ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ರಾಜ್ಯೋತ್ಸವ ಕೇವಲ ಘೋಷಣೆ-ಭಾಷಣಗಳಿಗೆ ಸೀಮಿತಗೊಳ್ಳದೇ ಕನ್ನಡ ಜಾಗೃತಿಯ ವೇದಿಕೆಯಾಗಬೇಕು. ಯಾವುದೇ ಜಾತಿ ಮತ, ಭಾಷೆ-ಬಣ್ಣಗಳ ಹಂಗಿಲ್ಲದೆ ಆಚರಿಸುವ ಹಬ್ಬವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬಣ್ಣಿಸಿದರು.
ಅವರು ಇಂದು ನಗರದ ನೆಹರು ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಯೋಜಿಸಿದ್ದ ಕನ್ನಡ ರಾಜ್ಯೋತ್ಸವ #Kannada Rajyothsava ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಲ್ಲೆ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಹಲವಾರು ಜನಪರ ಚಳುವಳಿಗಳನ್ನು ಹುಟ್ಟು ಹಾಕಿದ ಈ ನೆಲ, ಸಾಮಾಜಿಕವಾಗಿ, ಶ್ರೀಮಂತವಾಗಿದೆ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಅನುಭವ ಮಂಟಪದ ಅಲ್ಲಮಪ್ರಭು ಬಳ್ಳಿಗಾವಿಯವರು. 12ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿ ಉಡುತಡಿಯವರು. ಶರಣ ಚಿಂತನೆಗಳ ನೆಲೆವೀಡು ಎಂದೇ ಖ್ಯಾತವಾದ ಕಲ್ಯಾಣ ಚಳುವಳಿಯ ಮೇರು ವ್ಯಕ್ತಿತ್ವಗಳು ಶಿವಮೊಗ್ಗ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ . ಕನ್ನಡ ಸಾರಸ್ವತ ಲೋಕಕ್ಕೆ ಜಿ.ಎಸ್. ಶಿವರುದ್ರಪ್ಪರವರಂತಹ ರಾಷ್ಟ್ರಕವಿಯನ್ನು ಕೊಟ್ಟ ಹಿರಿಮೆ ಅಷ್ಟೇ ಅಲ್ಲ ಕುವೆಂಪು ಮತ್ತು ಯು.ಆರ್. ಅನಂತಮೂರ್ತಿ ಅವರಂತಹ ಇಬ್ಬರು ಜ್ಞಾನಪೀಠ ಪುರಸ್ಕೃತರನ್ನು ನಾಡಿಗೆ ಮೂರುಜನ ಮುಖ್ಯಮಂತ್ರಿಗಳನ್ನು ಈ ನಾಡಿಗೆ ನೀಡಿದ ಹಿರಿಮೆ ಶಿವಮೊಗ್ಗ ಜಿಲ್ಲೆಯದ್ದು. ಅಲ್ಲದೇ ನಾ.ಡಿಸೋಜ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕೊಂಡಾಡಿದರು.

ಕನ್ನಡ ಭಾಷೆ ಶ್ರೀಮಂತ ಸಾಹಿತ್ಯ ಹೊಂದಿದ್ದು, 08 ಜನ ಸಾಹಿತ್ಯ ಪರಿಚಾರಕರು, ಸಾಹಿತ್ಯದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರಕ್ಕೆ ಬಾಜನರಾಗಿರುವುದು ಹರ್ಷದ ಸಂಗತಿಯಾಗಿದೆ. ಇಡೀ ದೇಶದಲ್ಲೇ 2ನೇ ಅತಿಹೆಚ್ಚು ಪ್ರಶಸ್ತಿಯನ್ನು ಪಡೆದ ಭಾಷೆ ಕನ್ನಡ ಎಂದರಲ್ಲದೆಪ್ರಸ್ತುತ ಸಂದರ್ಭದಲ್ಲಿ ನಾವು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ, ಸಾಹಿತ್ಯಾತ್ಮಕವಾಗಿ, ಆಡಳಿತಾತ್ಮಕವಾಗಿ ಮತ್ತಿತರ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ನಾಡು-ನುಡಿಯ ಉಳಿವಿಗಾಗಿ ತೊಡಗಿಸಿಕೊಳ್ಳೋಣ. ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲೀಷ್ ಭಾಷಾಜ್ಞಾನ ಅವಶ್ಯಕವಾಗಿದ್ದರೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಶಿಕ್ಷಣ ನೀತಿಯ ಮಾತೃಭಾಷೆಗೆ ಹೆಚ್ಚಿನ ಒತ್ತನ್ನು ನೀಡಿದೆ. ಈ ರಾಜ್ಯೋತ್ಸವದ ಭಾಷಾಭಿಮಾನ ನವೆಂಬರ್‍ಮಾಹೆಗೆ ಸೀಮಿತವಾದರೆ ಸಾಲದು. ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು. ಕನ್ನಡ ನಮ್ಮ ಉಸಿರು, ಜೀವನಾಡಿಯಾಗಬೇಕು. ಆಂತರಿಕವಾಗಿ ಕನ್ನಡ ಡಿಂಡಿಮ ಮೊಳಗಬೇಕು.
ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮ ನಾಡು ಎಲ್ಲಾ ಜಾತಿ ಧರ್ಮಗಳ ಜನರು ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಅವರು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಇದಕ್ಕೂ ಮುಂಚೆ ನಗರದ ಸೈನ್ಸ್ ಮೈದಾನದಿಂದ ನೆಹರೂ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್, ಭಾರತ ಸೇವಾದಳದ ವೈ.ಹೆಚ್. ನಾಗರಾಜ್ ಮುಂತಾದವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post