ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ರುದ್ರ ನೃತ್ಯಯೋಗ ಶಾಲಾ ವತಿಯಿಂದ, ಭುವನೇಶ್ವರದ ಒಡಿಸ್ಸಿ ಇಂಟರ್’ನ್ಯಾಷನಲ್ ಫೋರಂ, ಪುರಿ ಜಗನ್ನಾಥ ಕಲ್ಚರಲ್ ಅಂಡ್ ವೆಲ್ ಫೇರ್ ಟ್ರಸ್ಟ್ ಹಾಗೂ ಮೈಸೂರು ಒಡಿಸ್ಸಿ ಕುಟುಂಬಗಳ ಸಹಭಾಗಿತ್ವದಲ್ಲಿ ಎರಡನೇ ಬಾರಿಗೆ ಒಡಿಸ್ಸಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ನೃತ್ಯಗುರು ಸಿಂಧು ಕಿರಣ್ ಹೇಳಿದರು.
ಮೈಸೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ನಗರದ ರಮಾ ಗೋವಿಂದ ರಂಗ ಮಂದಿರದಲ್ಲಿ ಸಂಜೆ 5.30ರಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಹೆಸರಾಂತ ಒಡಿಸ್ಸಿ ನೃತ್ಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ ಎಂದರು.
ಪತ್ರಕರ್ತ, ಮೈಸೂರು ಒಡಿಸ್ಸಿ ಕುಟುಂಬದ ವೈದ್ಯನಾಥ್ ಮಾತನಾಡಿ, ಒಡಿಸ್ಸಿ ನೃತ್ಯ ಉತ್ಸವದಲ್ಲಿ ಮೈಸೂರಿನ ರುದ್ರ ನೃತ್ಯ ಯೋಗ ಶಾಲೆಯ ಸಿಂಧು ಕಿರಣ್, ದುಬೈನ ಜೋತ್ಸ್ನಾ ಅಪ್ಪಯ್ಯ, ಕೋಲ್ಕತ್ತದ ತಾನಿಯಾ ಮನ್ನಾ, ಬೆಂಗಳೂರಿನ ಲಿಪಿಕಾ ನಾಯಕ್, ಪಾಯಲ್ ಮುಂಜಂದಾರ್ ಮಂಡಲ್, ಏನಾಕ್ಷಿ ಮುಜುಂದಾರ್ ಮಂಡಲ್, ದೀಪಿಕಾ ರತ್ನಾಕರ್, ಜನೀಲ್, ಕೆ. ಜ್ಯೋತಿಮಯಿ ಪಟ್ನಾಯಕ್, ಮೈಸೂರಿನ ಸ್ತುತ್ಯಶ್ರೀ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುರಿ ಜಗನ್ನಾಥ ಕಲ್ಚರಲ್ ಅಂಡ್ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಘನಶ್ಯಾಮ ಪ್ರಧಾನ್, ಮೈಸೂರಿನ ಭೂಷಣ್ ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್ಸ್ ಬದರಿ ದಿವ್ಯ ಭೂಷಣ್, ಶ್ರೀ ಕೃಷ್ಣ ಸೇವಾ ಸಮಿತಿಯ ಕಾರ್ಯದರ್ಶಿ ಭಾರತಿ ಶ್ರೀಧರ ರಾಜ ಅರಸ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಬಿ.ವಿ. ಮೂರ್ತಿ, ವಿಶೇಷ ಆಹ್ವಾನಿತರಾಗಿ, ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದ ಬದರಿ ದಿವ್ಯ ಭೂಷಣ ಪಾಲ್ಗೊಳ್ಳಲಿದ್ದಾರೆ. ಒಡಿಸ್ಸಿ ನೃತ್ಯ ಕಲಾವಿದೆ ಪೃಥೆ ಹವಾಲ್ದಾರ್ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.
ವಿದುಷಿ ಸಿಂಧು ಕಿರಣ್
ಮೈಸೂರು ಒಡಿಸ್ಸಿ ಉತ್ಸವದ ಸಂಚಾಲಕಿ ವಿದುಷಿ ಸಿಂಧು ಕಿರಣ್ ಅವರು, 2006ರಲ್ಲಿ ಸ್ಥಾಪನೆಗೊಂಡ, ಮೈಸೂರಿನ ಗೋಕುಲಂನಲ್ಲಿನ ರುದ್ರ ನೃತ್ಯ ಯೋಗಶಾಲೆಯ ಸಂಸ್ಥಾಪಕರು. ಸಂಗೀತ, ನೃತ್ಯ ಹಾಗೂ ಸಮರ ಕಲೆಯಾದ ಕಲಾರಿ ಪಯಟ್ಟುವಿನಲ್ಲಿ ಪರಿಣಿತಿ ಹೊಂದಿದ ಬಹುಮುಖ ಪ್ರತಿಭೆ. ಸ್ವತಃ ವೀಣಾ ವಾದಕಿಯಾಗಿರುವ ಇವರು, ಓಡಿಸ್ಸಿಯಲ್ಲದೇ ಮೋಹಿನಿ ಅಟ್ಟಂನಲ್ಲಿಯೂ ಗಮನ ಸೆಳೆದಿದ್ದಾರೆ. ನೃತ್ಯದ ಜೊತೆಗೆ ಯೋಗ ಶಿಕ್ಷಣವನ್ನು ಸಹ ನೀಡುತ್ತಿದ್ದಾರೆ.
Also read: ಎಲ್ಲಾ ಕಾಯಿಲೆಗಳಿಗೆ ತಾಯಿ ಎದೆಹಾಲು ಅತ್ಯಂತ ಪರಿಣಾಮಕಾರಿ: ಡಾ. ಧನಂಜಯ್ ಸರ್ಜಿ
ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಕೇರಳ ಜಾನಪದ ನೃತ್ಯಗಳು ಹಾಗೂ ಭರತ ನಾಟ್ಯಂನಲ್ಲಿ ಆಸಕ್ತಿ ಹೊಂದಿ ಅಭ್ಯಾಸ ಮಾಡಿರುವ ಇವರು, ಹೆಸರಾಂತ ನೃತ್ಯ ಕಲಾವಿದೆ ಪ್ರತಿಮಾ ಗೌರಿ ಬೇಡಿಯವರ ನೃತ್ಯದಿಂದ ಪ್ರಭಾವಿತರಾಗಿ ಬೆಂಗಳೂರಿನ ನೃತ್ಯ ಗ್ರಾಮದಲ್ಲಿ ನೃತ್ಯಾಭ್ಯಾಸ ಮಾಡಿದ್ದಾರೆ.
ನಾಡಿನ ಅತ್ಯಂತ ಗೌರವಾನ್ವಿತ ನೃತ್ಯಗುರು ಪದ್ಮಭೂಷಣ ಪಂಡಿತ್ ಕೇಳು ಚರಣ ಮಾಹಾಪಾತ್ರರವರಲ್ಲಿ ನೃತ್ಯಾಭ್ಯಾಸ ಮಾಡಿರುವ ಹಿರಿಮೆ ಇವರದ್ದು. ನೃತ್ಯಗ್ರಾಮದಲ್ಲಿ ಶಿಕ್ಷಣ ಪಡೆದ ನಂತರ ಒಡಿಸ್ಸಿಯ ಮೂಲ ಸೆಲೆಯಾದ ಭುವನೇಶ್ವರದಲ್ಲಿ ಗುರು ಶ್ರೀ ರತಿಕಾಂತ ಮಹೋಪಾತ್ರ, ಗುರು ಶ್ರೀ ರಮಣಿ ರಂಜನ್ ಜೆನ್ನಾರಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.
ಪ್ರಸಿದ್ಧ ಕಲಾಮಂಡಲಂನ ಕಲ್ಯಾಣಕುಟ್ಟಿ ಅಮ್ಮರವರಲ್ಲಿ ಮೋಹಿನಿ ಆಟ್ಟಂ ಅಭ್ಯಾಸ ಮಾಡಿರುವ ಇವರು, ನಂತರ ಗುರು ಸ್ಮಿತಾ ರಂಜನ್, ಗುರು ಭಾರತೀ ಶಿವಾಜಿಯವರಲ್ಲಿಯೂ ಶಿಕ್ಷಣ ಪಡೆದಿದ್ದಾರೆ.
ನೃತ್ಯ ಗುರು ಸಿಂಧು ಕಿರಣ್ ಅವರ ವಿಶೇಷತೆಯೆಂದರೆ, ತೀವ್ರತರವಾದ ಭಾವಾಭಿವ್ಯಕ್ತಿ. ಅಭಿನಯದಲ್ಲಿ ವಿಶೇಷ ಪರಿಣಿತಿ ಸಾಧಿಸಿರುವ ಇವರು, ಈ ಕುರಿತಾಗಿ ಗುರು ಕಲಾನಿಧಿ ನಾರಾಯಣ್ ಅವರಲ್ಲಿ ತರಬೇತಿ ಪಡೆದಿದ್ದಾರೆ.
ಸಿಂಧು ಕಿರಣ್ ಅವರು, 1992ರಿಂದ ದೇಶ ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದಿದ್ದಾರಲ್ಲದೇ ಯೂರೋಪ್, ದಕ್ಷಿಣ ಪೂರ್ವ ಏಷ್ಯಾದೇಶಗಳಲ್ಲಿ ಒಡಿಸ್ಸಿ ನೃತ್ಯ ಕುರಿತು ಕಾರ್ಯಾಗಾರಗಳನ್ನು ಸಹ ನಡೆಸಿಕೊಟ್ಟಿದ್ದಾರೆ.
ಶ್ರೇಷ್ಠಿವಾದ ಹಾಗೂ ಈ ಭಾಗದಲ್ಲಿ ಅಪರೂಪ ಎನ್ನಬಹುದಾದ ಒಡಿಸ್ಸಿ ನೃತ್ಯ ಪರಂಪರೆಯನ್ನು ಪರಿಚಯಿಸುವ ದೃಷ್ಟಿಯಿಂದ ಸಿಂಧು ಕಿರಣ್ ಅವರು ಮೈಸೂರು ಓಡಿಸ್ಸಿ ಉತ್ಸವವನ್ನು ಸಂಘಟಿಸಿದ್ದಾರೆ. ದೇಶ ವಿದೇಶಗಳ ಗಣ್ಯ ನೃತ್ಯ ಕಲಾವಿದರನ್ನು ಆಹ್ವಾನಿಸಿದ್ದಾರೆ.
ಒಡಿಸ್ಸಿ ನೃತ್ಯವನ್ನು ಮೈಸೂರಿನ ನೃತ್ಯ ರಸಿಕರು ಕಣ್ತುಂಬಿಕೊಳ್ಳುವ ಅವಕಾಶ ಇದು.
ಪತ್ರಿಕಾಗೋಷ್ಟಿಯಲ್ಲಿ ನೃತ್ಯ ಕಲಾವಿದೆ ಪೃಥೆ ಹವಾಲ್ದಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post