ಕಲ್ಪ ಮೀಡಿಯಾ ಹೌಸ್ | ಹೊಸದಿಲ್ಲಿ |
ನವೆಂಬರ್ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ದೇಶೀಯ ರೋಡ್‌ಶೋಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ Minister Murugesh Nirani ಅವರು ಹೊಸದಿಲ್ಲಿಯಲ್ಲಿ ಚಾಲನೆ ನೀಡಿದರು.
ದಿಲ್ಲಿಯ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವ ನಿರಾಣಿ, “ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಪೂರ್ವಭಾಗವಾಗಿ ದಿಲ್ಲಿಯಲ್ಲಿ ಮಂಗಳವಾರ ರೋಡ್ ಶೋ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು ಹಾಗೂ ನಮ್ಮ ಕೈಗಾರಿಕಾ ನೀತಿ ಕುರಿತು ದೇಶದ ಪ್ರಮುಖ ಕಂಪನಿಗಳ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗಿದೆ,” ಎಂದು ನಿರಾಣಿ ಹೇಳಿದರು.

” ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದ್ದು, ಇದರಿಂದ 5 ಲಕ್ಷ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಜಾಗತಿಕ ಹೂಡಿಕೆದಾರರ ಸಮಾವೇಶ ‘ಬ್ಯಲ್ಡ್ ಫಾರ್ ದ ವರ್ಲ್ಡ್’ ಎಂಬ ಪರಿಕಲ್ಪನೆಯಡಿ ಅನಾವರಣಗೊಳ್ಳುತ್ತಿದೆ. ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆ ಹೊಂದಿರುವ ಕರ್ನಾಟಕ, ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣ,”ಎಂದರು.

“ನೂತನ ಕೈಗಾರಿಕ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮದಲ್ಲಿನ ತಿದ್ದುಪಡಿಗಳಿಂದ ನಮ್ಮ ರಾಜ್ಯ ಉದ್ಯಮ ಸ್ನೇಹೀ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ. 2021ರ ಏಪ್ರಿಲ್ 21ರಿಂದ 2022ರ ಮಾರ್ಚ್ ಅವಧಿಯಲ್ಲಿ 1.76 ಲಕ್ಷ ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆ ಆಕರ್ಷಿಸುವಲ್ಲಿ ರಾಜ್ಯವು ಯಶಸ್ವಿಯಾಗಿದೆ”ಎಂದು ಸಚಿವರು ತಿಳಿಸಿದರು.
Also read: ಭಾರೀ ನಿರೀಕ್ಷೆ ಹುಟ್ಟಿಸಿರುವ ಹಿಜಾಬ್ ತೀರ್ಪು ನಾಳೆ ಸುಪ್ರೀಂನಲ್ಲಿ ಪ್ರಕಟ
ಸಂಭಾವ್ಯ ಹೂಡಿಕೆದಾರರ ಜತೆ ಚರ್ಚೆ
“ದಿಲ್ಲಿ ರೋಡ್‌ಶೋನಲ್ಲಿ ಐಟಿಸಿ, ಸ್ಕೇಪ್ ಇಂಡಿಯಾ, ರಿನ್ಯೂ ಪವರ್, ಸೆಂಬ್‌ಕಾರ್ಪ್ ಎನರ್ಜಿ, ಲಿಥಿಯಾನ್ ಪವರ್, ದಾಲ್ಮಿಯ ಸಿಮೆಂಟ್, ಸ್ಟೆರ್ಲಿಂಗ್ ಟೂಲ್ಸ್, ನೆಸ್ಲೆ, ಜ್ಯೂಬಿಲಿಯಂಟ್ ಫುಡ್ ವರ್ಕ್ಸ್, ಗರುಡ ಏರೋಸ್ಪೇಸ್, ಓಷನ್ ಪರ್ಲ್ ಹೋಟೆಲ್, ವಿ-ಗಾರ್ಡ್ ಇಂಡಸ್ಟ್ರೀಸ್, ನಿತಿನ್ ಸಾಯಿ ರಿನ್ಯೂವಬಲ್ಸ್ ಕಂಪನಿಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗಿದೆ,”ಎಂದು ಅವರು ತಿಳಿಸಿದರು.

ಇನ್ವೆಸ್ಟ್ ಕರ್ನಾಟಕ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡುವ ಮೂಲಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, “ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5000ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ,” ಎಂದರು.
“ಈ ಸಮಾವೇಶ ಬಂಡವಾಳ ಹೂಡಿಕೆಗಷ್ಟೇ ಸೀಮಿತವಾಗಿಲ್ಲ ಗ್ರಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್, ಗಾಯಕಿ ವಸುಂಧರಾ ದಾಸ್, ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತದ ಜುಗಲ್‌ಬಂದಿಯ ಸಂಗೀತ ಆಸ್ವಾದಿಸಬಹುದು.ಯಕ್ಷಗಾನ, ವಸ್ತು ಪ್ರದರ್ಶನ, ವಾಸ್ತುಶಿಲ್ಪ ಪ್ರದರ್ಶನ, ಚಿತ್ರಕಲಾ ಪರಿಷತ್‌ನಲ್ಲಿ ವಿಶೇಷ ಪ್ರದರ್ಶನ ಇರಲಿದೆ. ಜತೆಗೆ ವೈನ್ ಮತ್ತು ಆಹಾರ ಮೇಳದಲ್ಲಿ ಕರ್ನಾಟಕದ ವಿಶೇಷ ಖಾದ್ಯಗಳನ್ನು ಸವಿಯಬಹುದು. ಕರ್ನಾಟಕ ಪ್ರವಾಸದ ವ್ಯವಸ್ಥೆ ಮಾಡಲಾಗುವುದು,”ಎಂದು ಅವರು ವಿವವರಿಸಿದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಡಾ. ಇ.ವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post