ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭೀಕರ ಚಳಿಗೆ ಉತ್ತರ ಭಾರತದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಮ್ಮು ಮತ್ತು ಕಾಶ್ಮೀರ, ದೆಹಲಿ, ಪಂಬಾಜ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರೀ ಕುಸಿದಿದೆ. ಚಳಿಯ ತೀವ್ರತೆಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸಾಮಾನ್ಯ ಜನಜೀವನದಲ್ಲೂ ವ್ಯತ್ಯಾಸ ಕಂಡುಬಂದಿದ್ದು, ಮಂಜು ಮುಸುಕಿದ ವಾತಾವರಣವಿರುವುದರಿಂದ ಗೋಚರತೆ ಪ್ರಮಾಣ ಭಾರೀ ಇಳಿಕೆಯಾಗಿದೆ. ಹಾಗೂ ಉತ್ತಪ್ರದೇಶದ ಆಗ್ರಾ, ಪಂಜಾಬ್’ನ ಭಠಿಂಡಾದಲ್ಲಿ ಗೋಚರತೆಯು ಶೂನ್ಯಕ್ಕೆ ತಲುಪಿದೆ.

ಭೀಕರ ಚಳಿಗೆ 98 ಮಂದಿ ಸಾವು
ಭೀಕರ ಚಳಿ ಉತ್ತರಪ್ರದೇಶದ ಕಾನ್ಪುರ ಒಂದರಲ್ಲಿಯೇ 98 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಕಳೆದೊಂದು ವಾರದಲ್ಲೇ ನಗರದಲ್ಲಿ 98 ಜನರು ಹೃದಯಾಘಾತ ಮತ್ತು ಮೆದುಳಿನ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆಂದು ನಗರದ ಎಲ್’ಪಿಎಸ್ ಇನ್ ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ವರದಿ ನೀಡಿದೆ.

ನಗರದಲ್ಲಿ ಕಳೆದ 15 ದಿನಗಳಿಂದ ಕನಿಷ್ಠ ಉಷ್ಣಾಂಶ 4ರಿಂದ 6 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ತೀವ್ರ ಚಳಿಯಿಂದಾಗಿ ರಕ್ತದೊತ್ತಡದಲ್ಲಿ ಏರುಪೇರಾಗಿ, ರಕ್ತ ಹೆಪ್ಪುಗಟ್ಟಿ ಮಿದುಳು ಹಾಗೂ ಹೃದಯಾಘಾತ ಸಂಭವಿಸುತ್ತಿದೆ. ಚಳಿಯಿಂದಾಗಿ ಕೇವಲ ವೃದ್ದರಷ್ಟೇ ಅಲ್ಲದೆ, ಮಧ್ಯವಯಸ್ಕರಿಗೂ ಹೃದಯ, ಮಿದುಳು ಆಘಾತ ಸಂಭವಿಸಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯ ಸಫ್ದರ್‍ಜಂಗ್‍ನಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ 15ರವರೆಗೆ ದೆಹಲಿಯಲ್ಲಿ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ದೆಹಲಿ ಸರ್ಕಾರದ ಸೂಚನೆಯಂತೆ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.
9ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರ್ಯಾಯ ತರಗತಿಗಳು ನಡೆಯಲಿವೆ. ರಜೆ ಇದ್ದರೂ ಶೈಕ್ಷಣಿಕ ಕಾರ್ಯಕ್ಷಮತೆ ಬಗ್ಗೆ ಗಮನಹರಿಸಲಾಗುವುದು ಎಂದು ದೆಹಲಿ ಶಿಕ್ಷಣ ನಿರ್ದೇಶನಾಲಯ ತಿಳಿಸಿದೆ.











Discussion about this post