ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಒಂದೆಡೆ ಎಚ್3ಎನ್2 ವೈರಸ್ ಪ್ರಕರಣಗಳ ವರದಿಯಾಗುತ್ತಿದ್ದರೆ, ಇನ್ನೊಂದೆಡೆ ಈ ಕಾಲೋಚಿತ ಜ್ವರ, ಶೀತ ಹಾಗೂ ಕೆಮ್ಮುಗಳಿಗೆ ಆಂಟಿ ಬಯೋಟಿಕ್ ಔಷಧಿಗಳನ್ನು ಶಿಫಾರಸ್ಸು ಮಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ದೇಶದ ವೈದ್ಯರಿಗೆ ಸೂಚನೆ ನೀಡಿದೆ.
ಸಾಮಾಜಿಕ ಜಾಲತಾಣದ ಮೂಲಕ ದೇಶದ ವೈದ್ಯರಿಗೆ ಸಲಹೆ ನೀಡಿರುವ ಐಎಂಎ, ಈ ಋತುಮಾನದ ಜ್ವರವು ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಜ್ವರವು ಮೂರು ದಿನಗಳ ಕೊನೆಯಲ್ಲಿ ಹೋಗುತ್ತದೆ. ಆದರೆ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ ಎಂದು ತಿಳಿಸಿದೆ.
ಇದು ಹೆಚ್ಚಾಗಿ 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡುಬರುತ್ತದೆ. ರೋಗಲಕ್ಷಣವನ್ನು ಆಧರಿಸಿ ಮಾತ್ರ ಚಿಕಿತ್ಸೆಯನ್ನು ವೈದ್ಯರು ನೀಡಬೇಕು. ಇದಕ್ಕೆ ಆಂಟಿ ಬಯೋಟಿಕ್ಸ್ ನೀಡುವ ಅಗತ್ಯವಿಲ್ಲ. ಡೋಸ್ ಮತ್ತು ಆವರ್ತನದ ಬಗ್ಗೆ ಕಾಳಜಿ ವಹಿಸದೆ ಅಜಿಥ್ರೊಮೈಸಿನ್ ಮತ್ತು ಅಮೋಕ್ಸಿಕ್ಲಾವ್ ಮುಂತಾದ ಪ್ರತಿಜೀವಕಗಳನ್ನು ತೆಗೆದುಕೊಳ್ಳಬಹುದು. ಆದರೆ, ಜ್ವರ ಕಡಿಮೆಯಾದ ತತಕ್ಷಣ ಅದನ್ನು ನಿಲ್ಲಿಸಿ ಸಾಮಾನ್ಯ ಔಷಧ ತೆಗೆದುಕೊಂಡರೆ ಸಾಕು ಎಂದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















