ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಾತೃಭಾಷೆಯ ಮಹತ್ವವನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಾಡು ನುಡಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಹೇಳಿದರು.
ಅವರು ಜೆಪಿ ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ” 69ನೇ ಕನ್ನಡ ಮಹೋತ್ಸವ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ್ದ ಕನ್ನಡ ನಾಡು ಕಾಲಕ್ರಮೇಣ ವಿವಿಧ ಭಾಷಾ ಪ್ರಭಾವಗಳಿಗೆ ಒಳಗಾಗಿ ಹಂಚಿಹೋಗಿತ್ತು. ಅನೇಕ ಹೋರಾಟಗಾರರ, ಸಾಹಿತಿಗಳ ಮತ್ತು ಕನ್ನಡ ಕಟ್ಟಾಳುಗಳ ಅವಿರತ ಪ್ರಯತ್ನದ ಫಲವಾಗಿ ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡಿತು ಎಂದರು.
ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ, ಪರಂಪರೆ, ಇತಿಹಾಸ ಮತ್ತು ರಾಜಮನೆತನಗಳ ಕೊಡುಗೆಯನ್ನು ಅರಿತುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಹಿರಿಯ ಪತ್ರಕರ್ತ ರಘುರಾಮ, ಮಾತನಾಡಿ ಕನ್ನಡ ಎಂಬುದು ಕೇವಲ ಲಿಪಿ, ಭಾಷೆ ಮಾತ್ರ ವಾಗದೆ ನಮ್ಮ ಸಮಗ್ರ ಬದುಕಿನ ವಿಕಸನದ ಸಾಂಸ್ಕೃತಿಕ ಬುನಾದಿಯಾಗಿದೆ ಎಂದರು.
Also read: ಚಿಕ್ಕಮಗಳೂರು | ಗೌರವ ಸನ್ಮಾನದೊಂದಿಗೆ ಪೊಲೀಸ್ ಶ್ವಾನ ‘ಪೃಥ್ವಿ’ ನಿವೃತ್ತಿ
ಶಿಕ್ಷಣ ಪಡೆಯುವ ಉದ್ದೇಶದಿಂದ ಭಾಷೆ ಯಾವುದಾದರೂ ನಮ್ಮ ನೆಲದ ನುಡಿಯಾದ ಕನ್ನಡದ ಬಗ್ಗೆ ಅಪಾರವಾದ ಕಾಳಜಿ ಮತ್ತು ಕಳಕಳಿಯನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದರು. ಪ್ರತಿನಿತ್ಯ ಒಂದು ಕನ್ನಡ ಪತ್ರಿಕೆಯನ್ನಾದರೂ ಮಕ್ಕಳು ಓದುವ ಮೂಲಕ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು.
ಶಾಲೆಗಳಲ್ಲಿ ಮಕ್ಕಳು ಚುಟುಕು ಕತೆ ಕವನ ಬರೆಯುವ ಹವ್ಯಾಸಕ್ಕೆ ಶಿಕ್ಷಕರು ಬೆಂಬಲ ಕೊಡಬೇಕು . ಗೋಡೆ ಪತ್ರಿಕೆ ಕವಿ ಗೋಷ್ಠಿ, ಪ್ರಬಂಧ ಸ್ಪರ್ಧೆ ಇತ್ಯಾದಿಗಳನ್ನು ಆಯೋಜಿಸುವ ಮೂಲಕ ಕನ್ನಡ ಸಂಭ್ರಮಾಚರಣೆಗೆ ವೇದಿಕೆ ಕಲ್ಪಿಸಿಕೊಡಬೇಕು
ಎಂದು ಸಲಹೆ ನೀಡಿದರು.
ನಾಡಿನ ಹೆಮ್ಮೆಯ ಕವಿಗಳಾದ ದರಾ. ಬೇಂದ್ರೆ , ಕುವೆಂಪು ಇತರರು ಸಾಹಿತ್ಯ ರಚಿಸಿದ ಸಂದರ್ಭವನ್ನು ಉಲ್ಲೇಖಿಸಿದ ಅವರು, ಕನ್ನಡ ಸಂಸ್ಕೃತಿಯನ್ನು ಮಕ್ಕಳಲ್ಲಿ ಬಿತ್ತುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದು ಹೇಳಿದರು.
ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸ್ಮಿತಾ, ಉಪ ಪ್ರಾಂಶುಪಾಲೆ ಸುನೀತಾ, ವಿದ್ಯಾರ್ಥಿ ನಾಯಕರಾದ ಹೃತಿಕ್ ತೇಜಸ್ ಸಾನ್ವಿ , ಶ್ರೇಯ ಮತ್ತು ಲೇಖನ ಹಾಜರಿದ್ದರು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post