ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ #Bengaluru ಆಯೋಜಿಸಿದ್ದ 61ನೇ ಅಖಿಲ ಕರ್ನಾಟಕ ಸಂಸ್ಕೃತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಮೈಸೂರಿನ ಕೃಷ್ಣ ಪಿ. ಬಾದರಾಯಣ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಅಯೋಧ್ಯೆಯಲ್ಲಿ ಮಾ. 18ರಂದು ಕೇಂದ್ರೀಯ ಸಂಸ್ಕೃತ #Sanskrit ವಿವಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿದ್ದು ಈತ ಕರ್ನಾಟಕವನ್ನು #Karnataka ಪ್ರತಿನಿಧಿಸುತ್ತಿರುವುದು ವಿಶೇಷ.
ಬಹುಮಾನದ ವಿವರ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಷಯ ಅಧ್ಯಯನ ಮಾಡುತ್ತಿರುವ ಈತ ‘ಭಾರತೀಯ ಪುರಾತನ ವಿಜ್ಞಾನ (ರಸಾಯನ ಶಾಸ್ತ್ರ)ದ ಮಹತ್ವ’ ಎಂಬ ವಿಷಯದ ಬಗ್ಗೆ ಸಂಸ್ಕೃತದಲ್ಲಿ #Sanskrit ವಿಷಯ ಮಂಡಿಸಿ ಪ್ರಥಮ ಸ್ಥಾನದೊಂದಿಗೆ 5, 000 ರೂ. ನಗದು ಮತ್ತು ಪ್ರಶಸ್ತಿ ಪತ್ರ ವಿಜೇತನಾಗಿದ್ದಾನೆ.
ಉತ್ತರಾದಿ ಮಠದ #UttaradiMutt ಹಿರಿಯ ವಿದ್ವಾಂಸ ಬಾದರಾಯಣಾಚಾರ್ಯ ಮತ್ತು ಭಾಗ್ಯಶ್ರೀ ಅವರ ಪುತ್ರನಾದ ಈತ ತಂದೆಯ ಬಳಿಯೇ ಸಂಸ್ಕೃತ ವೇದ, ಶಾಸ್ತ್ರ ಅಧ್ಯಯನ ಮಾಡುತ್ತಿದ್ದು ಮೈಸೂರಿಗೆ #Mysore ಕೀರ್ತಿ ತಂದಿದ್ದಾನೆ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗದ 20 ಸಂಸ್ಕೃತ ಪಾಠಶಾಲೆ, ಗುರುಕುಲಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನೃಪತುಂಗ ಸಂಸ್ಕೃತ ವಿವಿ ಕುಲಪತಿ ಶ್ರೀನಿವಾಸ ಬಳ್ಳಿ, ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ. ಅಹಲ್ಯಾ, ಕುಲಸಚಿವೆ ಡಾ. ರೂಪಶ್ರೀ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಕಳೆದ ವರ್ಷ ಆಯೋಜಿಸಿದ್ದ ಸಂಸ್ಕೃತ ಒಲಂಪಿಯಾಡ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ್ದ ಕೃಷ್ಣ, ರಾಷ್ಟ್ರ ಮಟ್ಟದಲ್ಲೂ ಪ್ರಥಮ ಬಹುಮಾನದೊಂದಿಗೆ ಪಾರಮ್ಯ ಮೆರೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದ. ಉದಯೋನ್ಮುಖ ಪ್ರತಿಭೆಗೆ ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮ ತೀರ್ಥ ಸ್ವಾಮೀಜಿ ಅಭಿನಂದಿಸಿದ್ದಾರೆ.
ಗುರುಗಳ ಅನುಗ್ರಹವೇ ದಾರಿದೀಪ
ಮಗ ಕೃಷ್ಣನ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ತಂದೆ ಮತ್ತು ಮಾರ್ಗದರ್ಶಕರಾದ ಪಂಡಿತ ಬಾದರಾಯಣ ಆಚಾರ್ಯರು, ಎಲ್ಲ ಸಾಧನೆಗೂ ನಮ್ಮ ವಿದ್ಯಾ ಗುರು ಮತ್ತು ಸ್ವರೂಪ ಉದ್ಧಾರ ಕರಾದ ಶ್ರೀ ಸತ್ಯಾತ್ಮ ತೀರ್ಥರೇ ಪ್ರೇರಕ ಮತ್ತು ಪೂರಕ. ಅವರ ಅನುಗ್ರಹ ನಮಗೆ ದಾರಿದೀಪ. ಶಾಸ್ತ್ರ ವಿದ್ಯೆ ಒಂದು ಸಮುದ್ರ ಇದ್ದಂತೆ. ಅದರಲ್ಲಿ ಮಗ ಇನ್ನೂ ಸಾಧನೆ ಮಾಡುವುದು ಬಹಳ ಇದೆ. ಈಗ ದೊರೆತ ಮನ್ನಣೆ ಮತ್ತು ಬಹುಮಾನವು ಗುರುಗಳ ಪಾದಗಳಿಗೆ ಸಮರ್ಪಣೆ ಮಾಡುವುದೇ ನಮ್ಮ ಧನ್ಯತೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post