ಕಲ್ಪ ಮೀಡಿಯಾ ಹೌಸ್
ಮೈಸೂರು: ಪ್ರಸ್ತುತ ಕೋವಿಡ್ ಸಾಂಕ್ರಾಮಿಕ ಖಾಯಿಲೆಯ ಇಂತಹ ಸಂಕಷ್ಟ ಕಾಲದಲ್ಲೂ ಸಹ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಅಭೂತಪೂರ್ವ ಸಾಧನೆ ಮಾಡಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಅಗತ್ಯ ವಸ್ತುಗಳ ಸರಕು ಸಾಗಾಣೆಯು ಪ್ರಬಲ ಸವಾಲಾಗಿರುವ ಈ ಸಂದರ್ಭದಲ್ಲಿ ಭಾರತೀಯ ರೈಲ್ವೆ ಅವಶ್ಯ ವಸ್ತುಗಳನ್ನು ದೇಶ ನಾನಾಮೂಲೆಗಳಿಗೂ ತಲುಪಿಸುವ ಕಾರ್ಯಕ್ಕೆ ಬದ್ಧವಾಗಿದೆ ಎಂಬುದನ್ನು ಸಾಬೀತು ಮಾಡಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಸರಕು ಸಾಗಾಣಿಕೆಯಲ್ಲಿ ಶೇ. 1152 ರಷ್ಟು ಪ್ರಗತಿ ಸಾಗಣೆಯಲ್ಲಿ ಸಾಧಿಸಿದ್ದು, ಇದರಿಂದಾಗಿ ₹ 59.95 ಕೋಟಿ ಆದಾಯ ಗಳಿಸಿದೆ. 2021ರ ಮೇ ತಿಂಗಳಿಗೆ ಅಂತ್ಯವಾದಂತೆ ಈ ಸಾಧನೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಅಧಿಕವಾಗಿದೆ ಎಂಬುದು ಗಮನಾರ್ಹ.
ಮೈಸೂರು ವಿಭಾಗವು 2020ರ ಮೇ ತಿಂಗಳಿಗೆ 0.082 (ಎಂಟಿ)ಮೆಟ್ರಿಕ್ ಟನ್ನುಗಳ ಸರಕು ಸಾಗಣೆ ಮಾಡಿತ್ತು. ಈ ವರ್ಷದ ಮೇ ತಿಂಗಳಿಗೆ ಅದು 0.0768 ಮೆಟ್ರಿಕ್ ಟನ್’ಗಳಿಗೆ ತಲುಪಿದ್ದು, ಇದರಿಂದ ಶೇ. 836.59 ಪ್ರಗತಿ ಸಾಧಿಸಿದಂತಾಗಿದೆ.
ಪ್ರತೀ ತಿಂಗಳು 0.067 ಎಂಟಿ ಕಬ್ಬಿಣ ಅದಿರನ್ನು ತುಂಬಿಸುತ್ತಿದ್ದು, ಇದರಿಂದ ₹53.83 ಕೋಟಿ ಆದಾಯ ಬರುತ್ತಿದೆ. ಎರಡು ತಾಣಗಳಿಂದ ಅದಿರನ್ನು ತುಂಬಿಸುವ ಕಾರ್ಯವು ನವೀಕರಿಸಿರುವ ಮೈಸೂರು ವಿಭಾಗದ ಕಡಕೊಳ ಮತ್ತು ಬೆಂಗಳೂರು ವಿಭಾಗದ ಮಾಲೂರು ಟಿಲ್ಲರ್’ಗಳಿಂದ ನಡೆಯುತ್ತಿದೆ. ಇದರೊಂದಿಗೆ ವ್ಯವಹಾರ ಅಭಿವೃದ್ಧಿ ಘಟಕದ ಪ್ರಯತ್ನದಿಂದಾಗಿ ಹಾವೇರಿಯಿಂದ ನವೀ ಮುಂಬೈಗೆ ಸಕ್ಕರೆ ಸಾಗಾಣೆ ಮಾಡುವ ನೂತನ ಕಾರ್ಯವೂ ಸಹ ನಡೆದಿದೆ. ಇದರಿಂದಾಗಿ 0.002 ಮೆಟ್ರಿಕ್ ಟನ್ ಸಕ್ಕರೆಯನ್ನು ಸಾಗಾಣೆ ಮಾಡಿ 20.65 ಲಕ್ಷ ಹೆಚ್ಚುವರಿ ಆದಾಯವನ್ನು ಗಳಿಸಲಾಗಿದೆ.
ಬಿಡಿಯು ಘಟಕದ ನಿರಂತರ ಮಾರುಕಟ್ಟೆ ಪ್ರಯತ್ನದಿಂದ ಈ ಪ್ರಗತಿ ಸಾಧ್ಯವಾಗಿದೆ. ಈ ಸಂಕಷ್ಟ ಪರಿಸ್ಥಿತಿಯಲ್ಲಿ ಘಟಕವು ಸಾಗಣೆ ವಿಭಾಗವನ್ನು ಪುನಃಶ್ಚೇತನಗೊಳಿಸಿ ಇಷ್ಟೆಲ್ಲ ಯಶಸ್ಸು ತಂದಿದೆ. ಅದೇ ರೀತಿ ಒಟ್ಟು ವಸ್ತು ರವಾನೆಯಲ್ಲೂ (ಪಾರ್ಸೆಲ್) ಏರಿಕೆ ಕಂಡಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ ₹5.93. ಲಕ್ಷವಿದ್ದ ಆದಾಯ, 2021ರ ಮೇ ತಿಂಗಳಲ್ಲ ₹16.15 ಲಕ್ಷಕ್ಕೆ ಏರಿಕೆಯಾಗಿದೆ.
ಸಾಂಪ್ರದಾಯಿಕ ಬಳಕೆ ಅವಶ್ಯಕಗಳಾದ ಕಬ್ಬಿಣದ ಅದಿರು, ಪೆಟ್ರೋಲಿಯಂ ಉತ್ಪನ್ನಗಳು, ಸಿಮೆಂಟು, ಆಹಾರ ಧಾನ್ಯಗಳಾದ ಮುಸುಕಿನ ಜೋಳ, ಸಕ್ಕರೆ ಇತ್ಯಾದಿಗಳನ್ನು ಸಾಸಲು, ರಾಣಿಬೆನ್ನೂರು, ಅಮರಾವತಿ ಕಾಲೋನಿ, ಅಮ್ಮಸಂದ್ರ, ಚಿಕ್ಕಜಾಜೂರು, ಹಾವೇರಿ ಮತ್ತು ಹಾಸನ ನಿಲ್ದಾಣಗಳಿಂದ ಇವುಗಳನ್ನು ಸಾಗಾಣೆ ಮಾಡಲಾಗಿದೆ.
ಇನ್ನು ಈ ಕುರಿತಂತೆ ಮಾತನಾಡಿರುವ ಭಾರತೀಯ ರೈಲ್ವೆಯ ಮೈಸೂರು ವಿಭಾಗದ ಹಿರಿಯ ವಿಭಾಗೀಯ ಮ್ಯಾನೇಜರ್ ಡಾ.ಮಂಜುನಾಥ ಕನಮಾಡಿ ಅವರು, ರೈಲ್ವೆಯ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳ ಅವಿರತ ಶ್ರಮದ ಫಲವಾಗಿ ಈ ಉನ್ನತ ಗುರಿಯನ್ನ ಮುಟ್ಟಲು ಸಾಧ್ಯವಾಗಿದೆ. ಇಂತಹ ಸಂಕಟ ಸ್ಥಿತಿಯಲ್ಲೂ ಅಗತ್ಯವುಳ್ಳ ಸಮುದಾಯಕ್ಕೆ ಈ ಸೇವೆ ಸಕಾಲದಲ್ಲಿ ಮುಟ್ಟುವಂತೆ ತಮ್ಮನ್ನೇ ಅರ್ಪಿಸಿಕೊಂಡು ಸ್ತುತ್ಯರ್ಹ ಕೆಲಸ ಮಾಡಿದ್ದಾರೆ. ಈ ಕರ್ತವ್ಯ ನಿರ್ವಹಿಸಿರುವುದಕ್ಕೆ ಸಿಬ್ಬಂದಿ ಮತ್ತು ಬಿಡಿಯು ಸಿಬ್ಬಂದಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ವಿಭಾಗೀಯ ರೈಲ್ವೆ ಮ್ಯಾನೇಜರ್ ರಾಹುಲ್ ಅಗ್ರವಾಲ್ ಅವರು ಮಾತನಾಡಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿಶೇಷ ಪ್ರಯತ್ನದ ಫಲವಾಗಿ ಈ ಪ್ರಗತಿ ಸಾಧಿಸಲಾಗಿದೆ. ಕೋವಿಡ್ ಸಾಂಕ್ರಾಮಿಕತೆಯಿಂದ ಲಾಕ್ ಡೌನ್ ಆಗಿದ್ದರೂ ರೈಲ್ವೆ ಇಲಾಖೆಯ ಸರಕು ಸೇವೆಗಳಲ್ಲಿ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಮುಂಬರುವ ತಿಂಗಳುಗಳಲ್ಲಿಯೂ ಸರಕು ಸಾಗಣೆ ವಹಿವಾಟಿನಲ್ಲಿ ಪ್ರಸ್ತುತ ಇರುವ ವೇಗದ ಮನಃಸ್ಥಿತಿಯನ್ನೇ ಮುಂದುವರೆಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post