ವೆಲ್ಲಿಂಗ್ಟನ್: ಇಲ್ಲಿನ ಕ್ರೈಸ್ಟ್ ಚರ್ಚ್ ನಗರದಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ದಾಳಿಯ ವೇಳೆ ಒಂಬತ್ತು ಭಾರತೀಯರು ಕಣ್ಮರೆಯಾಗಿರುವ ಘಟನೆ ನಡೆದಿದ್ದು, ಇವರ ಕುರಿತಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತಂತೆ ನ್ಯೂಜಿಲೆಂಡ್’ನಲ್ಲಿರುವ ಭಾರತೀಯ ರಾಯಭಾರಿ ಸಂಜೀವ್ ಕೋಹ್ಲಿ, ಭೀಕರ ಗುಂಡಿನ ದಾಳಿಯ ನಂತರ ಭಾರತೀಯ ಮೂಲದ 9 ಮಂದಿ ನಾಪತ್ತೆಯಾಗಿದ್ದಾರೆ. ಇವರ ಕುರಿತಾಗಿ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.
ಇನ್ನು, ದಾಳಿಯಲ್ಲಿ ಹೈದರಾಬಾದ್ ಮೂಲದ ಅಹ್ಮದ್ ಜಹಾಂಗೀರ್ ಎನ್ನುವವರು ಗಾಯಗೊಂಡಿದ್ದು, ಅವರ ಸಹೋದರ ಇಕ್ಬಾಲ್ ಜಹಾಂಗೀರ್ ಹೈದರಾಬಾದ್ ನಿವಾಸಿಯಾಗಿದ್ದಾರೆ. ಅವರ ಕುಟುಂಬ ಸದಸ್ಯರು ನ್ಯೂಜಿಲ್ಯಾಂಡ್‌ಗೆ ತೆರಳಲು ಬಯಸಿದ್ದಾರೆ. ಅವರಿಗೆ ತುರ್ತು ವೀಸಾ ನೀಡುವಂತೆ ಸರ್ಕಾರವನ್ನು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ ದಕ್ಷಿಣ ಐಲೆಂಡ್ ಮತ್ತು ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 49 ಮಂದಿ ಮೃತಪಟ್ಟಿದ್ದಾರೆ.

















