಪರಂಪರೆಯ ಶ್ರೀ ಜಗನ್ನಾಥದಾಸರ ಸಾಹಿತ್ಯ ಜ್ಞಾನ ಮತ್ತು ವಿಚಾರ ಪ್ರತಿಪಾದನೆ ಪರಮೋಚ್ಛವಾಗಿದೆ ಎಂದರು. ದಾಸರ ಕೊಡುಗೆಯನ್ನು ವಿದ್ವತ್ ಪ್ರಪಂಚ ಸದಾ ಸ್ಮರಣೆ ಮಾಡಿಕೊಳ್ಳುತ್ತದೆ ಎಂದವರು ನುಡಿದರು.
ಮೊದಲನೇ ಗೋಷ್ಠಿಯಲ್ಲಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಬದರಿನಾಥ ಆಚಾರ್ಯ ಅವರು‘ ಬ್ರಹ್ಮ ಸ್ವರೂಪ ಎಂಬ ವಿಷಯವನ್ನು ಮಂಡಿಸಿದರು.
ಪರಬ್ರಹ್ಮನಾದ ಹರಿಯು ಅನಂತ ಕಲ್ಯಾಣ ಗುಣಪೂರ್ಣನಾಗಿದ್ದಾನೆ. ಅವನನ್ನು ವೇದಗಳಿಂದ ಹಾಗೂ ವೇದಾನು ಸಾರಿ ಬ್ರಹ್ಮಸೂತ್ರಾದಿಗಳಿಂದ ಮಾತ್ರ ಸರಿಯಾಗಿ ತಿಳಿಯಲು ಸಾಧ್ಯ. ಈ ವಿಷಯವನ್ನು ಮೊದಲು ಲೋಕಕ್ಕೆ ತಿಳಿಸಿಕೊಟ್ಟವರೇ ಶ್ರೀ ಮಧ್ವಾಚಾರ್ಯರು. ಹಾಗಾಗಿ ಅವರನ್ನು ಪೂರ್ಣಪ್ರಜ್ಞರು ಎಂದು ಲೋಕ ಕೋಂಡಾಡಿತು ಎಂದರು.
ಎರಡನೇ ಗೋಷ್ಠಿಯಲ್ಲಿ ಮೈಸೂರಿನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಯುವ ವಿದ್ವಾಂಸ ಪ್ರಣವಾಚಾರ್ಯ ಮಾತನಾಡಿದರು. ಅನಂತವಾದ ವೇದಗಳು ಪರಮಾತ್ಮನನ್ನು ಸಮಗ್ರವಾಗಿ ತಿಳಿಸುತ್ತವೆ. ಭಗವಂತನ ಅಧೀನವಾದ ಜೀವಿಗಳು ಭಗವದ್ ಅನುಗ್ರಹದಿಂದ ಮಾತ್ರ ಸುಸ್ಥಿರವಾಗಿರಲು ಸಾಧ್ಯ ಎಂದು ಹೇಳಿದರು.
ಮೂರನೇ ಗೋಷ್ಠಿಯಲ್ಲಿ ಪಂಡಿತ ಕಳಸಾಪುರ ಶ್ರೀಕಾಂತ ಆಚಾರ್ಯ ಅವರು ಧ್ಯಾನದ ಸೋಪಾನಗಳ ಬಗ್ಗೆ ತಿಳಿಸಿರುವ ಪ್ರಮೇಯಗಳನ್ನು ಶ್ರುತಪಡಿಸಿದರು. ನಾಲ್ಕನೇ ಗೋಷ್ಠಿಯಲ್ಲಿ ವಿದ್ವಾನ್ ಸುಘೋಷ ಆಚಾರ್ಯ ಅವರು ‘ಹರಿಕಥಾಮೃತ ಸಾರ’ ಕೃತಿಯ ಕರುಣಾಸಂಧಿಯ ವಿಶೇಷ ವಿಷಯಗಳನ್ನು ಪ್ರತಿಪಾದಿಸಿದರು.
ಕರುಣಾಸಾಗರನಾದ ಶ್ರೀಹರಿಯು ತನ್ನ ಭಕ್ತರನ್ನು ಕರುಣಾಪೂರ್ಣ ದೃಷ್ಟಿಯಿಂದ ಅನುಗ್ರಹಿಸುತ್ತಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಪಂಡಿತರಾದ ಪಾಂಡುರಂಗ ಮಾಧವಾಚಾರ್ಯರು ಕೃತಿಯಲ್ಲಿರುವ ‘ಸರ್ವ ಸ್ವಾತಂತ್ರ್ಯ ಸಂಧಿ’ ಯನ್ನು ವಿಶ್ಲೇಷಣೆ ಮಾಡಿದರು. ನೂರಾರು ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post