ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೋವಿಡ್ -19ಗೆ ಸಂಬಂಧಿಸಿದ ಪ್ರಕರಣಗಳು ನಿರಂತರವಾಗಿ ಹೆಚುತ್ತಲೇ ಇರುವುದರಿಂದ ಕೇಂದ್ರದ ಹಿರಿಯ ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, ಸಕ್ರಿಯ ಕೋವಿಡ್-19 ಪ್ರಕರಣಗಳು ಕೇರಳದಲ್ಲಿ ಶೇಕಡ ಅರ್ಧದಷ್ಟು ಕಡಿಮೆಯಾಗಿದ್ದು, ಮಹಾರಾಷ್ಟ್ರದಲ್ಲಿ ಮಾತ್ರ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಪಂಜಾಬ್, ಹರಿಯಾಣ, ಕರ್ನಾಟಕ, ಗುಜರಾತ್, ಮತ್ತು ಮಧ್ಯಪ್ರದೇಶದಂತಹ ಇತರ ಕೆಲವು ರಾಜ್ಯಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಿದ್ದು, ಸಾರ್ವಜನಿಕರು ಜಾಗರೂಕರಾಗಿಬೇಕೆಂದು ಹೇಳಿದರು.
ರಾಷ್ಟ್ರೀಯ ಕೋವಿಡ್ -19 ಕಾರ್ಯಪಡೆಯ ಮುಖ್ಯಸ್ಥ ಹಾಗೂ ನಿತಿ ಆಯೋಗ್ ಆರೋಗ್ಯ ಸದಸ್ಯ ವಿ.ಕೆ. ಪಾಲ್ ಪ್ರತಿಕ್ರಿಯಿಸಿ, ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಾವು ಮಹಾರಾಷ್ಟ್ರದ ಬಗ್ಗೆ ಹೆಚ್ಚು ಚಿಂತಿತರಾಗಿದ್ದೇವೆ ಎಂದು ಹೇಳಿದ್ದಾರೆ.
ಇದು ಗಂಭೀರ ವಿಷಯವಾಗಿದ್ದು, ಎರಡು ಪಾಠಗಳನ್ನು ಹೊಂದಿದೆ. ವೈರಸ್ ಅನ್ನು ಲಘುವಾಗಿ ತೆಗೆದುಕೊಳ್ಳಬಾರದು. ಮತ್ತು ನಾವು ಕೋವಿಡ್ ಮುಕ್ತವಾಗಿ ಉಳಿಯಬೇಕಾದರೆ, ಸೂಕ್ತ ಮಾರ್ಗದರ್ಶಿಗಳು ಮತ್ತು ವ್ಯಾಕ್ಸಿನೇಷನ್ ಅನ್ನು ಸಮಯಕ್ಕೆ ಸರಿಯಾಗಿ ಅನುಸರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ಮಹಾರಾಷ್ಟ್ರದಲ್ಲೇ ಅತಿಹೆಚ್ಚು ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿದ್ದು, ಫೆಬ್ರವರಿ 11ಕ್ಕೆ ಸುಮಾರು 37,000 ಸಕ್ರಿಯ ಪ್ರಕರಣಗಳನ್ನು ಹೊಂದಿತ್ತು. ರಾಜ್ಯದಲ್ಲಿ ಇದೀಗ ಇದು ಒಂದು ತಿಂಗಳ ನಂತರ 1 ಲಕ್ಷ ದಾಟಿದೆ ಎಂದು ಕೇಂದ್ರ ಹಂಚಿಕೊಂಡ ಅಂಕಿ ಅಂಶಗಳು ತಿಳಿಸಿವೆ.
ದೇಶದ ಯಾವುದೇ ರಾಜ್ಯದಲ್ಲೂ ಕೋವಿಡ್ ಲಸಿಕೆಯ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್, ಸಾಕಷ್ಟು ಪ್ರಮಾಣದ ಕೋವಿಡ್ ಲಸಿಕೆಗಳ ದಾಸ್ತಾನಿದೆ. ಈ ಬಗ್ಗೆ ಜನತೆ ಭಯ ಪಡುವ ಅಗತ್ಯವಿಲ್ಲ. ಅಂತೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ದರದ ಕುರಿತು ಚರ್ಚೆಗಳು ನಡೆಯುತ್ತಿದ್ದು, ನಾವು ಕೂಡ ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಮಾರ್ಚ್ 11 ಮಧ್ಯಾಹ್ನ 1 ಗಂಟೆಯವರೆಗೂ ದೇಶಾದ್ಯಂತ 2,56,90,545 ಡೋಸ್ ಲಸಿಕೆಗಳನ್ನು ಅಗತ್ಯವಿರುವ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post