ಕಲ್ಪ ಮೀಡಿಯಾ ಹೌಸ್ | ಮೈಸೂರು |
ಇದೇ ವರ್ಷ ಕಬಿನಿ ಜಲಾಶಯದ ಉದ್ಯಾನವನ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ತಿಳಿಸಿದರು.
ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಬಿನಿ ಜಲಾಶಯದ ಉದ್ಯಾನವನವನ್ನು ಸರ್ಕಾರ ಮಾಡಬೇಕೋ ಅಥವಾ ಪಿಪಿಪಿ ಮಾದರಿಯಲ್ಲಿ ಮಾಡಬೇಕೋ ಎಂಬ ಗೊಂದಲದಲ್ಲಿದೆ. ಗೊಂದಲವನ್ನು ಆದಷ್ಟು ಬೇಗನೇ ನಿವಾರಿಸಿ ಕಾಮವಾರಿಯನ್ನು ಕೈಗೊಳ್ಳಲಾಗುವುದು ಎಂದರು.
ಹೆಚ್.ಡಿ.ಕೋಟೆಗೆ ವಿಶೇಷ ಕಾರ್ಯಕ್ರಮ:
ಹೆಚ್.ಡಿ.ಕೋಟೆ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂದು ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದರ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಶಿಕ್ಷಣ ವಲಯದಲ್ಲಿ ಅತಿ ಹೆಚ್ಚಿನ ಶಾಲಾ ಕಟ್ಟಡಗಳ ನಿರ್ಮಾಣ, ಪಿ ಹೆಚ್ ಸಿ ಕೇಂದ್ರಗಳನ್ನು ಸಿ.ಹೆಚ್.ಸಿ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಶಾಸಕರಿಗೆ ರಸ್ತೆ, ಮನೆಗಳ ನಿರ್ಮಾಣ ಕ್ಕೆ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಅವುಗಳ ಬಗ್ಗೆ ಗಮನ ಹರಿಸಿ ಬಿದ್ದುಹೋಗಿರುವ ಮನೆಗಳಿಗೆ ಗೊಂದಲ ನಿವಾರಿಸಿ, ಅನುದಾನ ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ ಎಂದರು.
Also read: ವಿಐಎಸ್‌ಎಲ್ ಕಾರ್ಖಾನೆಗೆ 300 ಕೋಟಿ ರೂ. ಬಂಡವಾಳ ತೊಡಗಿಸುವಂತೆ ಮನವಿ
ಸ್ಥಳೀಯ ಸಂಸ್ಥೆಗಳ ಚುನಾವಣೆ: ಸರ್ವೋಚ್ಚ ನ್ಯಾಯಾಲಯದಲ್ಲಿ 22 ರಂದು ಅರ್ಜಿ ಸಲ್ಲಿಕೆ
ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಕುರಿತು ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ಆಯೋಗ ತನ್ನ ವರದಿ ನೀಡಿದ ಕೂಡಲೇ ಸರ್ವೋಚ್ಚ ನ್ಯಾಯಾಲಯದಲ್ಲಿ 22 ರಂದು ಸಲ್ಲಿಸಲಾಗುವುದು. ನಂತರ ನ್ಯಾಯಾಲಯದ ನಿರ್ದೇಶನದ ಅನುಗುಣವಾಗಿ ಚುನಾವಣಾ ಪ್ರಕ್ರಿಯೆ ನಡೆಸಲಾಗುವುದು. ಹಾಗೂ ಮೈಸೂರು ಮೇಯರ್ ಚುನಾವಣೆ ಹಿಂದುಳಿದ ಆಯೋಗದ ವರದಿ ಬಂದ ಕೂಡಲೇ ನಡೆಸಲಾಗುವುದು ಎಂದು ತಿಳಿಸಿದರು.
ಜಿ.ಎಸ್.ಟಿ:
ಜಿ.ಎಸ್.ಟಿ ಪರಿಹಾರದ ವಿಸ್ತರಣೆ ಕಾನೂನಿನ ಅನ್ವಯ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಎಲ್ಲಾ ಪಕ್ಷಗಳು, ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ಮಾಡಿ ರೂಪಿಸಿರುವ ಕಾಯ್ದೆ ಜಿ.ಎಸ್.ಟಿ.
ಕಾಯ್ದೆ ರೂಪಿಸಿದಾಗಲೇ ಐದು ವರ್ಷಕ್ಕೆ ಜಿ.ಎಸ್.ಟಿ ಪರಿಹಾರವನ್ನು ನಿಗದಿ ಮಾಡಲಾಗಿತ್ತು. ಕೋವಿಡ್ ಬಂದಂಥ ಸಂದರ್ಭದಲ್ಲಿಯೂ ಕೂಡ ಯಾವುದೇ ರೀತಿಯ ಸಂಗ್ರಹವಾಗದಿದ್ದರೂ ಪರಿಹಾರವನ್ನು ಕೇಂದ್ರ ಸರ್ಕಾರ ಕೊಟ್ಟಿದೆ. ಎಲ್ಲರೂ ಎರಡು ವರ್ಷ ವಿಸ್ತರಣೆ ಮಾಡಲು ಕೋರಿದ್ದೆವು. ಆದರೆ, ಕಾನೂನಿನ ಅನ್ವಯ ಅದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಬಾಕಿ ಇದ್ದ 8800 ಕೋಟಿ ರೂ.ಗಳನ್ನು ನೀಡಿದ್ದಾರೆ. ಅದಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ನಾನೊಂದು ತೀರ, ನೀನೊಂದು ತೀರ ವಾಗಿದ್ದಾರೆ:
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ‘ಮೊದಲು ಅವರ ತಟ್ಟೆಯಲ್ಲಿ ಏನಿದೆ ಎಂದು ನೋಡಿಕೊಳ್ಳಲಿ. ಆಮೇಲೆ ಮತ್ತೊಬ್ಬರ ತಟ್ಟೆಯಲ್ಲಿ ಇರುವುದನ್ನು ಗಮನಿಸಿ’. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ನಾನೊಂದು ತೀರ, ನೀನೊಂದು ತೀರ ವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರಿಗೆ ತಾವು ಮುಖ್ಯಮಂತ್ರಿಯಾಗಬೇಕೆಂಬದು ಬಹಳ ವರ್ಷಗಳ ಕನಸು. ಕೆಪಿಸಿಸಿ ಅಧ್ಯಕ್ಷರಾಗಿಯೇ ಸರಿಯಾಗಿ ಕೆಲಸ ಮಾಡಲು ಕಾಂಗ್ರೆಸ್ ಬಿಡುತ್ತಿಲ್ಲ. ಏನು ನಡೆಯುತ್ತಿದೆ ಎಂದು ನಾವು ಪ್ರತಿದಿನ ನೋಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post