ಕಲ್ಪ ಮೀಡಿಯಾ ಹೌಸ್ | ಮೈಸೂರು |
ಹಿರಿಯರು, ಜ್ಞಾನಿಗಳು, ಸಾಧಕರು ಹೇಳಿದ ಮಾತನ್ನು ಕೇಳಿ, ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದು ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ, ಮಹಾ ಮಹೋಪಾಧ್ಯಾಯ ಡಾ. ಮಾಹುಲಿ ವಿದ್ಯಾಸಿಂಹಾಚಾರ್ಯ ನುಡಿದರು.
ನಗರದ ಅಗ್ರಹಾರದ ಉತ್ತರಾದಿ ಮಠದ ಧನ್ವಂತರಿ ಸನ್ನಿಧಾನದಲ್ಲಿ ಹಮ್ಮಿಕೊಂಡಿರುವ ಭಾಗವತ ಚಿಂತನೆ -ಜ್ಞಾನ ಸತ್ರ ಸರಣಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಸಜ್ಜನರ ಕೃಪೆ ಇದ್ದರೆ, ದೇವರಿಗೆ ಇಷ್ಟವಾಗುವ ಕಾರ್ಯಗಳನ್ನು ಮಾಡಿದರೆ ವಿಜಯ ಖಚಿತ ಎಂದು ಭಾಗವತ ಹೇಳಿದೆ. ಈ ಮಾನವ ದೇಹ ಇರುವುದು ಕೇವಲ ಭೋಗ ಮಾಡಲಿಕ್ಕಾಗಿ ಅಲ್ಲ. ಧ್ಯಾನ ಮತ್ತು ತಪಸ್ಸನ್ನು ಏಕಾಗ್ರ ಚಿತ್ತದಿಂದ ಆಚರಿಸಿ. ಮನವನ್ನು ನಿರ್ಮಲ ತಾಣವನ್ನಾಗಿಸಿಕೊಳ್ಳಿ. ನಾಟಕೀಯ ಜೀವನ ಎಂದೆಂದಿಗೂ ಬೇಡ ಎಂಬುದೇ ಭಾಗವತದ ಸಂದೇಶ ಎಂದು ಅವರು ಹೇಳಿದರು.

ಯುವಜನರಿಗೆ ಸಂದೇಶ
ಮಕ್ಕಳನ್ನು, ಯುವಜನರನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಊಟ ಮಾಡುವಾಗ ಗುರುಗಳ ಮಹಿಮೆಯನ್ನು ಚಿಂತನೆ ಮಾಡಬೇಕು. ಉಪಕಾರಗಳನ್ನು ಸ್ಮರಿಸಿಕೊಳ್ಳಬೇಕು. ಸಂಸ್ಕಾರ ಎಂಬುದು ಮನೆಯಿಂದಲೇ ಬರಬೇಕು. ಈ ನಿಟ್ಟಿನಲ್ಲಿ ತಂದೆ- ತಾಯಿಯರು ಉತ್ತಮ ಮಕ್ಕಳನ್ನು ಸಮಾಜಕ್ಕೆ ಕೊಡುವುದೂ ಕೂಡ ದೇವರ ಪೂಜೆಗೆ ಸಮನಾದದ್ದು ಎಂದರು.
ಏಳುವಾಗ, ಮಲಗುವಾಗ ಉತ್ತಮ ಚಿಂತನೆಗಳು, ಸದ್ವಿಚಾರಗಳನ್ನೇ ಮಾಡಬೇಕು. (ಆ ಕ್ಷಣದಲ್ಲಾದರೂ ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗಳಿಂದ ಕೊಂಚ ದೂರ ಇರಿ). ನಿತ್ಯವೂ ಸೇವೆ ಮತ್ತು ಪರಹಿತ ಚಿಂತನೆ ಮಾಡೋಣ. ಇವೆಲ್ಲ ಸಂದೇಶಗಳೂ ಭಾಗವತದಲ್ಲಿ ಇದೆ ಎಂದು ಅವರು ನುಡಿದರು.
ನಾವು ಯಾವುದೇ ತೀರ್ಥ ಕ್ಷೇತ್ರಗಳಿಗೆ ಹೋದಾಗ ಕಾಮಾದಿ ಬಯಕೆಗಳನ್ನು ಬಿಡಬೇಕು. ಕ್ಷೇತ್ರ ದರ್ಶನ ಎಂದರೆ ಅದು ಮೋಜು-ಪ್ರವಾಸ ಮತ್ತು ವಿಹಾರ ತಾಣವಲ್ಲ. ಇವುಗಳು ಸಾಧನೆಗೆ ಪ್ರೇರಕ ಪೀಠಗಳು. ಮನೆಯಲ್ಲೇ ಇದ್ದು ಭಕ್ತಿಯಿಂದ ದೇವರ ಸ್ಮರಣೆ ಮಾಡಿದರೂ ಅದು ತೀರ್ಥಕ್ಷೇತ್ರಗಳಿಗೆ ಯಾತ್ರೆ ಮಾಡಿದಷ್ಟು ಪುಣ್ಯ ನೀಡುತ್ತದೆ. ರಾಮಾಯಣ, ಮಹಾಭಾರತ ಮತ್ತು ಭಾಗವತಗಳು ಕೇವಲ ಪೂಜೆ ಮಾಡುವ ಗ್ರಂಥಗಳಲ್ಲ. ನಮ್ಮ ಜೀವನವನ್ನು ಸಾರ್ಥಕ ಮಾಡಲು ಇರುವ ಮಹಾದರ್ಶನಗಳು. ಆಚಾರ್ಯ ಶ್ರೀ ಮಧ್ವರು ಇವುಗಳಿಗೆ ಸಮರ್ಥವಾದ ಟಿಪ್ಪಣಿ ಮತ್ತು ಭಾಷ್ಯಗಳನ್ನು ಬರೆದಿದ್ಧಾರೆ. ಅವರು ತೋರಿದ ಮಾರ್ಗದಲ್ಲಿ ಸಾಗೋಣ ಎಂದರು.
ಪಂಡಿತರಾದ ಅನಿರುದ್ಧಾಚಾರ್ಯ ಪಾಂಡುರಂಗಿ, ಬಾದರಾಯಣಾಚಾರ್ಯ, ವ್ಯಾಸತೀರ್ಥಾಚಾರ್ಯ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post