ಕಲ್ಪ ಮೀಡಿಯಾ ಹೌಸ್ | ಮೈಸೂರು |
ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ #VedavyasaJayanthi ಮತ್ತು ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೋತ್ಸವದ ಅಂಗವಾಗಿ ಉಡುಪಿ #Udupi ಶ್ರೀ ಭಂಡಾರಕೇರಿ ಮಠ ನಗರದ ಚಾಮರಾಜ ಜೋಡಿ ರಸ್ತೆಯ ವೆಂಕಟಾಚಲ ಧಾಮ, ಶಾರದಾವಿಲಾಸ ಶತಮಾನೋತ್ಸವ ಭವನ ಮತ್ತು ವಿಠಲಧಾಮಗಳಲ್ಲಿ ಏ. 29ರಿಂದ ಮೇ 4ರ ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿದೆ.
29ರ ಬೆಳಗ್ಗೆ 9ರಿಂದ ದಿನಪೂರ್ಣ ಶಾಸ್ತ್ರ ನಿರ್ಣಯ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಹಿರಿಯ ವಿದ್ವಾಂಸ ಪಿ.ಎಸ್. ಶೇಷಗಿರಿ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿಯಲ್ಲಿ ಹತ್ತಾರು ವಿದ್ವಾಂಸರು ಭಾಗವಹಿಸಿ ವಿದ್ವತ್ಪೂರ್ಣ ವಿಷಯ ಮಂಡಿಸಲಿದ್ದಾರೆ. ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. #BandarakeriMutt
30ರ ಸಂಜೆ 5ಕ್ಕೆ ವೆಂಕಟಾಚಲ ಧಾಮದಲ್ಲಿ ವೈಭವೋಪೇತ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ನಗರದ ಬಹುಶ್ರುತ ವಿದ್ವಾಂಸರು ಶ್ರೀನಿವಾಸ- ಪದ್ಮಾವತಿ ದೇವಿಯವರ ಕಲ್ಯಾಣ ಮಹೋತ್ಸವ ನೆರವೇರಿಸಲಿದ್ದಾರೆ.
ರಾಮಾಯಣ ಗೋಷ್ಠಿ
ಮೇ 1ರಂದು ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ಶಾರದಾವಿಲಾಸ ಕಾಲೇಜು ಸಭಾಂಗಣದಲ್ಲಿ ವಿವಿಧ ವಿದ್ವಾಂಸರಿಂದ ರಾಮಾಯಣ ಗೋಷ್ಠಿ ನಡೆಯಲಿದೆ. ಹಿರಿಯ ವಿದ್ವಾಂಸ ಸಿ.ಎಚ್. ಶ್ರೀನಿವಾಸಮೂರ್ತಿ ಆಚಾರ್ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ವಿದ್ಯೇಶತೀರ್ಥರು ಸಮನ್ವಯ ಆಶೀರ್ವಚನ ನೀಡಲಿದ್ದಾರೆ.
ಆರಾಧನೆ
2ರಂದು ವೆಂಕಟಾಚಲ ಧಾಮದಲ್ಲಿ #VenkatachalaDhama ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಮಹಾಜ್ಞಾನಿ ಶ್ರೀ ವಿದ್ಯಾಮಾನ್ಯತೀರ್ಥರ ಮಧ್ಯಾರಾಧನೆ ಮಹೋತ್ಸವ ಯೋಜನೆಗೊಂಡಿದೆ. ಸಂಜೆ 4ಕ್ಕೆ ಕೃಷ್ಣಮೂರ್ತಿಪುರಂನ ಸೋಸಲೆ #Sosale ವ್ಯಾಸರಾಜರ ಮಠದಿಂದ #VyasarajaMutt ಶಾರದಾ ವಿಲಾಸ ಕಾಲೇಜಿನವರೆಗೆ ಭಗವಾನ್ ವೇದವ್ಯಾಸರ ಪ್ರತಿಮೆ ಸಹಿತ ಶೋಭಾಯಾತ್ರೆ ಸಂಪನ್ನಗೊಳ್ಳಲಿದೆ. ಸುಮಂಗಲಿಯರು, ವಿದ್ವಾಂಸರು ಮತ್ತು ನಾಗರಿಕರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಕಾಲೇಜಿನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವಿದ್ದು, ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಶ್ರೀ ವಿದ್ಯೇಶತೀರ್ಥರು ಸಾನ್ನಿಧ್ಯ ವಹಿಸಿ 5 ಜನ ಗಣ್ಯ ಸಾಧಕರಿಗೆ ಭಂಡಾರಕೇರಿ ಮಠದ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ನಾಡಿನ ಹಿರಿಯ ವಿದ್ವಾಂಸರಾದ ಕೇಶವ ಬಾಯರಿ, ಸಗ್ರಿ ರಾಘವೇಂದ್ರ, ಯುವ ಪಂಡಿತರಾದ ಗಣಪತಿ ಭಟ್, ಸತ್ಯಪ್ರಮೋದ ಮತ್ತು ಟಿಟಿಡಿ ಬೋರ್ಡ್ ಮಾಜಿ ಸದಸ್ಯ ಮತ್ತು ಉದ್ಯಮಿ ಡಿ.ಪಿ. ಅನಂತ ಅವರಿಗೆ ವಿವಿಧ ಪ್ರಶಸ್ತಿ ಪ್ರದಾನವಿದೆ.
ಇದೇ ಸಂದರ್ಭ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ರಚಿಸಿರುವ 300 ಪದ್ಯಗಳ ಸಂಕಲನ `ಕೃತಿ ಮಂಜರೀ’ ಲೋಕಾರ್ಪಣೆಗೊಳ್ಳಲಿದೆ.
ಧರ್ಮಶಾಸ್ತ್ರ ಗೋಷ್ಠಿ
3ರಂದು ಜೆ.ಪಿ. ನಗರದ ವಿಠಲಧಾಮದಲ್ಲಿ ಬೆಳಗ್ಗೆ 9.30ರಿಂದ ಧರ್ಮಶಾಸ್ತ್ರ ವಿನೋದ ಗೋಷ್ಠಿ ಆಯೋಜನೆಗೊಂಡಿದೆ. ಸಂಜೆ 5.30ಕ್ಕೆ ಶಾರದಾವಿಲಾಸ ಕಾಲೇಜಿನ ಸಭಾಂಗಣದಲ್ಲಿ `ಪುರಾಣಗಳಲ್ಲಿ ಕೃಷ್ಣನ ಪಾತ್ರಚಿಂತನೆ’ ಕುರಿತು ಹಿರಿಯ ಪಂಡಿತ ವಿ. ಆನಂದತೀರ್ಥ ನಾಗಸಂಪಿಗೆ ಅವರಿಂದ ಪ್ರವಚನವಿದೆ. ನಂತರ ಉದಯೋನ್ಮುಖ ಕಲಾವಿದೆಯರಾದ ಸುವಿದ್ಯಾ ಮತ್ತು ಶ್ರೀಲಕ್ಷ್ಮೀ ಯದುನಂದನ ಅವರಿಂದ ಭರತನಾಟ್ಯ #Bharatanatyam ಪ್ರಸ್ತುತಿ (ವಿದ್ಯೇಶ ವಿಠಲಾಂಕಿತ ಕೃತಿ ಆಧಾರಿತ) ಇದೆ.
4ರಂದು ವೆಂಕಟಾಚಲ ಧಾಮದಲ್ಲಿ ಬೆಳಗ್ಗೆ 9ಕ್ಕೆ ಶ್ರೀ ನರಸಿಂಹ ಮಂತ್ರಹೋಮ, ಸಂಜೆ ಶಾರದಾವಿಲಾಸ ಕಾಲೇಜಿನ ಸಭಾಂಗಣದಲ್ಲಿ ಬಾಲ ಕಲಾವಿದರಿಂದ ಗಾಯನ, ಪಂಡಿತ ವಿಜಯೀಂದ್ರಾಚಾರ್ ಬೆಮ್ಮತ್ತಿ ಅವರ ಉಪನ್ಯಾಸ ಮತ್ತು ಶ್ರೀ ವಿದ್ಯೇಶತೀರ್ಥರ ಅನುಗ್ರಹ ಸಂದೇಶವಿದೆ.
ಪ್ರವಚನ- ಗಾಯನ
ಮೈಸೂರು #Mysore ನಗರದ ಚಾಮರಾಜ ಜೋಡಿ ರಸ್ತೆಯ ವೆಂಕಟಾಚಲ ಧಾಮದಲ್ಲಿ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ ಮತ್ತು ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೋತ್ಸವದ ಅಂಗವಾಗಿ ಉಡುಪಿ ಶ್ರೀ ಭಂಡಾರಕೇರಿ ಮಠ #BhandarakeriMutt ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮ ಸರಣಿಯಲ್ಲಿ ಏ. 28ರಿಂದ ಮೇ 1ರ ವರೆಗೆ ಗುರುವಿಜಯ ಗೀತೆ- ಗಾಯನ ಮತ್ತು ಪ್ರವಚನ ಆಯೋಜಿಸಲಾಗಿದೆ. ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿರಚಿತ ಗೀತೆಗಳನ್ನು ಗಾಯಕಿ ದೀಪಿಕಾ ಪಾಂಡುರಂಗಿ ಹಾಡಲಿದ್ದಾರೆ. ಈ ಗೀತೆಗಳ ಬಗ್ಗೆ ಶ್ರೀ ವಿದ್ಯೇಶತೀರ್ಥರು ಸ್ವಾಮೀಜಿ ಪ್ರವಚನ- ಮತ್ತು ವ್ಯಾಖ್ಯಾನ ನೀಡಲಿದ್ದಾರೆ. ಆಸಕ್ತರು ಆಗಮಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post