ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೂತನ ಕ್ಯಾಲೆಂಡರ್ ವರ್ಷಾರಂಭದ ಅಂಗವಾಗಿ ಜ.1ರ ಸೋಮವಾರ ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಾಡು ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಬೆಳಗ್ಗೆ 4 ಗಂಟೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಶ್ರೀ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ, ಶ್ರೀರಂಗಕ್ಷೇತ್ರ ಮಧುರೈ ಕ್ಷೇತ್ರಗಳಿಂದ ತರಿಸಿದ ವಿಶೇಷ ತೋಮಾಲೆ, ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮರ್ಚನೆ, ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮೀ ದೇವರಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ಹಾಗೂ ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮತ್ತು ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ ಕಾರ್ಯಕ್ರಮ ನಡೆಯಲಿದೆ.

ಉದ್ದೇಶ:
ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ದೇವಾಲಯದ ಸಂಸ್ಥಾಪಕರಾದ ಪರಮ ಪೂಜ್ಯ ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಮತ್ತು ನೇತೃತ್ವದಲ್ಲಿ ಹಾಗೂ ಎಲ್ಲಾ ಭಕ್ತಾದಿಗಳ ನೆರವಿನಿಂದ ಮತ್ತು ಸಂಪೂರ್ಣ ಸಹಕಾರದಿಂದ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ತಿಳಿಸಿದ್ದಾರೆ.











Discussion about this post