ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮುಂಬರುವ ಚುನಾವಣೆಗೆ ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ- ಜೆಡಿಎಸ್ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ರಾಜಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್’ಗೆ ಬಿಜೆಪಿ ಬೆಂಬಲ ಎಂದು ಕೆಲವೆಡೆ ವರದಿ ಆಗಿದೆ. ಯಾವುದೇ ಕಾರಣಕ್ಕೂ ಆ ಪಕ್ಷದ ಜತೆ ಒಪ್ಪಂದ, ಮೈತ್ರಿ ಮಾಡಿಕೊಳ್ಳಲ್ಲ. ಬಿಜೆಪಿ ಜೊತೆ ಯಾವುದೇ ಚರ್ಚೆ ಆಗಿಲ್ಲ, ಮುಂದೆಯೂ ಆಗಲ್ಲ ಎಂದರು.
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನಿಲ್ಲಲಿ, ಬೇರೆ ಕಡೆ ನಿಲ್ಲಲಿ. ನಾವೇನು ಬಿಜೆಪಿ ಜತೆ ಸೇರಿ ಅವರ ವಿರುದ್ಧ ಕುತಂತ್ರ ಮಾಡಬೇಕಿಲ್ಲ. ಬಿಜೆಪಿಯವರಂತೆ ಸಣ್ಣ ಮಟ್ಟದದಲ್ಲಿ ನಾನು ಮಾತನಾಡುವುದಿಲ್ಲ. ನಾವು ಏನೇ ಮಾಡಿದರೂ ಸೋಲಿಸುವುದು, ಗೆಲ್ಲಿಸುವುದು ನಮ್ಮ ಕೈಯಲ್ಲಿ ಇರುವುದಿಲ್ಲ. ನಮಗೆ ಕೋಲಾರದಲ್ಲಿ ಸಮಸ್ಯೆಯೇ ಇಲ್ಲ. ಪಕ್ಷದ ಅಭ್ಯರ್ಥಿ ಯಾರು ಅನ್ನುವ ನಿರ್ಣಯ ಆಗಿದೆ. ಬೇರೆ ಪಕ್ಷದ ಜತೆ ಸೇರಿ ತಂತ್ರಗಾರಿಕೆ ಮಾಡುವಂತದೇನೂ ಇಲ್ಲ ಎಂದು ಅವರು ಹೇಳಿದರು.
ಸಿದ್ದರಾಮಯ್ಯರನ್ನು ಅವರ ಪಕ್ಷದವರೇ ಸೋಲಿಸುತ್ತಾರೆ
ಸಿದ್ದರಾಮಯ್ಯ ಅವರೇ ಆಗಲಿ, ಇನ್ನೊಬ್ಬರೇ ಬರಲಿ, ನಮಗೆ ಹೆದರಿಕೆ ಇಲ್ಲ. ಕೋಲಾರದಲ್ಲಿ ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಹೀಗೆ ಹೇಳಿದ ಕೂಡಲೇ ಸಿದ್ದರಾಮಯ್ಯ ಬಗ್ಗೆ ನಾವು ಸಾಫ್ಟ್ ಅಂತ ಅಲ್ಲ. ಎಲ್ಲರ ರೀತಿ ನಾವು ವೀರಾವೇಶದಿಂದ ಮಾತನಾಡುವುದು ಪ್ರಯೋಜನ ಇಲ್ಲ. ಎಲ್ಲಿ ಎನು ಕೆಲಸ ಮಾಡಬೇಕೊ ಮಾಡುತ್ತೇವೆ. ಸಿದ್ದರಾಮಯ್ಯ ಅವರನ್ನು ನಾವು ಸೋಲಿಸಬೇಕಿಲ್ಲ, ಅವರ ಪಕ್ಷದವರೇ ಸೋಲಿಸುತ್ತಾರೆ ಎಂದು ಬಗ್ಗೆ ಎಚ್’ಡಿಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಇವರು ಕೇಸರಿ ಬಣ್ಣ ಬಳಿಯುತ್ತಾರೆ, ಇನ್ನೊಬ್ಬರು ಬಂದು ಇನ್ನೊಂದು ಬಣ್ಣ ಬಳಿಯುತ್ತಾರೆ. ಶಾಲೆಗಳಿಗೆ ಕೇಸರಿ ಬಣ್ಣ ಹಚ್ಚುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್’ಡಿಕೆ , ಇವರು (ಬಿಜೆಪಿ) ಬಂದಿದ್ದಾರೆ ಕೇಸರಿ ಬಣ್ಣ ಹಚ್ಚುತ್ತಿದ್ದಾರೆ. ಮುಂದೆ ಬರುವವರು ಇನ್ನೊಂದು ಬಣ್ಣ ಹಚ್ಚುತ್ತಾರೆ. ಒಬ್ಬಬ್ಬೊರು ಒಂದೊಂದು ಬಣ್ಣ ಹಚ್ತಾರೆ. ಕಲಿಕೆಗೆ ಪ್ರಾಮುಖ್ಯತೆ ಕೊಡಬೇಕಿದೆ ಎಂದರು.
ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಒಡೆಯೋದೇ ಕೆಲಸ. ಬಿಜೆಪಿಯವರಿಗೆ ಕಟ್ಟಿ ಅಭ್ಯಾಸ ಇಲ್ಲ. ಜನ ಇವರ ಹೇಳಿಕೆಗಳನ್ನು ಗಮನಿಸಬೇಕು. ಜನಕ್ಕೆ ನೆರಳು ಕೊಡೋದು ಮುಖ್ಯ. ನೆರಳು ಕೊಡೋದು ಯಾವುದಾದ್ರೇನು? ಎಂದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post