ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕೋವಿಡ್ Covid ಸಾಂಕ್ರಾಮಿಕವು ಇಡೀ ಜಗತ್ತನ್ನು ಬಾಧಿಸುತ್ತಿರುವ ಸಮಯದಲ್ಲಿಯೂ ಸಹ, 2020-2021 ಮತ್ತು 2021-2022 ರ ಆರ್ಥಿಕ ವರ್ಷಗಳಲ್ಲಿ ಮೈಸೂರು ವಿಭಾಗದ ಸಾಧನೆಗಳು ಗಮನಾರ್ಹ ಎಂದು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ತಿಳಿಸಿದರು.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು Southwest Railway Mysore Division ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯ ಸಭಾಂಗಣದಲ್ಲಿ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಪ್ರಯಾಣಿಕರ ಸೇವೆಗಳ ಸುಧಾರಣೆಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ದಿನವಿಡೀ ಚರ್ಚೆ ನಡೆಸಲಾಯಿತು.
ವಿಭಾಗದಾದ್ಯಂತ ವಿವಿಧ ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಪ್ರಯಾಣಿಕರ ಸುರಕ್ಷತೆ ಮತ್ತು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಮತ್ತು ಮೈಸೂರು ವಿಭಾಗವು ರೈಲು ಬಳಕೆದಾರರಿಗೆ ಉತ್ತಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಒದಗಿಸಲು ಬದ್ಧವಾಗಿದೆ ಎಂದು ಹೇಳಿದರು.
ದಾವಣಗೆರೆ, ಹರಿಹರ ಮತ್ತು ಹಾವೇರಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವುದು, ಮೈಸೂರಿನಿಂದ ದಾದರ್, ಅಜ್ಮೀರ್ ಮತ್ತು ನಿಜಾಮುದ್ದಿನ್ ನಿಲ್ದಾಣಗಳಿಗೆ ಈಗ ಇರುವ ಸಾಪ್ತಾಹಿಕ ಮತ್ತು ವಾರಕ್ಕೆ ಎರಡು ದಿನದ ಸೇವೆಯಿಂದ ವಾರಕ್ಕೆ ನಾಲ್ಕು ದಿನಗಳಿಗೆ ರೈಲು ಸೇವೆಗಳ ಹೆಚ್ಚಳ ಮುಂತಾದ ವಿವಿಧ ವಿಷಯಗಳ ಕುರಿತು ಸಮಿತಿಯ ಸದಸ್ಯರು ಚರ್ಚಿಸಿದರು.
ಹಾಗೆಯೇ ಮೈಸೂರು-ಬೆಂಗಳೂರು ಮಧ್ಯೆ ಓಡಾಡುವ ಎಲ್ಲಾ ಸೂಪರ್ ಫಾಸ್ಟ್ ರೈಲುಗಳನ್ನು ಮತ್ತಷ್ಟು ವೇಗಗೊಳಿಸುವುದು, ಮೈಸೂರು ಮತ್ತು ಬೆಂಗಳೂರು ನಡುವೆ ಓಡುವ ಮಾಲ್ಗುಡಿ ಎಕ್ಸ್‌ಪ್ರೆಸ್‌ನಲ್ಲಿ ಹವಾ ನಿಯಂತ್ರಿತ ಬೋಗಿಗಳನ್ನು ಹೆಚ್ಚಿಸುವುದು, ಮೈಸೂರಿನಿಂದ ಹಾಸನ ಮತ್ತು ಮಂಗಳೂರು ಮೂಲಕ ಕರ್ನಾಟಕದ ಕರಾವಳಿ ಪ್ರದೇಶದೊಂದಿಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳು, ತಾಳಗುಪ್ಪ ಮತ್ತು ಶಿವಮೊಗ್ಗ ಟೌನ್ ನಿಂದ ಚೆನ್ನೈ ಮತ್ತು ಮೈಸೂರು ಕಡೆಗೆ ಕೋವಿಡ್ ಪೂರ್ವ ಅವಧಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎಲ್ಲಾ ರೈಲು ಸೇವೆಗಳನ್ನು ಪುನಃ ಪ್ರಾರಂಭಿಸುವುದು ಮತ್ತು ಶಿವಮೊಗ್ಗ ನಿಲ್ದಾಣದಿಂದ ಸಿಕಂದರಾಬಾದ್ ಮತ್ತು ಭುವನೇಶ್ವರದಂತಹ ವಿವಿಧ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಹೊಸ ರೈಲು ಸೇವೆಗಳನ್ನು ಪ್ರಾರಂಭಿಸುವುದು ಹಾಗು ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ಮಂಜೂರಾಗಿರುವ ಬೋಗಿ ಆರೈಕೆ ಕೇಂದ್ರದ ಕಾಮಗಾರಿಯನ್ನು ವೇಗಗೊಳಿಸುವುದು ಮುಂತಾದ ಹಲವಾರು ಕ್ರಮಗಳಿಗೆ ವಿನಂತಿಸಲಾಯಿತು.
ಶುಚಿತ್ವ, ವಿಶೇಷ ರೈಲುಗಳ ಪ್ರಾರಂಭ, ಬೋಗಿಗಳ ಹೆಚ್ಚಳ ಸೇರಿದಂತೆ ವಿಭಾಗವು ಕೈಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಸದಸ್ಯರುಗಳು ಮೈಸೂರು ಮತ್ತು ನಾಗನಹಳ್ಳಿ ನಿಲ್ದಾಣಗಳ ವಿಸ್ತರಣೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ಪಡೆಯಲು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.
ರಾಹುಲ್ ಅಗರ್ವಾಲ್ ರವರು ಎಲ್ಲಾ ಸಲಹೆಗಳನ್ನು ಪರಿಗಣಿಸಲಾಗುವುದು ಮತ್ತು ಮುಂದಿನ ಸಮಯಾವಧಿಯಲ್ಲಿ ಸೂಕ್ತವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಮಿತಿಯ ಸದಸ್ಯರಾದ, ಗುಂಡ್ಲುಪೇಟೆ ವಿಧಾನಸಭಾ ಸದಸ್ಯರಾದ ಸಿ.ಎಸ್. ನಿರಂಜನ್, ದಾವಣಗೆರೆ ಪ್ರಯಾಣಿಕರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರೋಹಿತ್ ಕುಮಾರ್ ಎಸ್. ಜೈನ್, ನಂಜನಗೂಡು ಕೈಗಾರಿಕಾ ಸಂಘದ ಕಾರ್ಯದರ್ಶಿಗಳಾದ ಬಿ.ಎಸ್. ಚಂದ್ರಶೇಖರ, ಎಂಎಂಇಸಿ ಸೈಡಿಂಗ್ ಲಾಜಿಸ್ಟಿಕ್ಸ್ ನ ಸಲಹೆಗಾರ ಶ್ರೀನಿವಾಸ್ ಮೂರ್ತಿ, ಮೈಸೂರು ವಾಣಿಜ್ಯ ಮಂಡಳಿಯ ಗೌರವ ಖಜಾಂಚಿಗಳಾದ ಮಹಾವೀರ್ ಚಂದ್ ಬನ್ಸಾಲಿ, ಹಾಸನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷರಾದ ಎಂ. ಧನಪಾಲ್, ಶಿವಮೊಗ್ಗ ಜಿಲ್ಲಾ ಮಂಡಳಿ ಮತ್ತು ವಾಣಿಜ್ಯ ಕೈಗಾರಿಕಾ ನಿರ್ದೇಶಕರಾದ ಎಸ್. ಎಸ್. ಉದಯ್ ಕುಮಾರ್, ಗೌರವಾನ್ವಿತ ಲೋಕಸಭಾ ಸದಸ್ಯರಿಂದ ನಾಮಾಂಕಿತರಾದ ಲಕ್ಷ್ಮೀಸಾಗರ ಚೆಲುವೇಗೌಡ ಮತ್ತು ಚಿನ್ನಯ್ಯ ರವರುಗಳು ಸಮಿತಿಯನ್ನು ಪ್ರತಿನಿಧಿಸಿದ್ದರು.
ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ದೇವಸಹಾಯಂ ಮತ್ತು ಇ. ವಿಜಯ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಮಂಜುನಾಥ ಕನಮಡಿ, ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರಾದ ಲೋಹಿತೇಶ್ವರ, ಹಿರಿಯ ವಿಭಾಗೀಯ ಅಭಿಯಂತರ (ಸಮನ್ವಯ) ರಾದ ಕೆ. ರವಿಚಂದ್ರನ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post