ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನವರಾತ್ರಿಯ (Navaratri) ಪರ್ವಕಾಲವು ದೇವಿಯ ಉಪಾಸನೆಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದ್ದು, ಪ್ರಕೃತಿಯಲ್ಲಿಯೂ ಪ್ರಸನ್ನತೆಯ ವಾತಾವರಣ ನಿರ್ಮಾಣವಾಗುವುದರಿಂದ ಆಧ್ಯಾತ್ಮಿಕ ಸಾಧನೆಗೆ ಇದು ಸೂಕ್ತ ಕಾಲವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Raghaveshwara Shri) ಹೇಳಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ್ಯ ನಮಸ್ಯಾ’ ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನ ಅನುಗ್ರಹಿಸಿ ಮಾತನಾಡಿದ ಶ್ರೀಗಳು, ನವರಾತ್ರಿಯ ಸಂದರ್ಭದಲ್ಲಿ ದೇವಿಯ ಅಲ್ಪ ಸೇವೆ ಮಾಡುವ ಮೂಲಕ ಅನಂತ ಫಲವನ್ನು ಪಡೆಯಲು ಸಾಧ್ಯವಿದೆ. ಆಧ್ಯಾತ್ಮಿಕ ದೃಷ್ಟಿಯಿಂದಲೂ ನವರಾತ್ರಿ ಅತ್ಯಂತ ಮಹತ್ವದ ಕಾಲವಾಗಿದೆ ಎಂದು ತಿಳಿಸಿದರು.
ಉಪಾಸನೆಗೆ ಪ್ರಕೃತಿಯೇ ಪೂರಕ ವಾತಾವರಣ
ಬಾಹ್ಯ ಪ್ರಕೃತಿಗೂ ಮನುಷ್ಯನ ದೇಹ ಮತ್ತು ಮನಸ್ಸಿಗೂ ನೇರವಾದ ಸಂಬಂಧವಿದೆ. ಮಳೆಗಾಲದ ಬಳಿಕ ಶರತ್ಕಾಲದಲ್ಲಿ ಪ್ರಕೃತಿ ಪ್ರಸನ್ನತೆಯನ್ನು ಪಡೆಯುತ್ತದೆ. ಚಂಡಮಾರುತದ ಬಳಿಕ ಮಂದಮಾರುತ ಬೀಸುವ ಈ ಸಂದರ್ಭದಲ್ಲಿ ಆಗಸದಲ್ಲಿ ಅಗಸ್ತ್ಯ ನಕ್ಷತ್ರದ ಉದಯವಾಗುತ್ತದೆ. ಇದರೊಂದಿಗೆ ಸತ್ವಗುಣದ ಉದಯವಾಗುತ್ತದೆ ಎಂದು ಶ್ರೀಗಳು ವಿವರಿಸಿದರು.
ಮಳೆಯ ಕಾರ್ಮೋಡಗಳು ಕರಗಿ ಜ್ಞಾನಸೂರ್ಯ ಉದಯವಾಗುವಂತೆ, ಮನುಷ್ಯನ ಹೃದಯ ಕಮಲವೂ ಅರಳುವ ಕಾಲವೇ ನವರಾತ್ರಿ. ಹೀಗಾಗಿ ಈ ಪರ್ವಕಾಲವನ್ನು ಉಪಾಸನೆ ಹಾಗೂ ಆಧ್ಯಾತ್ಮಿಕ ಸಾಧನೆಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
Navaratri: ನವರಾತ್ರಿ ವ್ರತ ಆಚರಣೆಗೆ ಕರೆ
ನವರಾತ್ರಿ ವ್ರತವನ್ನು ಯಾರು ಬೇಕಾದರೂ ಆಚರಿಸಬಹುದಾಗಿದೆ. ಹಿಂದಿನಿಂದಲೂ ನವರಾತ್ರಿ ವ್ರತ ಆಚರಿಸಿಕೊಂಡು ಬಂದಿರುವ ಪರಂಪರೆ ಹೊಂದಿರುವವರು ಯಾವುದೇ ಕಾರಣಕ್ಕೂ ಅದನ್ನು ಬಿಡಬಾರದು ಎಂದು ಶ್ರೀಗಳು ಸಲಹೆ ನೀಡಿದರು.
ಆಚರಣೆಯನ್ನು ಕೈಬಿಟ್ಟಿರುವವರು ವಿವಿಧ ರೀತಿಯ ತೊಂದರೆಗಳನ್ನು ಎದುರಿಸುತ್ತಿರುವುದನ್ನು ಕಾಣಬಹುದು. ಆದ್ದರಿಂದ ನವರಾತ್ರಿ ಆಚರಣೆಯನ್ನು ಪ್ರಯತ್ನಪೂರ್ವಕವಾಗಿ ಮುಂದುವರಿಸಬೇಕು ಎಂದು ಅವರು ಹೇಳಿದರು.
ಲಲಿತೋಪಾಖ್ಯಾನಕ್ಕೆ ವಿಶೇಷ ಮಹತ್ವ
ಲಲಿತೋಪಾಖ್ಯಾನವನ್ನು ಒಂದು ಬಾರಿ ಅನುಸಂಧಾನ ಮಾಡಿದರೆ ಕೋಟಿ ಬಾರಿ ದೇವಿ ಮಹಾತ್ಮೆಯನ್ನು ಅನುಸಂಧಾನ ಮಾಡಿದ ಫಲ ದೊರೆಯುತ್ತದೆ ಎಂದು ಶ್ರೀಗಳು ತಿಳಿಸಿದರು.
ನವರಾತ್ರಿಯಲ್ಲಿ ದೇವಿಯ ಚರಿತ್ರೆಯ ಪಠನ ಮತ್ತು ಶ್ರವಣಕ್ಕೆ ವಿಶೇಷ ಫಲವಿದೆ. ಲಲಿತೋಪಾಖ್ಯಾನ ಹಾಗೂ ಶ್ರೀಚಕ್ರ ಪೂಜೆಯನ್ನು ಪರಂಪರೆಯಲ್ಲಿ ರಹಸ್ಯ ಸಾಧನೆಗಳೆಂದು ಪರಿಗಣಿಸಲಾಗಿದೆ. ದೇವಿಯ ಮಹಿಮೆಯನ್ನು ವರ್ಣಿಸುವ ಲಲಿತೋಪಾಖ್ಯಾನವು ಇಂದಿನ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲ ಎಂದು ಹೇಳಿದರು.
‘ನವರಾತ್ರ್ಯ ನಮಸ್ಯಾ’ ಕಾರ್ಯಕ್ರಮದ ಮೂಲಕ ಲಲಿತೋಪಾಖ್ಯಾನ ಪ್ರವಚನವನ್ನು ಆಯೋಜಿಸಲಾಗಿದ್ದು, ಪ್ರತಿದಿನ ದೇವಿಯನ್ನು ವಾಗ್ಪುಷ್ಪಗಳಿಂದ ಪೂಜಿಸುವ ಕಾರ್ಯ ನಡೆಯುತ್ತಿದೆ ಎಂದು ಶ್ರೀಗಳು ವಿವರಿಸಿದರು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳ ಸಾನ್ನಿಧ್ಯದಲ್ಲಿ ಮಣ್ಣಿನ ರಾಜರಾಜೇಶ್ವರಿಯ ಪ್ರತಿಷ್ಠೆ ನೆರವೇರಿಸಲಾಯಿತು. ನವರಾತ್ರ್ಯ ನಮಸ್ಯಾದ ಅಂಗವಾಗಿ ರಾಜರಾಜೇಶ್ವರಿ ಪೂಜೆ, ಶ್ರೀಮಹಾಕಾಳಿ ಮಂತ್ರ ಹವನ, ಸಪ್ತಶತೀ ಪಾರಾಯಣ ಹಾಗೂ ಮಾತೆಯರಿಂದ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Also Read>> ಶಿವಮೊಗ್ಗ–ಮಲೆನಾಡು ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: 6 ರೈಲುಗಳಿಗೆ ಎಲ್‌ಎಚ್‌ಬಿ ಬೋಗಿಗಳ ಸೇವೆ
ಸಾವಿರಾರು ಭಕ್ತರು ಭಾಗಿ
ಕಾರ್ಯಕ್ರಮದಲ್ಲಿ ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಲ್, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್., ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಚಟ್ನಳ್ಳಿ, ನವರಾತ್ರ್ಯ ನಮಸ್ಯಾದ ಪ್ರಧಾನ ಸಂಯೋಜಕ ರಮೇಶ ಹೆಗಡೆ ಕೋರಮಂಗಲ, ಡಾ. ಶಾರದಾ ಜಯಗೋವಿಂದಾ, ರಮಾನಾಥ ಬಿ.ಎಲ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ದಿನಪ್ರಧಾನರಾಗಿ ಶ್ರೀಮಠದ ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಹಾಗೂ ಅವರ ದಂಪತಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ಉಪಾಸನೆಯಲ್ಲಿ ಭಾಗಿಯಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













