ನವದೆಹಲಿ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ವಿವಾದಿತ ಜಾಗ ರಾಮಲಲ್ಲಾ ಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಪ್ರಕರಣ ಕುರಿತಂತೆ ಐತಿಹಾಸಿಕ ಅಂತಿಮ ತೀರ್ಪು ಪ್ರಕಟಿಸಿದ ಸಿಜೆಐ ರಂಜನ್ ಗೊಗೋಯ್, ರಾಮ ಮಂದಿರ ನಿರ್ಮಾಣ ಕೇಂದ್ರ ಸರ್ಕಾರದ ಹೊಣೆಯಾಗಿದ್ದು, ಇದಕ್ಕಾಗಿ ಮೂರು ತಿಂಗಳ ಒಳಗಾಗಿ ನಿಯಮ ರೂಪಿಸಲು ಸೂಚಿಸಿದೆ.
ಸರ್ಕಾರ ತನ್ನ ವಿಶೇಷ ಅಧಿಕಾರವನ್ನು ಬಳಸಿ ಅತಿ ಶೀಘ್ರದಲ್ಲೇ ಸುನ್ನಿ ವಕ್ಪ್ ಬೋರ್ಡ್‌ಗೆ ಪರ್ಯಾಯವಾಗಿ ಬೇರೆಡೆ ಐದು ಎಕರೆ ಜಾಗ ನೀಡುವಂತೆ ಕೋರ್ಟ್ ಸೂಚಿಸಿದ್ದು, ಬೇರೆ ಯಾವ ಸ್ಥಳವನ್ನು ನೀಡಬೇಕು ಎಂಬುದನ್ನು ಉತ್ತರ ಪ್ರದೇಶ ಸರ್ಕಾರದ ವಿವೇಚನೆಗೆ ಬಿಟ್ಟಿದೆ.
ನಿರ್ಮೋಹಿ ಅಖಾಡದ ಅರ್ಜಿ ವಜಾ, ಶಿಯಾ ವಕ್ಫ್ ಬೋರ್ಡ್ ಅರ್ಜಿ ವಜಾಗೊಳಿಸಿರುವ ನ್ಯಾಯಾಲಯ, ಮಸೀದಿ ಯಾವಾಗ ನಿರ್ಮಾಣವಾಯಿತು ಎಂಬುದು ಮುಖ್ಯವಲ್ಲ ಎಂದಿದೆ.
ನಿರ್ಮೋಹಿ ಅಖಾಡಕ್ಕೆ ಪೂಜಾ ಅಧಿಕಾರವಿಲ್ಲ. ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಸುಪ್ರೀಂಕೋರ್ಟ್ ಮಾನ್ಯತೆ ನೀಡಿದೆ.
ಉತ್ಖನನದ ವೇಳೆ ಸಿಕ್ಕ ಕಲಾಕೃತಿಗಳು ಇಸ್ಲಾಂ ರಚನೆಯಾಗಿರಲಿಲ್ಲ. ಆದರೆ ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎನ್ನುವ ಅಂಶದ ಕುರಿತು ಖಚಿತತೆ ಇಲ್ಲ ಎಂದಿದೆ.
ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು. ಆದರೆ ಇದು ಇಸ್ಲಾಂ ರಚನೆಯಾಗಿರಲಿಲ್ಲ ಎಂದ ನ್ಯಾಯಾಲಯ, ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ. ಕಂದಾಯ ದಾಖಲೆ ಪ್ರಕಾರ ವಿವಾದಿತ ಜಮೀನು ಸರ್ಕಾರಿ ಜಾಗವಾಗಿತ್ತು ಎಂದಿದೆ.
ರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದ ಎನ್ನುವುದರ ಬಗ್ಗೆ ವಿವಾದವಿಲ್ಲ. ಹಿಂದುಗಳು ಅಯೋಧ್ಯೆಯನ್ನು ರಾಮಜನ್ಮಭೂಮಿ ಎಂದು ನಂಬುತ್ತಾರೆ. ವಿವಾದಿತ ಜಾಗದಲ್ಲೇ ಹಿಂದೂಗಳು ಪೂಜೆ ಮಾಡುತ್ತಾ ಬಂದಿದ್ದಾರೆ. ಮಸೀದಿಯ ಪ್ರಮುಖ ಗುಂಬಜನ್ನು ರಾಮನ ಜನ್ಮಸ್ಥಳ ಎಂದು ನಂಬುತ್ತಾರೆ. ಚಬೂರ್ತ, ಸೀತಾ ರಸೋಯಿ, ಭಂಡಾರಗಳೆಲ್ಲಾ ರಾಮನ ಹುಟ್ಟಿಗೆ ಪುಷ್ಠಿ ನೀಡುತ್ತಿವೆ ಎಂದು ನ್ಯಾಯಾಲಯ, ಪುರಾಣಗಳಲ್ಲೂ ರಾಮಲಲ್ಲಾ ಬಗ್ಗೆ ಉಲ್ಲೇಖವಿದೆ. ಆ ಪ್ರದೇಶದಲ್ಲಿ ಹಿಂದು ಪರಿಕ್ರಮವನ್ನೂ ಮಾಡುತ್ತಿದ್ದರು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಇನ್ನು, ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲಾಗುವುದಿಲ್ಲ ಎಂದ ನ್ಯಾಯಾಲಯ, ಕಾನೂನಿನ ಸಾಕ್ಷ್ಯದ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ. ಸುನ್ನಿ ವಕ್ಫ್ ಬೋರ್ಡನ್ನು ಅರ್ಜಿದಾರ ಎಂದು ಪರಿಗಣಿಸಬಹುದು. ಆದರೆ, ಸ್ವಾಧೀನದ ಆಧಾರದ ಮೇಲೆ ಭೂಮಿಯ ಹಕ್ಕನ್ನು ಕೇಳುವಂತಿಲ್ಲ. ಹಾಗೆಯೇ, ಮಸೀದಿ ಕೆಳಗಡೆ ಇರುವುದು ಹಿಂದೂ ರಚನೆ ಎಂದೂ ಸಹ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ವಿವಾದಿತ ಜಾಗದಲ್ಲಿ 1856-57ರವರೆಗೆ ನಮಾಜ್ ಮಾಡಲಾಗುತ್ತಿತ್ತು ಎಂದು ಸಾಬೀತು ಮಾಡಲು ಯಾವುದೇ ಸಾಕ್ಷಿಗಳಲ್ಲ. ಮಸೀದಿಯ ಮುಖ್ಯ ಗುಂಬಜ್ ಕೆಳಭಾಗದಲ್ಲಿ ಗರ್ಭಗುಡಿ ಇತ್ತೆಂದು ನಂಬಲಾಗುತ್ತಿದೆ. ಮಸೀದಿಯ ಒಳಭಾಗದಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು. ಇದನ್ನು ನಿರ್ಬಂಧಿಸಿದಾಗ ಹೊರಭಾಗದಲ್ಲಿ ಹಿಂದೂಗಳಿಂದ ಪೂಜೆ ಸಲ್ಲಿಸಲಾಗುತ್ತಿತ್ತು. ಬ್ರಿಟಿಷರು ಆ ಜಾಗವನ್ನು ಪ್ರತ್ಯೇಕಗೊಳಿಸಿ ಬೇಲಿ ಹಾಕಿದ್ದರು ಎಂದಿದೆ.
ಇತಿಹಾಸಕಾರರ ವಿವರಣೆ ಹಾಗೂ ಪುರಾತತ್ವ ಸಾಕ್ಷಿಗಳು ಸಂಪೂರ್ಣವಾಗಿ ಹಿಂದೂಗಳ ಪರವಾಗಿದೆ ಎಂದು ಸ್ಪಷ್ಟವಾಗಿ ಹೇಳಿರುವ ನ್ಯಾಯಾಲಯ, ಮುಸ್ಲಿಂರಿಗೆ ಮಸೀದಿಯ ಒಳಭಾಗದಲ್ಲಿ ಪ್ರಾರ್ಥನೆಗೆ ಅವಕಾಶ ಇಲ್ಲದಿದ್ದರೂ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು ಎಂಬುದನ್ನೂ ಸಹ ಉಲ್ಲೇಖಿಸಿದೆ.
ಮಸೀದಿಯ ಒಳಭಾಗದ ಜಾಗದ ಕುರಿತಾಗಿಯೂ ವಿವಾದವಿದ್ದರೂ, ಮಸೀದಿಗೆ ಹಾನಿ ಮಾಡುವ ಮೂಲಕ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ತಪ್ಪು ಎಂದು ನ್ಯಾಯಾಲಯ ಹೇಳಿದೆ.
ಅಲಹಬಾದ್ ಕೋರ್ಟ್ ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ಮಾಡಿರುವುದು ಸರಿ ಎಂದು ಯಾರೂ ಒಪ್ಪುತ್ತಿಲ್ಲ. ಇದು ತಾರ್ಕಿಕವಲ್ಲ ಎಂದು ಸಾಂವಿಧಾನಿಕ ಪೀಠವೂ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ಮಾಡಿರುವುದು ಸರಿ ಎಂದು ಯಾರೂ ಒಪ್ಪುತ್ತಿಲ್ಲ ಎಂದಿದೆ.
Get In Touch With Us info@kalpa.news Whatsapp: 9481252093, 94487 22200
Discussion about this post