ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದೇಣಿಗೆ ಕೊಟ್ಟಿರುತ್ತಾರೆ. ಆದರೆ ಬಹಿರಂಗವಾಗಿ, ಸಾರ್ವಜನಿಕವಾಗಿ ಅವರು ಹೇಳಿಕೆ ನೀಡುತ್ತಿಲ್ಲ. ಸರ್ಕಾರ ಸುಗಮವಾಗಿ ಆಡಳಿತ ನಡೆಸುತ್ತಿರುವುದಕ್ಕೆ ಅವರಿಗೆ ಯಾವುದೇ ರೀತಿ ಮಾತನಾಡಲು ಆಗದ್ದರಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಚಾಮುಂಡೇಶ್ವರಿ ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸುವ ಲಿಫ್ಟ್ ಅನ್ನು ರೈಲ್ವೆ ಇಲಾಖೆ ದೇವಸ್ಥಾನಕ್ಕೆ ಹಸ್ತಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು, ಸರ್ಕಾರ ಸುಗಮವಾಗಿ, ದಕ್ಷವಾಗಿ ಹೋಗುತ್ತಿದೆ. ಮಾತನಾಡಲು ಏನೂ ಉಳಿದಿಲ್ಲ. ಆದ್ದರಿಂದ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇವರು ಅನಾವಶ್ಯಕ ಲೆಕ್ಕ ಕೇಳುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಒಂದೇ ಒಂದು ಪೈಸೆ ಸಹ ದುರುಪಯೋಗವಾಗುವುದಿಲ್ಲ. ಪ್ರತಿಯೊಂದು ಪೈಸೆಗೂ ಲೆಕ್ಕ ಇಡಲಾಗಿದೆ. ದೇಣಿಗೆ ಸಂಗ್ರಹಿಸಿದ ಮನೆಯ ಸಂಖ್ಯೆ ಹಾಗೂ ಅವರ ಸಹಿ ಪಡೆದು, ಪ್ಯಾನ್ ಸಂಖ್ಯೆಯನ್ನು ನಮೂದಿಸಲಾಗುತ್ತಿದೆ. ಜೊತೆಗೆ ರಶೀದಿಯನ್ನು ಸಹ ಕೊಡಲಾಗುತ್ತಿದೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಜನರು ಸ್ವಯಂಪ್ರೇರಿತರಾಗಿ ದೇಣಿಗೆ ಕೊಡುತ್ತಿದ್ದಾರೆ ಎಂದು ಸಚಿವರು ವಿವರಿಸಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಚಾಮುಂಡೇಶ್ವರಿ ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸಲು ಲಿಫ್ಟ್ ಅವಶ್ಯಕತೆ ಇದೆ. ಬಹಳ ವರ್ಷಗಳಿಂದ ಶಿಥಿಲಾವಸ್ಥೆಯಿಂದಿತ್ತು. ಹೀಗಾಗಿ ಇದರ ದುರಸ್ತಿ ಇಲ್ಲವೇ ಹೊಸ ಲಿಫ್ಟ್ ಬೇಕೆಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ದೀಕ್ಷಿತ್ ಅವರು ಮನವಿ ಮಾಡುತ್ತಲೇ ಬಂದಿದ್ದಾರೆ. ಇದಕ್ಕಾಗಿ ೫.೫೦ ಲಕ್ಷ ರೂ. ಅನುದಾನ ಬೇಕಿತ್ತು. ಉಸ್ತುವಾರಿ ಸಚಿವರು ಇದರ ಬಗ್ಗೆ ಆಸಕ್ತಿ ತೋರಿ ಅನುದಾನ ಕೊಡಿಸಿದ್ದು, ಇದೀಗ ಲಿಫ್ಟ್ ದೇವಸ್ಥಾನದ ಬಳಕೆಗೆ ಲಭ್ಯವಾಗಿದೆ ಎಂದು ಹೇಳಿದರು.
ಬೆಟ್ಟದ ಮಳಿಗೆಗಳಿಗೆ ಸಂಬಂಧಪಟ್ಟಂತೆ ಉಸ್ತುವಾರಿ ಸಚಿವ ಸೋಮಶೇಖರ್ ಅವರು ಸ್ಥಳಾಂತರ ಹಾಗೂ ಮೂಲ ಸೌಕರ್ಯಕ್ಕೆ ಸಂಬಂಧಪಟ್ಟಂತೆ ಸೂಕ್ತ ನಿರ್ದೇಶನ ನೀಡುತ್ತಿದ್ದಾರೆ ಎಂದು ಸಂಸದರಾದ ಪ್ರತಾಪ್ ಸಿಂಹ ಹೇಳಿದರು.
ರೈಲ್ವೆ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post