ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಸ್ರೇಲ್ ನ ಐಲಾಟ್ ನಲ್ಲಿ ನೆರವೇರಿದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ ಪಂಜಾಬ್ ಮೂಲದ 21 ವರ್ಷದ ಸುಂದರಿ ಹರ್ನಾಜ್ ಕೌರ್ ಸಂಧು 70ನೇ ಮಿಸ್ ಯೂನಿವರ್ಸ್ ಪಟ್ಟ ಒಲಿಸಿಕೊಂಡಿದ್ದಾರೆ.
ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರು ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ. ಮೆಕ್ಸಿಕೋ ದೇಶದ 2020ರ ಮಾಜಿ ಭುವನ ಸುಂದರಿ ಆಂಡ್ರಿಯಾ ಮೆಜಾ ಅವರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಕರತಾಡನ ಮಧ್ಯೆ ಸಂಧು ಅವರಿಗೆ ಕಿರೀಟ ತೊಡಿಸಿದರು. ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮದ ನೇರ ಪ್ರಸಾರವಾಗಿದೆ.
ಸುದೀರ್ಘ 21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ ಸಿಕ್ಕಿದ್ದು, ಕೊನೆಯ ಬಾರಿ 2000ನೇ ಇಸವಿಯಲ್ಲಿ ಬಾಲಿವುಡ್ ನಟಿ ಲಾರಾ ದತ್ತ ಅವರಿಗೆ ಮಿಸ್ ಯೂನಿವರ್ಸ್ ಪಟ್ಟ ಒಲಿದಿತ್ತು.
ಟಾಪ್ ಮೂರು ಸುತ್ತುಗಳಲ್ಲಿ ಸ್ಪರ್ಧಿಗಳಿಗೆ ಇಂದಿನ ಮಹಿಳೆಯರು ಎದುರಿಸುತ್ತಿರುವ ಒತ್ತಡಗಳನ್ನು ಹೇಗೆ ನಿಭಾಯಿಸಬಹುದು ಎಂದು ಕೇಳಲಾದ ಪ್ರಶ್ನೆಗೆ ಭಾರತದ ಹರ್ನಾಸ್ ಸಂಧು, “ಇಂದಿನ ಯುವಜನತೆ ಎದುರಿಸುತ್ತಿರುವ ದೊಡ್ಡ ಒತ್ತಡವೆಂದರೆ ತಮ್ಮಲ್ಲಿ ನಂಬಿಕೆ ಇಡಬೇಕಾಗಿರುವುದು. ನೀವು ವಿಶಿಷ್ಠರು ಎಂದು ಭಾವಿಸಿಕೊಂಡರೆ ನಿಮ್ಮ ಬದುಕು ಸುಂದರವಾಗುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ, ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡೋಣ. ಮನೆಯಿಂದ ಆಚೆ ಬಂದು, ನಿಮ್ಮ ಬಗ್ಗೆ ಯೋಚನೆ ಮಾಡಿ, ನಿಮ್ಮ ಜೀವನಕ್ಕೆ ನೀವೇ ನಾಯಕರು, ನಿಮಗೆ ನೀವೇ ಧ್ವನಿಯಾಗಬೇಕು. ನಾನು ನನ್ನ ಮೇಲೆ ನಂಬಿಕೆ ಇಟ್ಟಿರುವುದರಿಂದ ಇಂದು ಇಲ್ಲಿ ನಿಂತಿದ್ದೇನೆ ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದರು. ಬಹುಶಃ ಅವರ ಈ ಮಾತುಗಳು, ಆತ್ಮವಿಶ್ವಾಸ ಭುವನ ಸುಂದರಿ ಪಟ್ಟವನ್ನು ಗೆಲ್ಲುವಂತಾಗಿರಬಹುದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post