ಕಲ್ಪ ಮೀಡಿಯಾ ಹೌಸ್ | ಮೈಸೂರು |
ದ್ವೈತ ಸಿದ್ದಾಂತ ಪ್ರತಿಪಾದಕ ಶ್ರೀಮನ್ ಮಧ್ವಾಚಾರ್ಯರು ಬದರಿಕಾಶ್ರಮವನ್ನು ಪ್ರವೇಶಿಸಿದ ದಿನದ ಸ್ಮರಣೆಗಾಗಿ ಮಧ್ವ ನವಮಿ ಉತ್ಸವ ನಗರದ ವಿವಿಧ ಮಠ, ಮಂದಿರಗಳಲ್ಲಿ ಭಾನುವಾರ ನೆರವೇರಿತು.
ಚಾಮರಾಜ ಜೋಡಿ ರಸ್ತೆಯ ವೆಂಕಟಾಚಲ ಧಾಮದ ಶ್ರೀ ಶ್ರೀನಿವಾಸದೇವರ ಮತ್ತು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಬೆಳಗಿನಿಂದಲೇ ದೇವರಿಗೆ ವಿಶೇಷ ಕಲಶ ಪೂಜೆ, ಅಭಿಷೇಕ, ಪವಮಾನ ಹೋಮ, ಮಧ್ವಾಚಾರ್ಯರ ಪ್ರತಿಮೆ ಮತ್ತು ಗ್ರಂಥಗಳ ರಥೋತ್ಸವ, ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ ನೆರವೇರಿತು. ವಿದ್ವಾನ್ ಕೃಷ್ಣಕುಮಾರ ಆಚಾರ್ಯರ ನೇತೃತ್ವದಲ್ಲಿ ಪವಮಾನ ಹೋಮದ ಪೂರ್ಣಾಹುತಿ ನಡೆಯಿತು. ಪ್ರಧಾನ ಅರ್ಚಕ ರಾಘವೇಂದ್ರಾಚಾರ್ಯರು ಪೂಜಾ ವಿಧಿಗಳನ್ನು ನೆರವೇರಿಸಿದರು.
ಅಗ್ರಹಾರ ರಸ್ತೆಯ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದಲ್ಲಿ ಭಾನುವಾರ ಬೆಳಗ್ಗೆ ಶ್ರೀ ಮಧ್ವಾಚಾರ್ಯರ ಪ್ರತಿಮೆಗೆ ವಾಯುಸ್ತುತಿ ಪುನಶ್ಚರಣ ಸಹಿತ ಮಧು ಅಭಿಷೇಕ ಸಂಪನ್ನಗೊಂಡಿತು. ಪಂಡಿತರಿಂದ ಉಪನ್ಯಾಸ, ಮಧ್ವರ ಗ್ರಂಥಗಳ ಪಲ್ಲಕ್ಕಿ ಉತ್ಸವ, ವಿಶೇಷ ಪೂಜೆ, ಶ್ರೀ ಧನ್ವಂತರಿ ದೇವರಿಗೆ ಮತ್ತು ಶ್ರೀ ಸತ್ಯಸಂಕಲ್ಪ, ಶ್ರೀ ಸತ್ಯ ಸಂತುಷ್ಟ ತೀರ್ಥರ ವೃಂದಾವನಗಳಿಗೆ ಅಭಿಷೇಕ ನೆರವೇರಿತು. ಪಂಡಿತರಾದ ಗೋವಿಂದಾಚಾರ್ಯ, ಅನಿರುದ್ಧಾಚಾರ್ಯ, ಭಾರ್ಗವಾಚಾರ್ಯ ಪಾಂಡುರಂಗಿ ಅವರು ಧಾರ್ಮಿಕ ವಿಧಿ ಮತ್ತು ಪಾರಾಯಣದ ನೇತೃತ್ವ ವಹಿಸಿದ್ದರು. ಸಾವಿರಾರು ಜನರಿಗೆ ತೀರ್ಥ ಪ್ರಸಾದ ವಿನಿಯೋಗವಾಯಿತು.
Also read: ಫೆ.22ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗಕ್ಕೆ: ಸಂಸದ ರಾಘವೇಂದ್ರ
ಸೋಸಲೆ ವ್ಯಾಸರಾಜರ ಮಠದಲ್ಲಿ:
ಕೃಷ್ಣಮೂರ್ತಿ ಪುರಂನ ಸೋಸಲೆ ವ್ಯಾಸರಾಜರ ಮಠದಲ್ಲಿ ವಿದ್ಯಾಪೀಠದ ವಿದ್ಯಾರ್ಥಿಗಳಾದ ಸರ್ವಜ್ಞ ಮತ್ತು ಶ್ರೀಹರಿ ಅವರು ಭೇದ್ದೋಜ್ಜೀವನ ಗ್ರಂಥದ ಅನುವಾದ ಮತ್ತು ಪರೀಕ್ಷೆ ನೀಡಿದರು. ವಾಕ್ಯಾರ್ಥ ಸಭೆಯಲ್ಲಿ ಗೋಪಾಲ ಮಾಳಗಿ ವಿಷಯ ಮಂಡಿಸಿದರು.
ನಂತರ ವಿದ್ವಾಂಸರಾದ ಶ್ರೀನಿವಾಸ ಕೊರ್ಲಹಳ್ಳಿ (ಮಧ್ವಾಚಾರ್ಯರ ಬಾಲ್ಯ), ಅಖಿಲೇಶ ಆಚಾರ್ಯ (ಮಧ್ವರು ಸಂದರ್ಶಿಸಿದ ತೀರ್ಥಕ್ಷೇತ್ರಗಳು), ಕೃಷ್ಣಾಚಾರ್ಯ ನಾಗಸಂಪಿಗೆ (ಸುಮಧ್ವವಿಜಯ ಪಾರಾಯಣ ಮಹಿಮೆ), ಬಿದರಹಳ್ಳಿ ಕೃಷ್ಣಾಚಾರ್ಯ (ಮಧ್ವರ ಗ್ರಂಥಗಳಲ್ಲಿ ನಿತ್ಯಾನುಷ್ಠಾನ ನಿರ್ಣಯ) ಮತ್ತು ಶ್ರೀನಿವಾಸಮೂರ್ತಿ ಆಚಾರ್ಯ (ತತ್ವವಾದದ ವ್ಯವಹಾರಿಕ ದೃಷ್ಟಿ) ಕುರಿತು ವಿಶೇಷ ಪ್ರವಚನ ನೀಡಿದರು. ವಿದ್ಯಾರ್ಥಿಗಳಿಂದ ಸಮಗ್ರ ಸುಮಧ್ವವಿಜಯ ಪಾರಾಯಣ, ವಾಯುಸ್ತುತಿ ಪುನಶ್ಚರಣ ಗಮನ ಸೆಳೆಯಿತು.
ಮಠಾಧೀಶರಾದ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂತರ ಸಂಸ್ಥಾನ ಪೂಜೆ ನೆರವೇರಿತು.ಸಂಜೆ ವಿದ್ವಾನ್ ಸುಮುಖ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಗೋಷ್ಠಿ ರಂಜಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post