ಶಂಖಚಕ್ರಾದಿಶೋಭಿತ ಚತುರ ಹಸ್ತ ನಿರುಪಮಾನ ಶ್ರೀರಮಣ
ಪರಮ ಪುರುಷ ವೇಣುಗೋಪಾಲ ನಮ್ಮ ಸಿರಿಕೃಷ್ಣ ಸಕಲಭೂಷಣ
ಕಾಕೋಳದ ಚತುರ್ಭುಜ ವೇಣುಗೋಪಾಲ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ
ಅಲ್ಲೊಂದು ಬೃಂದಾವನ. ನಡುವೆ ಎಡಗಾಲ ಮೇಲೆ ಬಲಗಾಲನ್ನಿಟ್ಟು ಕೊಳಲನ್ನು ಹಿಡಿದ ಮುರಳಿ, ಇಕ್ಕೆಲಗಳಲ್ಲಿ ವೇಣುಗಾನದಲ್ಲಿ ಭಾವ ಪರವಶವಾಗಿರುವ ಗೋವುಗಳು, ಎದುರಿಗೆ ಕೃಷ್ಣನ ದಿವ್ಯ ಸ್ವರೂಪವನ್ನು ಕಣ್ತುಂಬಿಸಿಕೊಳ್ಳುತ್ತಿರುವ ವೇದವ್ಯಾಸ, ಆಚಾರ್ಯ ಮಧ್ವ, ಶ್ರೀಪಾದರಾಜರು… ಸನಿಹದಲ್ಲಿಯೇ ಕನಕ- ಪುರಂದರದಾಸರು…
ಇಂತಹ ಮೋಡಿ ಮಾಡುವ ವಾತಾವರಣ ಇರುವುದು ಕಾಕೋಳು ಕ್ಷೇತ್ರದಲ್ಲಿ. ಬೆಂಗಳೂರಿನಿಂದ 30 ಕಿಮೀ ದೂರದಲ್ಲಿರುವ ಈ ದಿವ್ಯ ಸನ್ನಿಧಿಯಲ್ಲಿ ನಾಳೆ ವೈಭವದ ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ಪೂಜಾ ಕೈಂಕರ್ಯವನ್ನು ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದೆ. ಸಂಜೆ ನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ, ರಾತ್ರಿ ಕಲ್ಪೋಕ್ತ ಪೂಜೆ, ಚಂದ್ರಾಘ್ರ್ಯ ಪ್ರದಾನ, ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ನವನೀತಚೋರನಿಗೆ ನಾದ ನೀರಾಜನ: ವೇಣುವಾದನ : ಶ್ರೀ ಜಯತೀರ್ಥ ಕುಲಕರ್ಣಿ, ತಬಲ : ವಿಜಯೇಂದ್ರ ಸಗರ್ ನಡೆಸಿಕೊಡುವರು.
ಮನದಲ್ಲಿ ನೆಮ್ಮದಿ, ಮಾತಿನಲ್ಲಿ ಸಿದ್ಧಿ, ಮನೆಯಲ್ಲಿ ಸಮೃದ್ಧಿ ಬೇಕೆ? ಹಾಗಿದ್ದರೆ ಬನ್ನಿ ಇಲ್ಲಿಗೆ ಎಂದು ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತಿದೆ ಈ ತಾಣ. ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಚಾರಿತ್ರಿಕ, ಪೌರಾಣಿಕ ನೆಲೆಯೆಂದು ಜನಪ್ರಿಯವಾಗಿದೆ. ಕಾಲಕ್ಕೆ ತಕ್ಕಂತೆ ಕೊಂಚ ಆಧುನಿಕತೆಯ ಲೇಪವಿದ್ದರೂ ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ. ಒಂದು ಊರಿನ ಇತಿಹಾಸವೆಂದರೆ ಅದು ಜನತೆಯ ಇತಿಹಾಸ, ಅವರು ಬಾಳಿ ಬದುಕಿದ ರೀತಿ, ಅನುಸರಿಸಿದ ಧರ್ಮ, ಸಾಂಸ್ಕೃತಿಕ ಸಾಮಾಜಿಕ ಪ್ರಜ್ಞೆ, ಜೀವನ ಮೌಲ್ಯಗಳನ್ನು ಶ್ರೀ ಕ್ಷೇತ್ರ ಕಾಕೋಳಿನಲ್ಲಿ ಕಾಣಬಹುದು.
ಚತುರ್ಭುಜ ಗೋಪಾಲ
ಚತುರ್ಭುಜ ವೇಣುಗೋಪಾಲ ಇಲ್ಲಿಯ ವಿಶೇಷ. ಈ ಕ್ಷೇತ್ರ ಮೊದಲು ವಿಜಯನಗರ ಅರಸರ ಸಾಮಂತನೊಬ್ಬನ ಆಳ್ವಿಕೆಯಲ್ಲಿತ್ತು. ಆಗ ಇದಕ್ಕೆ ಕಾಕೋಡು, ಕಾಕಾಪುರ, ಮುಂತಾದ ಹೆಸರುಗಳಿದ್ದವು. ಕಾಕೋಡು ಎಂದರೆ ಸುಖ ಸಮೃದ್ಧಿಯಿಂದ ಕೂಡಿದ ಸ್ಥಳವೆಂದರ್ಥ. ರಾಮಾಯಣದ ಕಾಕಾಸುರನು (ಇಂದ್ರನ ಮಗ ಜಯಂತ) ಶಾಪ ವಿಮೋಚನೆಗಾಗಿ ಸ್ನಾನ ಮಾಡಿದ ಕೊಳ ಅದುವೇ ‘ಕಾಕೋಳು’ ಆಯಿತೆನ್ನುತ್ತದೆ ಸ್ಥಳ ಪುರಾಣ.
ದೇವಾಲಯದ ಒಳ ಪ್ರವೇಶಿಸಿದೊಡನೆ ಎದುರು ಕಾಣುವುದೇ ಶೀಘ್ರ ವರಪ್ರದ ಮೋದ ಮಾರುತಿ. ವ್ಯಾಸರಾಜರು ಪ್ರತಿಷ್ಠಾಪನೆ ಮಾಡಿರುವ 732 ಹನುಮನ ವಿಗ್ರಹಗಳಲ್ಲಿ ಒಂದಾದ ಕಂಬದ ಆಂಜನೇಯ ಸ್ವಾಮಿಯ ದರ್ಶನ ಇಲ್ಲಾಗುತ್ತದೆ. ಕೃಷ್ಣ ಲೀಲಾಮೃತ ಸಾರುವ ಕಲಾತ್ಮಕ ಚಿತ್ರ ನೋಡಿ ಕಣ್ಮನ ತುಂಬಿಕೊಳ್ಳಬಹುದು.
ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಿಂದ ಕಾಕೋಳು ತಲುಪಲು ಸಾಕಷ್ಟು ಬಸ್ ಸೌಕರ್ಯಗಳಿವೆ.
ವಿವರಗಳಿಗೆ ಸಂಪರ್ಕಿಸಿ: 90356 18076/98450 75250/93807 76217
Discussion about this post