ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಿರ್ಭಯ ಪ್ರಕರಣದ ರೀತಿಯೇ ಮತ್ತೊಂದು ಘಟನೆ ನಡೆದಿದ್ದು, 38 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಆಕೆಯ ಖಾಸಗಿ ಅಂಗಕ್ಕೆ ಕಬ್ಬಿಣದ ರಾಡ್ ತುರುಕಿ ವಿಕೃತಿ ಮೆರೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತಂತೆ ದೆಹಲಿ ಮಹಿಳಾ ಆಯೋಗ ಗಾಜಿಯಾಬಾದ್ ಪೊಲೀಸರಿಗೆ ನೋಟಿಸ್ ನೀಡಿದ್ದು, ಘಟನೆಯ ಸಂಪೂರ್ಣ ವರದಿ ಕೇಳಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ದೆಹಲಿ ನಿವಾಸಿಯಾದ 38 ವರ್ಷದ ಮಹಿಳೆಯ ಕೈ-ಕಾಲು ಕಟ್ಟಿ ಸೆಣಬಿನ ಚೀಲದಲ್ಲಿ ಸುತ್ತಿ ಬಿಸಾಡಲಾಗಿತ್ತು. ಆ ನಂತರ ಪರಿಶೀಲಿಸಲಾಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಖಾಸಗಿ ಅಂಗಾಂಗಕ್ಕೆ ಕಬ್ಬಿಣದ ರಾಡ್ ತುರುಕಿರುವ ಸ್ಥಿತಿಯಲ್ಲಿಯೇ ಆಕೆ ಪತ್ತೆಯಾಗಿದ್ದರು ಎಂದು ವರದಿಯಾಗಿದೆ.
Also read: ಶಿವಮೊಗ್ಗ ಕಾರಾಗೃಹದ ಮೇಲೆ ಎಸ್‌ಪಿ ದಾಳಿ: ದೊರೆತ ವಸ್ತುಗಳ ಕಂಡು ಅಧಿಕಾರಿಗಳು ಶಾಕ್!
ಘಟನೆಯ ಹಿನ್ನೆಲೆ:
ದೆಹಲಿ ನಿವಾಸಿಯಾದ ಮಹಿಳೆ ಅ.16ರಂದು ತನ್ನ ಮಗನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಲು ಗಾಜೀಯಾಬಾದ್‌ನಲ್ಲಿ ಆಟೋಗಾಗಿ ಕಾಯುತ್ತಾ ನಿಂತಿದ್ದು, ಈ ವೇಳೆ ನಾಲ್ವರು ದುಷ್ಕರ್ಮಿಗಳು ಎಸ್‌ಯುವಿ ಕಾರಿನಲ್ಲಿ ಆಕೆಯನ್ನು ಕಿಡ್ನಾಪ್ ಮಾಡಿದ್ದರು. ಈ ನಾಲ್ವರೊಂದಿಗೆ ಇನ್ನು ಹಲವರು ಸೇರಿ ಎರಡು ದಿನಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಇನ್ನಿಲ್ಲದಂತೆ ಕಿರುಕುಳ ನೀಡಿದ್ದಾರೆ. ಅನಂತರ ಆಕೆಯ ಕೈಕಾಲು ಕಟ್ಟಿ ಸೆಣಬಿನ ಚೀಲದಲ್ಲಿ ಸುತ್ತಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.
ಘಟನೆ ಕುರಿತಂತೆ ಡಿಸಿಡಬ್ಯೂ ಮುಖ್ಯಸ್ಥರಾದ ಸ್ವಾತಿ ಮಲ್ವಿವಾಲ್ ಮಾಧ್ಯಮಗಳಿಗೆ ಮಾತನಾಡಿದ್ದು, ಇದೊಂದು ಅತ್ಯಂತ ಘೋರ ಹಾಗೂ ಮಾನಸಿಕವಾಗಿ ಎಂತಹವರನ್ನು ಕೊಲ್ಲುವಂತಹ ಘಟನೆ ನಿರ್ಭಯ ಪ್ರಕರಣದ ರೀತಿಯಲ್ಲೇ ಇದೂ ಸಹ ನಡೆದಿದೆ. ಇಂತಹ ಘೋರ ಕೃತ್ಯ ಎಸಗಿದ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆಗೆ ದೆಹಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿಯಾಗಿದೆ.
ಪ್ರಕರಣ ಕುರಿತಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post