ಕಲ್ಪ ಮೀಡಿಯಾ ಹೌಸ್
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ಆರ್ಭಟ ಕೊಂಚ ಕಡಿಮೆಯಾಗುತ್ತಿದ್ದಂತೆ ಸಾರ್ವಜನಿಕರು ಮೂರನೇ ಅಲೆಯ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮೂರನೇ ಅಲೆಯಲ್ಲಿ ಸೋಂಕು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವುದಿಲ್ಲ. ಇದಕ್ಕೆ ಯಾವುದೇ ಪುರಾವೆ ಸದ್ಯಕ್ಕೆ ದೊರೆತಿಲ್ಲ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಈಗಾಗಲೇ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಕ್ರಮವಾಗಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೊರೋನಾ ಏನು ಮಾಡಬೇಕು ಎಂಬ ಬಗ್ಗೆ ಕೆಲವು ನಿಯಮಾವಳಿಗಳನ್ನು ಬಿಡುಗಡೆ ಮಾಡಿದ್ದು, ಈ ಕೆಳಗಿನಂತಿದೆ.
ರೆಮಿಡಿಸಿವಿರ್ ಲಸಿಕೆ ಬಳಸುವಂತಿಲ್ಲ:
ಮಕ್ಕಳಲ್ಲಿ ರೆಮಿಡಿಸಿವಿರ್ ಬಳಕೆ ಮಾಡುವಂತಿಲ್ಲ ಹಾಗೂ ಎಚ್ಆರ್ಸಿಟಿ ಇಮೇಜಿಂಗ್ನ ತರ್ಕಬದ್ಧ ಬಳಕೆ ಮಾಡುವಂತೆ ಸೂಚಿಸಲಾಗಿದೆ.
ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್ಎಸ್) ಮಾರ್ಗಸೂಚಿ ಹೊರಡಿಸಿದ್ದು, ಮಕ್ಕಳಲ್ಲಿ ಸ್ಟೆರಾಯ್ಡ್ ಬಳಕೆ ಮಾಡುವಂತಿಲ್ಲ. ಹಾಗೂ ಇದರ ಪ್ರಕಾರ ಮಕ್ಕಳಲ್ಲಿ ಸೌಮ್ಯ ಲಕ್ಷಣಗಳಿರುವ ಹಾಗೂ ಲಕ್ಷಣರಹಿತ ಸೋಂಕಿನ ಪ್ರಕರಣದಲ್ಲಿ ಸ್ಟೆರಾಯ್ಡ್ಗಳ ಬಳಕೆ ಹಾನಿಕಾರಕವಾಗಬಹುದು ಎಂದು ತಿಳಿಸಿದೆ.
ಆಸ್ಪತ್ರೆಗೆ ಸೇರಿದ ಗಂಭೀರ ಪ್ರಕರಣಗಳಲ್ಲಿ ಸೂಕ್ತ ಸಮಯದಲ್ಲಿ ಹಾಗೂ ಸೂಕ್ತ ಪ್ರಮಾಣದಲ್ಲಿ ಮಕ್ಕಳಿಗೆ ಸ್ಟೆರಾಯ್ಡ್ ಬಳಸಬಹುದು ಎಂದು ಹೇಳಿದೆ.
ಆರೋಗ್ಯ ಸೇವೆಗಳ ನಿರ್ದೇಶನಾಲಯ ಮಾರ್ಗಸೂಚಿ ಪ್ರಕಾರ, 5 ವರ್ಷದ ಒಳಗಿನ ಮಕ್ಕಳು ಮಾಸ್ಕ್ ಧರಿಸುವಂತಿಲ್ಲ. ಪೋಷಕರ ಮತ್ತು ವೈದ್ಯರ ನಿಗಾದಡಿ 6ರಿಂದ 11 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸಬಹುದು.
ಪೋಷಕರು ತಾವೇ ಮಕ್ಕಳಿಗೆ ಮಾತ್ರೆಗಳನ್ನು ನೀಡುವಂತಿಲ್ಲ. ಅನಾವಶ್ಯಕವಾಗಿ ಎಚ್ಆರ್ಸಿಟಿ ಸ್ಕ್ಯಾನ್ ಅನ್ನು ಮಕ್ಕಳಿಗೆ ಮಾಡಬೇಡಿ. ಅತಿ ಅಗತ್ಯವಿದ್ದು, ಗಂಭೀರ ಪ್ರಕರಣದಲ್ಲಿ ಮಾತ್ರ ಎಚ್ಆರ್ಸಿಟಿ ಸ್ಕ್ಯಾನ್ ಬಳಸಬಹುದು. ಅದರಿಂದ ಪಡೆದ ಹೆಚ್ಚುವರಿ ಮಾಹಿತಿ ಆಧಾರದ ಮೇಲೆ ಚಿಕಿತ್ಸೆ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದೆ.
ಮಕ್ಕಳಲ್ಲಿ ಕೊರೋನಾ ಸೋಂಕು ಲಕ್ಷಣರಹಿತವಾಗಿದ್ದು, ವರದಿ ಪಾಸಿಟಿವ್ ಇದ್ದರೆ, ಕೋವಿಡ್ ಸೂಕ್ತ ನಡವಳಿಕೆ ಮತ್ತು ಪೌಷ್ಟಿಕ ಆಹಾರವನ್ನು ಸೂಚಿಸಲಾಗಿದೆ. ಆದರೆ ಯಾವುದೇ ನಿರ್ದಿಷ್ಟ ಔಷಧಿಗಳನ್ನು ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿಲ್ಲ.
ದೊಡ್ಡ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸೌಮ್ಯವಾದ ಸೋಂಕು ಹೊಂದಿರುವವರು, ಜ್ವರ ಮತ್ತು ಗಂಟಲು ನೋವು ಇದ್ದರೆ, ಪ್ರತಿ ನಾಲ್ಕರಿಂದ ಆರು ಗಂಟೆಗಳಿಗೊಮ್ಮೆ ಪ್ಯಾರಸಿಟಮಾಲ್ ಡೋಸ್ ಮತ್ತು ಕೆಮ್ಮು ಇದ್ದರೆ ಬೆಚ್ಚಗಿನ ಲವಣಯುಕ್ತ ಗಾರ್ಗಲ್ಗಳನ್ನು ಮಾಡಿಕೊಳ್ಳಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹಾಗೂ ಮಧ್ಯಮ ಪ್ರಮಾಣದ ಸೋಂಕು ಲಕ್ಷಣ ಹೊಂದಿರುವ ಮಕ್ಕಳಿಗೆ ತಕ್ಷಣದ ಚಿಕಿತ್ಸೆಯನ್ನು ಪ್ರಾರಂಭಿಸಲು ಶಿಫಾರಸು ಮಾಡಲಾಗಿದೆ.
6 ನಿಮಿಷ ನಡಿಗೆ ಮಾಡಿಸಿ:
ತೀವ್ರವಾದ ಕೋವಿಡ್ -19 ಸೋಂಕಿತ ಮಕ್ಕಳಲ್ಲಿ ಉಸಿರಾಟದ ತೊಂದರೆ ಹೊಂದಿದ್ದರೆ, ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯವಿದೆ. ಪೋಷಕರು ಅಥವಾ ಪಾಲಕರ ಮೇಲ್ವಿಚಾರಣೆಯಲ್ಲಿ ೧೨ ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಆರು ನಿಮಿಷಗಳ ನಡಿಗೆ ಸಹ ಇದು ಶಿಫಾರಸು ಮಾಡಿದೆ.
ಮಕ್ಕಳಿಗೆ ಪಲ್ಸ್ ಅಥವಾ ಆಕ್ಸಿಮೀಟರ್ ಅಳವಡಿಸಿ 6 ನಿಮಿಷ ನಡಿಗೆಗೆ ಸೂಚಿಸಬೇಕು, 6 ನಿಮಿಷ ನಡಿಗೆಯ ಮೂಲಕ ದೇಹದ ಆಕ್ಸಿಜನ್ ಮಟ್ಟದ ಮೇಲೆ ಗಮನ ವಹಿಸಿ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ಕೊಡಿಸಬೇಕು ಎಂದು ನಿಯಮಾವಳಿಯಲ್ಲಿ ಸೂಚಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post