ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡರೆ ಜೀವನ ಸುಗಮ ಎಂದು ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಅಧ್ಯಾಪಕ ಶ್ರೀಕಾಂತಾಚಾರ್ಯ ಕಳಸಾಪುರ ಹೇಳಿದರು .
ನಗರದ ಕೃಷ್ಣಮೂರ್ತಿಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಅಧಿಕ ಮಾಸದ ಅಂಗವಾಗಿ ಆಯೋಜಿಸಿರುವ `ರಾಮಾಯಣ ಪ್ರವಚನ ಸರಣಿ’ಯಲ್ಲಿ ಅವರು ಭಾನುವಾರ ಉಪನ್ಯಾಸ ನೀಡಿದರು.
ನಾವು ಯಾರಿಗಾದರೂ ಮಾತು ಕೊಡುವಾಗ ಎಚ್ಚರದಿಂದ ಇರಬೇಕು. ಇಲ್ಲದಿದ್ದರೆ ಅದೇ ನಮಗೆ ಮಾರಕವಾಗಿ ಪರಿಣಮಿಸಿ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎಂದು ರಾಮಾಯಣ ಎಚ್ಚರಿಕೆ ನೀಡಿದೆ ಎಂದು ಅವರು ಹೇಳಿದರು.
Also read: ಅತಿಕ್ರಮಣ ಪ್ರದೇಶದಲ್ಲಿ ಮರು ಅರಣ್ಯೀಕರಣಕ್ಕೆ ಸೂಚನೆ ಹಿನ್ನೆಲೆ: ಸಚಿವರಿಗೆ ಅಭಿನಂದನೆ
ಯುದ್ಧಭೂಮಿಯಲ್ಲಿ ತನಗೆ ಸಾರಥಿಯಾಗಿ ಸಹಾಯ ಮಾಡಿದ್ದ ಕೈಕೇಯಿಗೆ ದಶರಥ ಎರಡು ವರಗಳನ್ನು ನೀಡುತ್ತೇನೆ ಎಂದು ಮಾತು ಕೊಟ್ಟಿದ್ದ. ಬುದ್ಧಿವಂತಳಾದ ಆಕೆ ಆ ವರಗಳನ್ನು ಅಗತ್ಯ ಇದ್ದಾಗ ಬಳಸಿಕೊಳ್ಳುವೆ ಎಂದಿದ್ದಳು. ರಾಮನಿಗೆ ಪಟ್ಟಾಭಿಷೇಕ ಮುಹೂರ್ತ ನಿಗದಿಯಾದಾಗ ವರಗಳ ಲಾಭ ಪಡೆದಳು. ಇದಕ್ಕೆ ದಾಸಿ ಮಂಥರೆ ನೀಡಿದ್ದ ಕುಮ್ಮಕ್ಕೂ ಕಾರಣವಾಯಿತು ಎಂದರು.
ನನ್ನ ಮಗ ಭರತ ರಾಜನಾಗಬೇಕು ಎಂಬ ಏಕೈಕ ಉದ್ದೇಶದಿಂದ ಕೈಕೇಯಿ ರಾಮನನ್ನು 14 ವರ್ಷ ವನವಾಸಕ್ಕೆ ಕಳಿಸಲು ಕಾರಣಳಾದಳು ಎಂದು ಶ್ರೀಕಾಂತಾಚಾರ್ಯ ಸಂದರ್ಭ ಸಹಿತ ವಿವರಿಸಿದರು.
ದುರ್ಬುದ್ಧಿಯನ್ನು ಬಿಡು ಎಂದು ದಶರಥ ಪರಿಪರಿಯಾಗಿ ಕೈಕೇಯಿಗೆ ಕೇಳಿಕೊಂಡರೂ ಅವಳು ಅದಕ್ಕೆ ಒಪ್ಪಲಿಲ್ಲ. ರಾಮ ವನವಾಸಕ್ಕೆ ಹೋದ ಎಂಬ ನೋವಿನಲ್ಲೇ ದಶರಥ ಪ್ರಾಣ ಬಿಡುವ ಸ್ಥಿತಿ ಬಂತು. ಹಾಗಾಗಿ ನಾವು ಯಾರಿಗೇ ಮಾತು ನೀಡುವಾಗ ನಮ್ಮ ನಾಲಿಗೆಯನ್ನು ನಿಯಂತ್ರಣದಲ್ಲಿ ಇರಿಸಿಕೊಂಡು, ಒಮ್ಮೆ ಚಿಂತನೆ ಮಾಡಿಯೇ ಮುನ್ನಡೆಯಬೇಕು ಎಂಬುದು ರಾಮಾಯಣದ ಸಂದೇಶ ಎಂದವರು ಹೇಳಿದರು.
ಶ್ರೀ ವಿಶ್ವೇಶತೀರ್ಥ ಪ್ರತಿಷ್ಠಾನದ ಕಾರ್ಯದರ್ಶಿ ವೆಂಕಟರಾವ್, ವಿದ್ಯಾಪೀಠದ ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ, ವಾಸುಕಿ, ಭಾರತಿ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post