ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೇಂದ್ರ ಬಜೆಟ್ #Union Budget ಯಾವುದೇ ಒಂದು ರಾಜ್ಯಕ್ಕೆ ಸೀಮಿತವಾಗಿ ಇರುವುದಿಲ್ಲ. ಒಟ್ಟಾರೆ ಎಲ್ಲಾ ರಾಜ್ಯಗಳನ್ನೂ ಒಳಗೊಂಡಿರುತ್ತದೆ. ಕರ್ನಾಟಕಕ್ಕೆ ಏನೇನು ಕೊಡಬೇಕೋ ಅದೆಲ್ಲವನ್ನೂ ಕೊಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ #Minister Pralhad Joshi ಪ್ರತಿಕ್ರಿಯಿಸಿದರು.
ಕೇಂದ್ರ ಬಜೆಟ್ ಮಂಡನೆ ಬಳಿಕ ದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ಸಿಗರ ಆರೋಪಕ್ಕೆ ತಿರುಗೇಟು ನೀಡಿದರು.
ಹೊಸ IIT, ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ, ಕಿಸಾನ್ ಕ್ರೆಡಿಟ್ ಸಾಲ ಹೆಚ್ಚಳ, ಸ್ಟಾರ್ಟ್ ಅಪ್, ಧನ ಧಾನ್ಯ ಯೋಜನೆ, 12 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ, ನವಜಾತ ಶಿಶು ಮತ್ತು ತಾಯಂದಿರಿಗೆ ಪೌಷ್ಟಿಕ ಆಹಾರ, ಮೆಡಿಕಲ್ ಸೀಟು ಹೆಚ್ಚಳ ಇವೆಲ್ಲಾ ಕೊಡುಗೆಗಳು ಕರ್ನಾಟಕಕ್ಕೂ ಅನ್ವಯಿಸುತ್ತವೆಯಲ್ಲ ಎಂದು ಪ್ರತ್ಯುತ್ತರ ನೀಡಿದರು.
ಒಂದು ದಶಕದಿಂದಲೂ ಕರ್ನಾಟಕಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ: ಕೇಂದ್ರದಲ್ಲಿ NDA ಸರ್ಕಾರ ಅಧಿಕಾರಕ್ಕೆ ಬಂದ ಕಳೆದೊಂದು ದಶಕದಿಂದಲೂ ಕರ್ನಾಟಕಕ್ಕೆ ಬಹು ದೊಡ್ಡ ಕೊಡುಗೆ ನೀಡುತ್ತಲೇ ಬಂದಿದೆ ಎಂದು ಸಚಿವರು ಸಮರ್ಥಿಸಿಕೊಂಡರು.
ರಾಜ್ಯಕ್ಕೆ ಹಲವು ಯೋಜನೆ ದೊರಕಲಿವೆ: ರಾಜ್ಯಕ್ಕೆ ರೈಲ್ವೆ ಸೌಲಭ್ಯಕ್ಕಾಗಿ ಬರೋಬ್ಬರಿ 5000 ಕೋಟಿ ಕೊಟ್ಟಿದ್ದೇವೆ. AIMS ನೀಡಿದ್ದೇವೆ. ರಸ್ತೆ, ರೈಲ್ವೆ, ವಿಮಾನ ಹೀಗ ಬಹು ದೊಡ್ಡ ಪ್ರಮಾಣದಲ್ಲಿ ಮೂಲಸೌಲಭ್ಯದಂತಹ ಕೊಡುಗೆ ಕೊಟ್ಟಿದ್ದೇವೆ. ಮುಂದೆ ಇನ್ನೂ ಹಲವು ಯೋಜನೆಗಳು ಕರ್ನಾಟಕಕ್ಕೆ ದೊರಕಲಿವೆ ಎಂದು ಸಚಿವರು ತಿಳಿಸಿದರು.
ಏಮ್ಸ್ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ: ಏಮ್ಸ್ ವಿಳಂಬಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿನ ಗೊಂದಲವೇ ಕಾರಣ. ರಾಜ್ಯದಲ್ಲಿ ಎಲ್ಲಿ ಏಮ್ಸ್ ಸ್ಥಾಪಿಸಬೇಕು ಎಂಬುದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಮ್ಮತಕ್ಕೆ ಬಂದಿಲ್ಲ. ಅಲ್ಲಿ ಬೇಡ, ಇಲ್ಲಿ ಬೇಡವೆಂದು ಗೊಂದಲ ಸೃಷ್ಟಿಸುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಗೆ ಅದೊಂದು ಖಯಾಲಿ ಆಗಿದೆ: ಪ್ರತಿ ಬಾರಿಯೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏನು ಕೊಟ್ಟಿದೆ? ಎನ್ನುವುದು ಒಂದು ಖಯಾಲಿ ಆಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ಸಚಿವ ರಾಜಣ್ಣ ಅವರು ಅವರದೇ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬಗ್ಗೆಯೇ ಏನೇನೋ ಹೇಳುತ್ತಿರುತ್ತಾರೆ. ಅವರ ಪಕ್ಷದಲ್ಲೇ ಬಣ ರಾಜಕೀಯ, ಭಿನ್ನಾಭಿಪ್ರಾಯ ಬೇಕಾದಷ್ಟಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದರು.
ಕಾಂಗ್ರೆಸ್ ಜವಾಬ್ದಾರಿಯುತ ಪಾರ್ಟಿಯಲ್ಲ: ಕಾಂಗ್ರೆಸ್ ಪಕ್ಷ ಒಂದು ಜವಾಬ್ದಾರಿಯುತ ಪಾರ್ಟಿಯಲ್ಲ. ಹಾಗಾಗಿ ಅದರ ನಾಯಕರು ಬೇಜವಾಬ್ದಾರಿಯಿಂದ ವರ್ತಿಸುತ್ತ ಏನೇನೋ ಹೇಳಿಕೆ ನೀಡುತ್ತಾರೆ ಎಂದು ಜೋಶಿ ಟೀಕಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post