ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಒಂದೇ ಕುಟುಂಬವು ಹಲವಾರು ತಲೆಮಾರುಗಳಿಂದ ಪಕ್ಷವನ್ನು ನಡೆಸುತ್ತಿದ್ದರೆ, ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಇಂದು ನಡೆದ 71ನೇ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಕೆಲವು ರಾಜಕೀಯ ಪಕ್ಷಗಳು ಕುಟುಂಬದ ಒಳಿತಿಗಾಗಿ, ಕುಟುಂಬದಿಂದಲೇ ನಡೆಯುತ್ತಿರುವ ಪಕ್ಷಗಳಾಗಿವೆ. ವಂಶ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಮ್ಮ ಕರ್ತವ್ಯ, ಜವಾಬ್ದಾರಿಗಳೇನು ಎಂದು ತಿಳಿದುಕೊಂಡು ಅದರತ್ತ ಹೆಜ್ಜೆಯಿಡಬೇಕು, ಆಗ ನಮ್ಮ ಹಕ್ಕುಗಳನ್ನು ರಕ್ಷಿಸಲಾಗುತ್ತದೆ ಎಂದು ಹೇಳಿದರು.
1950ರ ನಂತರ ಪ್ರತಿವರ್ಷ ಸಂವಿಧಾನ ದಿನವನ್ನು ಆಚರಿಸಿ ಸಂವಿಧಾನ ರಚನೆಯಲ್ಲಿ ಏನೇನಾಗಿತ್ತು, ಅದರ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಾಗಿತ್ತು. ಆದರೆ ಕೆಲವರು ಹಾಗೆ ಮಾಡಲಿಲ್ಲ. ನಾವು ಮಾಡುತ್ತಿರುವ ಕೆಲಸ ಸರಿಯೇ, ತಪ್ಪೇ ಎಂದು ಮೌಲ್ಯಮಾಪನ ಮಾಡಲು ಸಹ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಬೇಕು ಎಂದು ಪ್ರಧಾನಿ ಮೋದಿ ವಿವರಿಸಿದರು.
ವಿವಿಧತೆಯಲ್ಲಿ ಏಕತೆ, ವೈವಿಧ್ಯತೆಯ ದೇಶವಾದ ಭಾರತದ ಸೊಬಗನ್ನು ನಮ್ಮ ಸಂವಿಧಾನ ವಿವರಿಸುತ್ತದೆ. ಹಲವು ಅಡೆತಡೆಗಳನ್ನು ನಿವಾರಿಸಿ ಸಂವಿಧಾನವನ್ನು ರಚಿಸಿಲಾಗಿದೆ. ದೇಶಕ್ಕೆ ಸಂವಿಧಾನವನ್ನು ನೀಡಲು ಹಲವು ನಾಯಕರು ಶ್ರಮಿಸಿದ್ದಾರೆ, ಅವರಿಗೆ ಇಂದು ಗೌರವ ವಂದನೆ ಸಲ್ಲಿಸುವ ದಿನವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮಾ ಗಾಂಧಿ ಸೇರಿದಂತೆ ಹಲವು ನಾಯಕರು, ಸ್ವಾತಂತ್ರ್ಯ ಹೋರಾಟಗಾರರನ್ನು ಸಹ ಈ ಸಂದರ್ಭದಲ್ಲಿ ನಾವು ಸ್ಮರಿಸುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post