ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೂರಾರು ಆದರ್ಶ, ಮೌಲ್ಯ ಮತ್ತು ಜೀವನದ ಸಾರ್ಥಕತೆಗೆ ಬೇಕಾದ ನೀತಿಗಳನ್ನು ಒಳಗೊಂಡ ಕಾರಣಕ್ಕಾಗಿ ರಾಮಾಯಣ ವಿಶ್ವಮಾನ್ಯ ಗ್ರಂಥವಾಗಿದೆ ಎಂದು ಭಂಡಾರಕೇರಿ ಮಠಾಧೀಶ ಶ್ರೀವಿದ್ಯೇಶತೀರ್ಥ ಸ್ವಾಮೀಜಿ ನುಡಿದರು.
ಅವರು ಶಾರದಾವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಸೋಮವಾರ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೆ ಅಂಗವಾಗಿ ಮಾಧ್ವ ರಾದ್ಧಾಂತ ಸಂವರ್ಧಕ ಸಭಾ ಮತ್ತು ಶ್ರೀಮಠ ದಿನಪೂರ್ತಿ ಹಮ್ಮಿಕೊಂಡಿದ್ದ ರಾಮಾಯಣ ವಿಚಾರಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ವಾಲ್ಮೀಕಿ ವಿರಚಿತ ರಾಮಾಯಣ ಗ್ರಂಥಕ್ಕೆ ಸರಿಸಾಟಿಯಾದ ಕೃತಿ ಲೋಕದಲ್ಲಿ ಯಾವುದೂ ಇಲ್ಲ. ಇದು ಎಲ್ಲ ದೇಶ- ಕಾಲಕ್ಕೆ, ಎಲ್ಲ ವಯೋಮಾನದವರಿಗೂ ಅನ್ವಯವಾಗುವ ಮಹೋನ್ನತ ಗ್ರಂಥವಾಗಿದೆ. ಇದರ ಮೌಲ್ಯ ಅರಿತು, ಅನುಸರಿಸಿ ಬದುಕುವ ಮೂಲಕ ಸಾರ್ಥಕತೆಯನ್ನು ಕಾಣಬೇಕು ಎಂದು ಅವರು ಕಿವಿಮಾತು ಹೇಳಿದರು.
ಆಗಾಗ್ಗೆ ಎದುರಾಗುವ ಬೇಸರ, ನಿರುತ್ಸಾಹಗಳನ್ನು ದಮನ ಮಾಡಿ, ಚೈತನ್ಯ ಮತ್ತು ಜೀವನೋತ್ಸಾಹ ತುಂಬಲು ರಾಮಯಾಣ ಗ್ರಂಥ ಪ್ರೇರಕ ಮತ್ತು ಪೂರಕವಾಗಿದೆ. ಇಂದಿನ ಮಕ್ಕಳು ಮತ್ತು ಯುವ ಪೀಳಿಗೆಗೆ ನಾವು ರಾಮಾಯಣದ ಮಹತ್ವ ತಿಳಿಸುವ ಅಗತ್ಯತೆ ಇದೆ ಎಂದು ಹೇಳಿದರು.
ವಿದ್ವಾಂಸರಾದ ವಾದಿರಾಜಾಚಾರ್ಯ, ಕೃಷ್ಣಾಚಾರ್ಯ ಬಿದರಹಳ್ಳಿ, ನಾಗೇಂದ್ರ ಆಚಾರ್ಯ, ಅನಿರುದ್ಧಾಚಾರ್ಯ, ವೆಂಕಟೇಶ ಕುಲಕರ್ಣಿ, ಬಾದರಾಯಣಾಚಾರ್ಯ, ವೇಣುಗೋಪಾಲಾಚಾರ್ಯ, ಕಾಂತೇಶ ಕದರಮಂಡಲಗಿ, ಶ್ರೀನಿಧಿ ಪ್ಯಾಟಿ ಇತರರು ಚರ್ಚಾರೂಪದ ಪ್ರಬಂಧ ಮಂಡಿಸಿದರು. ಹಿರಿಯ ಪಂಡಿತ ರಾಮವಿಠಲಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post